ಬೆಂಗಳೂರು: ಎಸ್ಸಿ-ಎಸ್ಟಿ ಮೀಸಲು ಪ್ರಮಾಣ ಹೆಚ್ಚಳ ಮಾಡಲು ಸರ್ಕಾರ ಒಂದು ಹೆಜ್ಜೆ ಮುಂದಿಡುತ್ತಿದ್ದಂತೆ ಉಳಿದ ಸಮುದಾಯಗಳು ಮೀಸಲು ಬುಟ್ಟಿಗೆ ಕೈಹಾಕಿ ಹೆಚ್ಚು ಪಾಲು ಪಡೆಯಲು ಅಥವಾ ಮೀಸಲು ಕೆಟಗರಿ ಬದಲಾವಣೆಗೆ ಸರ್ಕಾರದ ಮೇಲೆ ಒತ್ತಡ ಹೇರಲು ಯತ್ನಿಸಿವೆ. ಪಂಚಮಸಾಲಿ ಸಮುದಾಯ ಸರ್ಕಾರಕ್ಕೆ ಡಿ.19ರ ಗಡುವು ನೀಡಿದ್ದರೆ, ಕುರುಬ, ಈಡಿಗ, ಬಿಲ್ಲವ ಬಲಿಜ, ವಿಶ್ವಕರ್ಮ ಮೊದಲಾದ ಸಮುದಾಯಗಳೂ ಬೇಡಿಕೆ ಈಡೇರಿಕೆಗೆ ಗಡುವಿನ ಹೋರಾಟ ನಡೆಸಿವೆ. ಇನ್ನೊಂದೆಡೆ ರಾಜ್ಯದಲ್ಲಿ ಪ್ರಬಲ ಒಕ್ಕಲಿಗ ಸಮುದಾಯವೂ ಈಗಿರುವ ಮೀಸಲಾತಿ ಪ್ರಮಾಣವನ್ನು ಹೆಚ್ಚಿಸುವುದಕ್ಕೆ ಪ್ರಬಲವಾಗಿ ಹಕ್ಕೊತ್ತಾಯ ಮಂಡಿಸಿದೆ. ಮೀಸಲು ಬೇಡಿಕೆ ಇಟ್ಟ ಸಮುದಾಯಗಳೆಲ್ಲ ಸಂಕ್ರಾಂತಿ ವೇಳೆಗೆ ಸಿಹಿಸುದ್ದಿ ನಿರೀಕ್ಷೆಯಲ್ಲಿವೆ. ಒಟ್ಟಾರೆ ಸರ್ಕಾರ ಮತ್ತು ಆಡಳಿತಾರೂಢ ಬಿಜೆಪಿ ಪಾಲಿಗೆ ಚುನಾವಣೆ ಹೆಬ್ಬಾಗಿಲಲ್ಲಿ ‘ಮೀಸಲು ಸಂಕ್ರಮಣ’ ಎದುರಾಗಿದೆ.
ಒಕ್ಕಲಿಗ ಸಮುದಾಯದ ಮೀಸಲಾತಿ ಪ್ರಮಾಣ ಹೆಚ್ಚಳದ ಬೇಡಿಕೆ ಸಲುವಾಗಿ ದೊಡ್ಡ ಮಟ್ಟದಲ್ಲಿ ಒಗ್ಗೂಡಿದ್ದು, ಭಾನುವಾರ ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ನೇತೃತ್ವದಲ್ಲಿ ನಡೆದ ಮೀಸಲಾತಿ ಹೆಚ್ಚಳದ ರೂಪುರೇಷೆಯ ಪೂರ್ವಭಾವಿ ಸಭೆ ಮೀಸಲು ಪ್ರಮಾಣವನ್ನು ಹೆಚ್ಚಿಸಲು ಸರ್ಕಾರಕ್ಕೆ ಜ. 23ರ ಗಡುವು ನೀಡಲು ನಿರ್ಧರಿಸಿತು. ಕುವೆಂಪು ಕಲಾಕ್ಷೇತ್ರದಲ್ಲಿ ಆಯೋಜಿಸಲಾಗಿದ್ದ ಸಭೆಯಲ್ಲಿ ರಾಜ್ಯ ಸರ್ಕಾರದ ಪ್ರತಿನಿಧಿಯಾಗಿ ಆಗಮಿಸಿದ್ದ ಸಚಿವ ಆರ್. ಅಶೋಕ್ಗೆ ನಿರ್ಮಲಾನಂದನಾಥ ಸ್ವಾಮೀಜಿ ನೇತೃತ್ವದಲ್ಲಿ ಹಕ್ಕೊತ್ತಾಯ ಪತ್ರ ಸಲ್ಲಿಸಲಾಯಿತು.
