ಶಿವಮೊಗ್ಗ: ಕಳೆದೆರಡು ದಿನಗಳಿಂದ ಜಿಲ್ಲೆಯಲ್ಲಿ ವ್ಯಾಪಕ ಮಳೆಯಾಗುತ್ತಿದೆ. ನದಿಗಳು ಅಪಾಯ ಮಟ್ಟ ಮೀರಿ ಹರಿಯುತ್ತಿವೆ. ನದಿ, ಹಳ್ಳಗಳು ಉಕ್ಕಿ ಹರಿಯುತ್ತಿರುವ ಪರಿಣಾಮ ಕೃಷಿ ಜಮೀನುಗಳು ಜಲಾವೃತವಾಗಿವೆ. ಲಿಂಗನಮಕ್ಕಿ ಜಲಾಶಯ ಭರ್ತಿಯಾಗಲು ಇನ್ನು ಐದು ಅಡಿ ಮಾತ್ರ ಬಾಕಿ ಇದೆ. ವ್ಯಾಪಕ ಮಳೆ ಹಿನ್ನೆಲೆಯಲ್ಲಿ ಸೋಮವಾರ ಜಿಲ್ಲೆಯ ಎಲ್ಲ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿತ್ತು.
ಭಾನುವಾರ ಬೆಳಗ್ಗೆಯಿಂದ ಸೋಮವಾರ ಬೆಳಗ್ಗೆ 8 ಗಂಟೆವರೆಗೆ ಜಿಲ್ಲೆಯಲ್ಲಿ ಸರಾಸರಿ 41.67 ಮಿ.ಮೀ ಮಳೆಯಾಗಿದೆ. ಪ್ರಮುಖ ಜಲಾಶಯಗಳ ನೀರಿನ ಒಳಹರಿವು ಭಾರಿ ಹೆಚ್ಚಳವಾಗಿದೆ. ಲಿಂಗನಮಕ್ಕಿ ಜಲಾಶಯಕ್ಕೆ 50 ಸಾವಿರ ಕ್ಯೂಸೆಕ್‌ಗೂ ಅಧಿಕ, ತುಂಗಾ ಡ್ಯಾಂಗೆ 70 ಸಾವಿರ ಕ್ಯೂಸೆಕ್‌ಗೂ ಅಧಿಕ ಹಾಗೂ ಭದ್ರಾ ಜಲಾಶಯಕ್ಕೆ 34 ಸಾವಿರ ಕ್ಯೂಸೆಕ್‌ಗೂ ಹೆಚ್ಚು ನೀರು ಹರಿದುಬರುತ್ತಿದೆ. ಜಲಾಶಯಗಳಿಂದ ನೀರು ಹೊರಬಿಟ್ಟಿರುವ ಪರಿಣಾಮ ನದಿಗಳು ಮೈದುಂಬಿ ಹರಿಯುತ್ತಿವೆ.
ತೀರ್ಥಹಳ್ಳಿಯಲ್ಲಿ ತುಂಗಾ ನದಿ ಮಧ್ಯೆ ಇರುವ ರಾಮ ಮಂಟಪ, ಶಿವಮೊಗ್ಗದ ಕೋರ್ಪಳಯ್ಯನ ಛತ್ರದ ಸಮೀಪವಿರುವ ಮಂಟಪ ಸೋಮವಾರ ಮುಳುಗಿದ್ದವು. ಭದ್ರಾವತಿಯಲ್ಲಿ ಹೊಸ ಸೇತುವೆ ಬಳಿ ಭದ್ರಾ ನದಿ ಉಕ್ಕಿ ಹರಿಯಿತು. ತುಂಗಾ-ಭದ್ರಾ ನದಿಗಳ ಸಂಗಮ ಕೂಡ್ಲಿಯಲ್ಲಿ ಹಲವು ಪ್ರದೇಶ ಜಾಲಾವೃತವಾಗಿತ್ತು.
ಹೊಸನಗರ ತಾಲೂಕಿನ ಮಾಣಿ ಡ್ಯಾಂ ವ್ಯಾಪ್ತಿಯಲ್ಲಿ 238 ಮಿ.ಮೀ ಮಳೆಯಾಗಿದೆ. ಯಡೂರಿನಲ್ಲಿ 200, ಹುಲಿಕಲ್‌ನಲ್ಲಿ 220, ಮಾಸ್ತಿಕಟ್ಟೆಯಲ್ಲಿ 204, ಚಕ್ರಾ ವ್ಯಾಪ್ತಿಯಲ್ಲಿ 150, ಸಾವೇಹಕ್ಲು ಭಾಗದಲ್ಲಿ 179 ಮಿ.ಮೀ ಮಳೆಯಾಗಿದೆ.
ಮಾಣಿ ಡ್ಯಾಂಗೆ 9,353 ಕ್ಯೂಸೆಕ್ ನೀರಿನ ಒಳಹರಿವಿತ್ತು. ಪಿಕಪ್ ಡ್ಯಾಂಗೆ 3,726 ಕ್ಯೂಸೆಕ್, ಚಕ್ರಾ 3,623 ಕ್ಯೂಸೆಕ್, ಸಾವೆಹಕ್ಲು ಡ್ಯಾಂಗೆ 3,226 ಕ್ಯೂಸೆಕ್ ನೀರು ಒಳಹರಿವು ಇತ್ತು. ಹೊಸನಗರದಲ್ಲಿ ಅತಿ ಹೆಚ್ಚು 72.50 ಮಿ.ಮೀ, ಭದ್ರಾವತಿಯಲ್ಲಿ ಅತಿ ಕಡಿಮೆ 13.20 ಮಿ.ಮೀ ಮಳೆ ದಾಖಲಾಗಿದೆ. ಶಿವಮೊಗ್ಗದಲ್ಲಿ 22.40, ತೀರ್ಥಹಳ್ಳಿ 63.80, ಸಾಗರ 64.90, ಶಿಕಾರಿಪುರ 18.70 ಹಾಗೂ ಸೊರಬದಲ್ಲಿ 36.20 ಮಿ.ಮೀ ಮಳೆ ಬಿದ್ದಿದೆ.