ನ್ಯೂಸ್

ಟಿಕೆಟ್ ಪಾಲಿಟಿಕ್ಸ್​ಗೆ ಮೀಸಲು ಟ್ವಿಸ್ಟ್; ರಾಜ್ಯ ಸರ್ಕಾರದ ಮೀಸಲು ಅಸ್ತ್ರ ಬಳಿಕ ಬದಲಾದ ರಾಜಕೀಯ ಚಿತ್ರಣ

ಬೆಂಗಳೂರು: ವಿಧಾನಸಭೆ ಚುನಾವಣೆಗೆ ರಾಜಕೀಯ ಪಕ್ಷಗಳು ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ಚುರುಕುಗೊಳಿಸಿರುವ ಬೆನ್ನಲ್ಲೇ ರಾಜ್ಯ ಸರ್ಕಾರದ ‘ಮೀಸಲು ಅಸ್ತ್ರ’ ರಾಜಕೀಯ ಚದುರಂಗದ ಚಿತ್ರ ಬದಲಿಸಿದೆ. ಪರಿಶಿಷ್ಟ ಜಾತಿ, ಪಂಗಡದ ಮೀಸಲು ಪ್ರಮಾಣ ಹೆಚ್ಚಳ, ಒಳ ಮೀಸಲು ನೀಡುವ ನಿರ್ಣಯ, ಒಕ್ಕಲಿಗ, ಲಿಂಗಾಯತರಿಗೆ ಮೀಸಲು ಏರಿಕೆಯ ನಿರ್ಧಾರವು ಈ ಚುನಾವಣೆಯಲ್ಲಿ ಪ್ರಮುಖ ವಿಷಯವಾಗುತ್ತಿರುವುದರಿಂದ ರಣಕಣದ ಸ್ವರೂಪ ಕೂಡ ಬದಲಾಗುವುದು ನಿಚ್ಚಳವಾಗಿದೆ.

ಬದಲಾದ ಪರಿಸ್ಥಿತಿಗೆ ಅನುಗುಣವಾಗಿ ಕ್ಷೇತ್ರದ ಅಖಾಡ ಸಜ್ಜುಗೊಳಿಸುವುದು ಹಾಗೂ ಜಾತಿ ಸಮೀಕರಣದ ಆಧಾರದಲ್ಲಿ ಉಮೇದುವಾರರನ್ನು ಆಯ್ಕೆ ಮಾಡುವುದು ಮೂರು ಪಕ್ಷಗಳಿಗೆ ಪ್ರಧಾನ ಕಾರ್ಯಸೂಚಿಯಾಗಿದೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ವಸ್ತುಸ್ಥಿತಿಯ ತುರ್ತು ಸಮೀಕ್ಷೆಗೆ ಮೊರೆಹೋಗಿವೆ.

ಸರ್ಕಾರ ಕೈಗೊಂಡ ನಿರ್ಧಾರ ಆಯಾ ಜಾತಿ, ಸಮುದಾಯಗಳ ಮೇಲೆ ಯಾವ ರೀತಿ ಪರಿಣಾಮ ಬೀರಬಹುದು? ಒಲವು ಯಾವ ರೀತಿ ವ್ಯಕ್ತವಾಗಬಹುದೆಂಬ ಹಿಮ್ಮಾಹಿತಿಯನ್ನು ಪಕ್ಷದ ಜಾಲದಲ್ಲಿ ಹಾಗೂ ಖಾಸಗಿ ಸಂಸ್ಥೆಗಳ ಮೂಲಕ ಪಡೆದುಕೊಳ್ಳುವ ಕಾರ್ಯ ಆರಂಭಿಸಿವೆ.