ಸಭೆಯಲ್ಲಿ ಮಾತನಾಡಿದ ನಿರ್ಮಲಾನಂದನಾಥ ಸ್ವಾಮೀಜಿ, ಪ್ರವರ್ಗ ‘3ಎ’ ಅಡಿ ನೀಡಲಾಗುತ್ತಿರುವ ಶೇ. 4 ಮೀಸಲಾತಿ ಪ್ರಮಾಣವನ್ನು ಸಮುದಾಯದ ಜನಸಂಖ್ಯೆಗೆ ಅನುಗುಣವಾಗಿ ಶೇ.12ಕ್ಕೆ ಹೆಚ್ಚಿಸಬೇಕು. 2023ರ ಜ.23ರೊಳಗೆ ಸಮುದಾಯಕ್ಕೆ ಮೀಸಲಾತಿ ಕಲ್ಪಿಸಬೇಕು. ಸರ್ಕಾರಕ್ಕೆ ಮೀಸಲಾತಿ ಹಕ್ಕೊತ್ತಾಯ ಮನವಿಯನ್ನು ಸಲ್ಲಿಸಿದ್ದೇವೆ. ಆದಷ್ಟು ಬೇಗ ಪರಿಹಾರ ಒದಗಿಸಿಕೊಡಬೇಕು. ಜ.23ರಂದು ದೇವೇಗೌಡರು ಮತ್ತು ಎಸ್.ಎಂ.ಕೃಷ್ಣ ಅವರನ್ನು ಸನ್ಮಾನಿಸುವ ಹಾಗೂ ಬಾಲಗಂಗಾಧರನಾಥ ಸ್ವಾಮೀಜಿ ಅವರನ್ನು ಸ್ಮರಿಸುವ ಕಾರ್ಯಕ್ರಮವಿದೆ. ಅಷ್ಟರೊಳಗೆ ಸರ್ಕಾರ ನಮಗೆ ಸಿಹಿ ಸುದ್ದಿಯನ್ನು ನೀಡಬೇಕು. ಇಲ್ಲದಿದ್ದರೆ, ಮುಂದಿನ ಹೋರಾಟದ ಬಗ್ಗೆ ಈಗಾಗಲೇ ನೀಲಿನಕ್ಷೆ ಸಿದ್ಧಪಡಿಸಲಾಗಿದೆ ಎಂದರು.
ಪ್ರಾಮಾಣಿಕ ಯತ್ನ: ಆರೋಗ್ಯ ಸಚಿವ ಕೆ. ಸುಧಾಕರ್ ಮಾತನಾಡಿ, ಸಮುದಾಯದ ಜನಸಂಖ್ಯೆಗೆ ಅನುಗುಣವಾಗಿ ನ್ಯಾಯಸಮ್ಮತವಾಗಿ ಮೀಸಲಾತಿ ನೀಡಬೇಕಿದೆ. ಸಮುದಾಯದ ಹೋರಾಟಕ್ಕೆ ಸರ್ಕಾರ ಸಕಾರಾತ್ಮವಾಗಿ ಸ್ಪಂದಿಸಲಿದೆ. ನಮ್ಮ ಸರ್ಕಾರಕ್ಕೆ ಶ್ರೀಗಳು ಗಡುವು ಕೊಟ್ಟಿದ್ದಾರೆ. ಸಮಯದ ಗಡುವಿನೊಳಗೆ ಸರ್ಕಾರದ ಆಶಯ, ಕಾನೂನಿನ ತೊಡಕುಗಳು ಮತ್ತು ಸಾಧ್ಯಾ-ಸಾಧ್ಯತೆಗಳ ಬಗ್ಗೆ ಪರಿಶೀಲಿಸುವ ಜವಾಬ್ದಾರಿ ಸರ್ಕಾರದ ಮೇಲಿದೆ. ಸಮುದಾಯದ ಏಳೆಂಟು ಸಚಿವರು ಬಿಜೆಪಿ ಸರ್ಕಾರದಲ್ಲಿದ್ದಾರೆ. ನ್ಯಾಯ ಕೊಡಿಸುವ ಕೆಲಸವನ್ನು ಪ್ರಾಮಾಣಿಕವಾಗಿ ಮಾಡಲಾಗುವುದು ಎಂದರು. ಸಚಿವ ಕೆ.ಗೋಪಾಲಯ್ಯ, ಶಾಸಕ ಎಂ.