ಗೋಪಾಲ ಗೌಡ ಬಡಾವಣೆಯಲ್ಲಿ ಪಾಲಿಕೆ ನಿವೇಶನಗಳ ಅತಿಕ್ರಮಣ ತೆರವಿಗೆ ಒತ್ತಾಯಿಸಿ ಬಡಾವಣೆ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದಿಂದ ಡಿಸಿ ಗುರುದತ್ತ ಹೆಗಡೆ ಅವರಿಗೆ ಮನವಿ ಸಲ್ಲಿಸಲಾಯಿತು. ಜಿ.ಡಿ.ಮಂಜುನಾಥ್, ಟಿ.ಡಿ.ಗೀತೇಂದ್ರ ಗೌಡ, ಎ.ಪಿ.ಜಯಣ್ಣ, ಆರ್.ರಾಜಶೇಖರ್, ಜಿ.ಎಸ್.ಶಿವಕುಮಾರ್ ಇತರರಿದ್ದರು. 
ನ್ಯೂಸ್

ಸರ್ಕಾರಿ ಜಾಗ ಅತಿಕ್ರಮಣ ತೆರವಿಗೆ ಬಡಾವಣೆ ನಿವಾಸಿಗಳ ಮನವಿ

ಶಿವಮೊಗ್ಗ: ಗೋಪಾಲಗೌಡ ಬಡಾವಣೆಯಲ್ಲಿ ಮಹಾನಗರ ಪಾಲಿಕೆ ಹಾಗೂ ಖಾಸಗಿ ನಿವೇಶನಗಳ ಅತಿಕ್ರಮಣ ತೆರವುಗೊಳಿಸಲು ಒತ್ತಾಯಿಸಿ ಬಡಾವಣೆ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳು ಮತ್ತು ನಿವಾಸಿಗಳು ಬುಧವಾರ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.

ಪಾಲಿಕೆ 17ನೇ ವಾರ್ಡ್‌ನ ಗೋಪಾಲ ಗೌಡ ಬಡಾವಣೆಯ ಭಾರ್ಗವಿ ಪೆಟ್ರೋಲ್ ಬಂಕ್ ಹಿಂಭಾಗದಲ್ಲಿ ಪಾಲಿಕೆಗೆ ಸೇರಿದ ಖಾಲಿ ನಿವೇಶನಗಳಿವೆ. ಅದಕ್ಕೆ ಹೊಂದಿಕೊಂಡಂತೆ ಪಾಲಿಕೆ ಕಸ ವಿಲೇವಾರಿ ಘಟಕ ತೆರೆದಿದೆ. ಇಲ್ಲಿ ಉಳಿದ ಜಾಗಕ್ಕೆ ಯಾವುದೇ ತಡೆಗೋಡೆ ನಿರ್ಮಿಸಿಲ್ಲ. ಇದನ್ನು ಗಮನಿಸಿದ ಕೆಲವು ಮಾಜಿ ಜನಪ್ರತಿನಿಧಿಗಳು, ಪ್ರಭಾವಿಗಳು, ಹಾಲಿ ಜನಪ್ರತಿನಿಧಿಗಳ ಕುಮ್ಮಕ್ಕಿನಿಂದ ಆಸ್ತಿ ಕಬಳಿಸಲು ಹೊರಟಿದ್ದಾರೆ ಎಂದು ದೂರಿದರು.
ಹಾಗಾಗಿ ಪಾಲಿಕೆಗೆ ಸೇರಿದ ಈ ಜಾಗವನ್ನು ಉಳಿಸಿಕೊಳ್ಳಬೇಕು. ಒತ್ತುವರಿ ಮಾಡಿದವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಬೇಕು. ಪಾಲಿಕೆ ಆಸ್ತಿಗೆ ಸಂಬಂಧಿಸಿ ನಕಲಿ ದಾಖಲೆಗಳನ್ನು ಸೃಷ್ಟಿಸುವವರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಬೇಕು ಮತ್ತು ಆ ಜಾಗದಲ್ಲಿ ಸಾರ್ವಜನಿಕ ಉದ್ದೇಶಕ್ಕಾಗಿ ಪಾರ್ಕ್ ಅಥವಾ ಕ್ರೀಡಾಂಗಣ ನಿರ್ಮಿಸಬೇಕು ಎಂದು ಆಗ್ರಹಿಸಿದರು.
ಪ್ರಮುಖರಾದ ಜಿ.ಡಿ.ಮಂಜುನಾಥ್, ಟಿ.ಡಿ.ಗೀತೇಂದ್ರ ಗೌಡ, ಎ.ಪಿ.ಜಯಣ್ಣ, ಆರ್.ರಾಜಶೇಖರ್, ಜಿ.ಎಸ್.ಶಿವಕುಮಾರ್, ಬಿ.ಆರ್.ರವಿ, ರುದ್ರಪ್ಪ, ಇ.ಟಿ.ಕಿರಣ್‌ಕುಮಾರ್, ಎಂ.ಬಿ.ರವಿಕುಮಾರ್, ಬಸವರಾಜ್, ಮುರಳಿ, ಪ್ರಜ್ವಲ್, ಸುಧಾಕರ್ ಶೆಟ್ಟಿ, ಕೆ.ಪಿ.ಸುಬ್ಬಣ್ಣ, ಎಚ್.ಆರ್.ಮಹೇಂದ್ರ, ಸತೀಶ್‌ಚಂದ್ರ, ಅಜಯ್, ಅರವಿಂದ್, ಶಿವಾನಂದ್ ಇತರರಿದ್ದರು.