ಪ್ರಸ್ತುತ ಕಾಂಗ್ರೆಸ್ 124 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಪ್ರಕಟಿಸಿ, ಉಳಿದ 100 ಕ್ಷೇತ್ರಗಳಿಗೆ ಸಂಭಾವ್ಯರ ಪರಿಶೀಲನಾ ಕಾರ್ಯ ಕೈಗೆತ್ತಿಕೊಂಡಿದೆ. ಜೆಡಿಎಸ್ ಮೊದಲ ಸುತ್ತಿನಲ್ಲಿ 93 ಅಭ್ಯರ್ಥಿಗಳನ್ನು ಪ್ರಕಟಿಸಿ, ಎರಡನೇ ಪಟ್ಟಿ ಸಿದ್ಧಮಾಡಿಟ್ಟುಕೊಂಡಿದೆ. ಬಿಜೆಪಿ ಏಪ್ರಿಲ್ ಮೊದಲ ವಾರದಲ್ಲಿ ಪಟ್ಟಿ ಬಿಡುಗಡೆಗೆ ತಯಾರಿ ಆರಂಭಿಸಿದೆ. ಇಷ್ಟರ ನಡುವೆ ವಸ್ತುಸ್ಥಿತಿ ಸಮೀಕ್ಷೆಯಲ್ಲಿ ಬರುವ ಮಾಹಿತಿ ಅಭ್ಯರ್ಥಿಗಳ ಆಯ್ಕೆಯಲ್ಲಿ ನಿರ್ಣಾಯಕವಾಗಿರಲಿದೆ. ಬದಲಾದ ಪರಿಸ್ಥಿತಿ, ಜಾತಿ-ವರ್ಗವಾರು ಲೆಕ್ಕಾಚಾರದ ಸಾಧಕ-ಬಾಧಕದ ಮಾಹಿತಿ ಕ್ರೋಡೀಕರಿಸಿ ಸಲ್ಲಿಕೆಯಾಗುವ ವರದಿ ಆಧಾರದಲ್ಲಿ ಪಕ್ಷದ ಅಭ್ಯರ್ಥಿಗಳ ಪಟ್ಟಿ ಫೈನಲ್ ಮಾಡುವ ಚಿಂತನೆಯಿದೆ. ಜಿಲ್ಲಾ ಕೋರ್ ಕಮಿಟಿಗಳು ಸಭೆ ನಡೆಸಿ ಕಳುಹಿಸಲಿರುವ ಪಟ್ಟಿ ಹಾಗೂ ವಸ್ತುಸ್ಥಿತಿ ಸಮೀಕ್ಷಾ ವರದಿಗೆ ಸಾಮಿಪ್ಯದಲ್ಲಿದೆಯೆ? ಎಂದು ಖಚಿತಪಡಿಸಿಕೊಳ್ಳಲು ನೆರವಾಗಲಿದೆ. ಟಿಕೆಟ್​ಗಾಗಿ ಆಕಾಂಕ್ಷಿಗಳ ಪೈಪೋಟಿ, ಕೆಲವೆಡೆ ಹಾಲಿ ಶಾಸಕರಿಗೆ ಟಿಕೆಟ್ ನೀಡುವುದಕ್ಕೆ ತೀವ್ರ ವಿರೋಧ ಹಾಗೂ ಅಸಮಾಧಾನ ಸರಿದೂಗಿಸುವ ಸವಾಲಿದೆ.

ಮಿಷನ್ 150 ಗುರಿ ಸಾಧನೆಯಲ್ಲಿ ಅಭ್ಯರ್ಥಿಗಳ ಆಯ್ಕೆ ಪ್ರಧಾನವಾಗಿದೆ. ಪ್ರತಿಪಕ್ಷಗಳ ದೌರ್ಬಲ್ಯದ ಲಾಭ ಪಡೆಯುವುದು ರಣತಂತ್ರದ ಭಾಗವಾಗಿದೆ. ಗೆಲ್ಲುವ ಸಾಮರ್ಥ್ಯ ಉಳ್ಳವರಿಗೆ ಮಣೆ ಹಾಕುವುದು ನಿಶ್ಚಿತ. ಆದರೆ ಜಾತಿ ಸಮೀಕರಣ, ಪ್ರಾತಿನಿಧ್ಯದ ನೆಲೆಯಲ್ಲಿ ಈ ಸಮೀಕ್ಷೆ ಮಹತ್ವದ್ದಾಗಿರಲಿದೆ ಎಂದು ಮೂಲಗಳು ತಿಳಿಸಿವೆ.