ಕೃಷ್ಣಪ್ಪ, ಮಾಜಿ ಸಚಿವರು, ಮಾಜಿ ಶಾಸಕರು, ಸಾಹಿತಿಗಳು, ಸಂಘ-ಸಂಸ್ಥೆಗಳು, ರೈತ ಮುಖಂಡರು, ವಕೀಲರು, ವೈದ್ಯರು, ಶಿಕ್ಷಣ ತಜ್ಞರು, ರಾಜ್ಯ ಒಕ್ಕಲಿಗರ ಒಕ್ಕೂಟ ಟ್ರಸ್ಟ್ ಅಧ್ಯಕ್ಷ ಸಿ.ವಿ. ದೇವರಾಜು, ಸಂಘದ ನಿರ್ದೇಶಕರು ಮತ್ತಿತರರು ಇದ್ದರು.
ಒಕ್ಕಲಿಗ ಸಮುದಾಯ ಯಾರ ಹಕ್ಕನ್ನು ಕಿತ್ತುಕೊಳ್ಳುತ್ತಿಲ್ಲ. ನಮ್ಮ ಸಮುದಾಯಕ್ಕೆ ಬರಬೇಕಿದ್ದ ನ್ಯಾಯಯುತ ಪಾಲನ್ನು ಮಾತ್ರ ಕೇಳುತ್ತಿದ್ದೇವೆ. ಸಂವಿಧಾನದ ಆಶಯಕ್ಕೆ ವಿರುದ್ಧವಾಗಿ ನಡೆದುಕೊಳ್ಳಬಾರದು ಎಂಬ ಉದ್ದೇಶದಿಂದ ಈವರೆಗೆ ಎಲ್ಲವನ್ನೂ ಸಹಿಸಿಕೊಂಡು ಬರಲಾಗಿತ್ತು. ಕಟ್ಟಕಡೆಯ ಒಕ್ಕಲಿಗನಿಗೆ ನ್ಯಾಯ ಒದಗಿಸುವ ಕೆಲಸ ಮಾಡಬೇಕಾದ ಅನಿವಾರ್ಯ ಬಂದಿದೆ. | ಶ್ರೀ ನಂಜಾವಧೂತ ಸ್ವಾಮೀಜಿ, ಸ್ಪಟಿಕಪುರಿ ಮಠ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ನೇತೃತ್ವದಲ್ಲಿ ಹಿಂದೆ ನಡೆದ ಹೋರಾಟದ ಬಳಿಕ ಒಕ್ಕಲಿಗ ಸಮುದಾಯ ಒಗ್ಗಟ್ಟಿನಲ್ಲಿ ಹಿಂದೆ ಉಳಿದಿದೆ. ಒಕ್ಕಲಿಗರಿಗೆ ಮೀಸಲಾತಿ ಹೆಚ್ಚಳ ಸಂಬಂಧ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ನೇತೃತ್ವದಲ್ಲಿ ಕೇಂದ್ರದ ಮೇಲೆ ಒತ್ತಡ ಹೇರಲಾಗುವುದು. ಮೀಸಲಾತಿ ಎಂಬುದು ನಮಗೆ ಭಿಕ್ಷೆಯಲ್ಲ, ಇದು ನಮ್ಮ ಹಕ್ಕು. | ಡಿ.ವಿ.ಸದಾನಂದಗೌಡ, ಸಂಸದ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಕಲ್ಪಿಸುವುದು ಉತ್ತಮ. ಈಗ ಸಮುದಾಯಕ್ಕೆ ಇರುವ ಶೇ.4 ಮೀಸಲಾತಿಯಲ್ಲೂ ನಮಗೆ ಅನ್ಯಾಯವಾಗಿದೆ. ಸಮುದಾಯದ ಶೇ.80 ಜನರು