ಏಪ್ರಿಲ್ ಮೊದಲ ವಾರದಲ್ಲಿ ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಪ್ರಕಟವಾಗಲಿದೆ. ಅಥಣಿ ಕ್ಷೇತ್ರದ ಟಿಕೆಟ್ ಹಂಚಿಕೆಯಲ್ಲಿ ಯಾವುದೇ ರೀತಿಯ ಗೊಂದಲ ಇಲ್ಲ. ರಾಷ್ಟ್ರೀಯ ಪಕ್ಷದಲ್ಲಿ ಟಿಕೆಟ್ ಆಕಾಂಕ್ಷಿಗಳಿರುವುದು ಸಾಮಾನ್ಯ. ರ್ಚಚಿಸಿ ಪರಿಹರಿಸಿಕೊಳ್ಳುತ್ತೇವೆ. | ಬಸವರಾಜ ಬೊಮ್ಮಾಯಿ ಸಿಎಂ

ಬಿಜೆಪಿ ಸಮೀಕ್ಷೆ

ವೀರಶೈವ-ಲಿಂಗಾಯತ ಸಮುದಾಯವನ್ನು ಮತ್ತೆ ವಿಶ್ವಾಸಕ್ಕೆ ತೆಗೆದುಕೊಳ್ಳಲು ಕಾಂಗ್ರೆಸ್​ನ ಮೊದಲ ಪಟ್ಟಿ ಬಿಂಬಿಸಿದರೆ, ಒಕ್ಕಲಿಗರ ಮೇಲಿನ ಹಿಡಿತ ಬಿಗಿಗೊಳಿಸಲು ಜೆಡಿಎಸ್ ಹವಣಿಸಿರುವುದು ವೇದ್ಯವಾಗಿದೆ. ಹೀಗಾಗಿ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳುವಂತ ಟಿಕೆಟ್ ಹಂಚಿಕೆ ಬಿಜೆಪಿ ಪಾಲಿಗೆ ಸವಾಲಾಗಿದೆ. ವೀರಶೈವ-ಲಿಂಗಾಯತ ಸಮುದಾಯವನ್ನು ಭದ್ರಪಡಿಸಿಕೊಂಡು, ಒಕ್ಕಲಿಗರು ಹಾಗೂ ಇತರೆ ಹಿಂದುಳಿದ ವರ್ಗಗಳ ಒಲವು ಗಿಟ್ಟಿಸಿಕೊಳ್ಳಲು ಬಿಜೆಪಿ ಪ್ರಯತ್ನದ ಭಾಗವಾಗಿ ಮತ್ತೊಂದು ಸಮೀಕ್ಷೆಗೆ ಕೈಹಾಕಿದೆ ಎಂದು ಹೇಳಲಾಗುತ್ತಿದೆ. ಮೂರು ದಶಕದ ಹಳೆಯದಾದ ಮೀಸಲು ವರ್ಗೀಕರಣ ಬೇಡಿಕೆ ಈಡೇರಿಸಿ ದೊಡ್ಡ ಹೆಜ್ಜೆ ಇಟ್ಟಿದ್ದೇನೆ ಎಂದು ಸಂಭ್ರಮಿಸುತ್ತಿರುವ ಬಿಜೆಪಿಗೆ ಈಗ ತಲೆಯೆತ್ತಿರುವ ಅಪಸ್ವರ, ಪ್ರತಿಭಟನೆ ಹೀಗೆ ಮುಂದುವರಿದರೆ ತುಟ್ಟಿಯಾಗುವ ಆತಂಕ ಎದುರಿಸುತ್ತಿದೆ.

ಸಂಬಂಧಿಸಿದ ಸಮುದಾಯಗಳ ಎಲ್ಲ ಮುಖಂಡರನ್ನು ಸಂರ್ಪಸುತ್ತಿರುವ ಪಕ್ಷ ಅನಗತ್ಯ ಗೊಂದಲ ಬೇಡವೆಂದು ಮನವರಿಕೆ ಮಾಡಿಕೊಟ್ಟು ಊಹಾಪೋಹಗಳಿಗೆ ತೆರೆ ಎಳೆಯಲು ಕಸರತ್ತು ನಡೆಸಿದೆ. ಮೀಸಲು ವರ್ಗೀಕರಣ, ಲಿಂಗಾಯತ, ಒಕ್ಕಲಿಗರಿಗೆ ಮೀಸಲು ಪ್ರಮಾಣ ಹೆಚ್ಚಳ ರಾಜಕೀಯ ಲಾಭ ಪಡೆಯುವ ಉದ್ದೇಶವಲ್ಲ, ಸಾಮಾಜಿಕ ನ್ಯಾಯದ ಬದ್ಧತೆ ಎಂದು ಬಿಜೆಪಿ ಬಿಂಬಿಸಿಕೊಂಡಿದೆ. ಆದರೆ, ಚುನಾವಣೆ ಹೊತ್ತಿನಲ್ಲಿ ತೆಗೆದುಕೊಂಡ ನಿರ್ಧಾರಕ್ಕೆ ರಾಜಕೀಯ ಸೋಂಕು ಬಡಿದಿದೆ. ಇದರಿಂದಾಗಿ ಬಿಜೆಪಿ ಕೂಡ ಒಳ ಮೀಸಲು, ಮೀಸಲು ಹೆಚ್ಚಳ ಪ್ರಮಾಣದ ಅನುಪಾತಕ್ಕೆ ಅನುಸಾರವಾಗಿಯೇ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಅನಿವಾರ್ಯತೆಗೆ ಸಿಲುಕಿದೆ.

ಕಾಂಗ್ರೆಸ್ ಇಕ್ಕಟ್ಟು

124 ಕ್ಷೇತ್ರಗಳಿಗೆ ಕಾಂಗ್ರೆಸ್ ಅಭ್ಯರ್ಥಿ ಪ್ರಕಟಿಸಿದ ನಂತರ ಎಸ್ಸಿ ಮೀಸಲು ವರ್ಗೀಕರಣ, ಲಿಂಗಾಯತರು, ಒಕ್ಕಲಿಗರ ಮೀಸಲು ಪ್ರಮಾಣ ಹೆಚ್ಚಳ ತೀರ್ಮಾನ ಪ್ರಕಟವಾಗಿದೆ. ಹೀಗಾಗಿ ಈ 124 ಕ್ಷೇತ್ರಗಳಲ್ಲಿ ಆಗಬಹುದಾದ ಬದಲಾವಣೆ ಪಕ್ಷಕ್ಕೆ ಚಿಂತೆಯುಂಟುಮಾಡಿದೆ. ಪಕ್ಷದ ಆಂತರಿಕ ಸಭೆಯಲ್ಲೂ ಕೂಡ ಈ ಭಾವನೆ ವ್ಯಕ್ತವಾಗಿದೆ. ಇನ್ನೊಂದು ಸಂಗತಿ ಎಂದರೆ ಉಳಿದ 100 ಕ್ಷೇತ್ರಗಳಲ್ಲಿ ಎಲ್ಲರನ್ನೂ ಸಮಾಧಾನ ಪಡಿಸುವ ಜತೆಗೆ ಮೀಸಲು ಸವಾಲು ಸರಿದೂಗಿಸುವ ಇಕ್ಕಟ್ಟಿಗೆ ಸಿಲುಕಿದೆ. ಉದಾಹರಣೆಗೆ, ಬೆಂಗಳೂರು, ಬೆಂಗಳೂರು ಗ್ರಾಮಾಂತರ, ರಾಮನಗರ, ಮೈಸೂರು ಜಿಲ್ಲೆಗಳಲ್ಲಿ ಒಬ್ಬರೇ ಒಬ್ಬರು ಲಿಂಗಾಯತರಿಗೆ ಟಿಕೆಟ್ ಕೊಡದ ಸ್ಥಿತಿ ಪಕ್ಷಕ್ಕಿದೆ. ಮತ್ತೊಂದೆಡೆ ಆಡಳಿತ ಪಕ್ಷ ಲಿಂಗಾಯತರಿಗೆ ಶೇ.2 ಮೀಸಲು ಹೆಚ್ಚಿಸಿ ದಾಳ ಉರುಳಿಸಿದೆ. ಒಂದು ವೇಳೆ 28 ವಿಧಾನಸಭಾ ಕ್ಷೇತ್ರದಲ್ಲಿ ಒಬ್ಬರೇ ಒಬ್ಬರು ಲಿಂಗಾಯತರಿಗೆ ಟಿಕೆಟ್ ನೀಡದಿದ್ದಲ್ಲಿ ಇಡೀ ರಾಜ್ಯಕ್ಕೆ ಬೇರೆ ಸಂದೇಶ ರವಾನೆಯಾಗಲಿದೆ.

ಒಟ್ಟು 36 ಮೀಸಲು ಕ್ಷೇತ್ರಗಳ ಪೈಕಿ 22ಕ್ಕೆ ಈಗಾಗಲೇ ಅಭ್ಯರ್ಥಿಗಳನ್ನು ಘೋಷಿಸಲಾಗಿದೆ. ಈ ಪೈಕಿ ಬಲ (ಛಲವಾದಿ, ಉಪಜಾತಿ) 12, ಎಡ (ಮಾದಿಗ, ಉಪಜಾತಿ) 4, ಲಂಬಾಣಿ 4, ಭೋವಿ ಸಮುದಾಯದ ಇಬ್ಬರಿಗೆ ಅವಕಾಶ ನೀಡಲಾಗಿದೆ. ಅಂದರೆ, ಉಳಿದ 14 ಕ್ಷೇತ್ರಗಳಲ್ಲಿ ಸಿಂಹಪಾಲು ಮಾದಿಗ ಹಾಗೂ ಉಪ ಜಾತಿಗಳಿಗೆ ಸ್ಪರ್ಧಿಸಲು ಅವಕಾಶ ನೀಡುವ ಅನಿವಾರ್ಯತೆ ಸೃಷ್ಟಿಯಾಗಿದೆ. ಒಂದು ವೇಳೆ ಸಮನಾದ ಹಂಚಿಕೆಯಾಗದೇ ಇದ್ದರೆ, ಮಾನಸಿಕವಾಗಿ ಕಾಂಗ್ರೆಸ್ ದೂರ ಸರಿಯುತ್ತಿರುವ ಮಾದಿಗರು ಮುಂದಿನ ಚುನಾವಣೆಯಲ್ಲಿ ಸ್ಪಷ್ಟ ಗೆರೆ ಎಳೆದುಕೊಳ್ಳಲಿದ್ದಾರೆ ಎಂಬ ಅಭಿಪ್ರಾಯ ಪಕ್ಷದ ನಾಯಕರಲ್ಲೇ ಇದೆ. ಪಕ್ಷದ ಪರಂಪರಾಗತ ಮತಗಳು ಎದುರಾಳಿಗಳ ಒಂದೊಂದು ತೀರ್ವನದಿಂದಾಗಿ ವಿಭಜನೆಯಾಗುತ್ತಿರುವುದು ತಲೆನೋವಾಗಿ ಪರಿಣಮಿಸಿದೆ.