ಆರ್ಥಿಕವಾಗಿ ಹಿಂದುಳಿದಿದ್ದಾರೆ. | ಶ್ರೀ ಚಂದ್ರಶೇಖರನಾಥ ಸ್ವಾಮೀಜಿ, ವಿಶ್ವ ಒಕ್ಕಲಿಗರ ಮಠ ಒಕ್ಕಲಿಗ ಸಮುದಾಯದ ಮೀಸಲಾತಿ ಹೆಚ್ಚಳ ಕುರಿತು ರಾಜ್ಯ ಸರ್ಕಾರವು, ಸಚಿವ ಸಂಪುಟದಲ್ಲಿ ಚರ್ಚೆ ಮಾಡಬೇಕು. ಪೂರ್ವಭಾವಿ ಸಭೆಯು ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಎಚ್ಚರಿಕೆ ಗಂಟೆ ಆಗಬೇಕು. ಸಭೆಯಲ್ಲಿ ತೆಗೆದುಕೊಳ್ಳುವ ತೀರ್ಮಾನಗಳ ಬಗ್ಗೆ ಸರ್ಕಾರ ಗಂಭೀರವಾಗಿ ಪರಿಗಣಿಸಲಿ. | ಸಿ.ಎನ್.ಬಾಲಕೃಷ್ಣ, ರಾಜ್ಯ ಒಕ್ಕಲಿಗರ ಸಂಘ ಅಧ್ಯಕ್ಷ
ಸಿಎಂ ಜತೆ ಚರ್ಚೆ: ಹಕ್ಕೊತ್ತಾಯ ಪತ್ರವನ್ನು ಸರ್ಕಾರದ ಗಮನಕ್ಕೆ ತರುತ್ತೇನೆ. ಒಕ್ಕಲಿಗ ಮೀಸಲಾತಿ ಪ್ರಮಾಣ ಹೆಚ್ಚಳ ಕುರಿತು ಸಿಎಂ ಬಸವರಾಜ ಬೊಮ್ಮಾಯಿ ಜತೆ ರ್ಚಚಿಸುತ್ತೇನೆ. ಕಾರ್ಯಕ್ರಮದ ವೇಳೆ ಆದಿಚುಂಚನಗಿರಿ ಶ್ರೀಗಳು ನನ್ನ ಜತೆ ಈಗಾಗಲೇ ಪ್ರಸ್ತಾಪ ಮಾಡಿದ್ದಾರೆ. ಮೀಸಲಾತಿ ಬಗ್ಗೆ ಇರುವ ಅಡೆ-ತಡೆಗಳನ್ನು ಅಧ್ಯಯನ ನಡೆಸುತ್ತೇವೆ. ತಜ್ಞರ ಜತೆ ರ್ಚಚಿಸುತ್ತೇವೆ. ಸರ್ಕಾರದ ಪರವಾಗಿ ಸಭೆಗೆ ಬಂದಿದ್ದೇನೆ. ಹೋರಾಟ ನೇತೃತ್ವವನ್ನು ಮೂರು ಪೀಠದ ಶ್ರೀಗಳು ವಹಿಸಿದ್ದಾರೆ. ಅವರ ಮಾರ್ಗದರ್ಶನ ದಲ್ಲಿ ನಾವೆಲ್ಲರೂ ನಡೆಯೋಣ ಎಂದು ಸಚಿವ ಆರ್. ಅಶೋಕ್ ಹೇಳಿದರು.
ಬೆಳಗಾವಿ: ಲಿಂಗಾಯತ ಪಂಚಮಸಾಲಿ ಸಮಾಜದ ಮಕ್ಕಳಿಗೆ ಶಿಕ್ಷಣ ಹಾಗೂ ಉದ್ಯೋಗದಲ್ಲಿ ಮೀಸಲಾತಿ ಕುರಿತಾದ ಹಿಂದುಳಿದ ವರ್ಗಗಳ ಆಯೋಗದ ವರದಿಯನ್ನು ಡಿ. 19ರೊಳಗೆ ಪಡೆದುಕೊಳ್ಳಬೇಕು. ಇಲ್ಲದಿದ್ದರೆ ಪಂಚಮಸಾಲಿ ಮೀಸಲಾತಿ ಹೋರಾಟ ತೀವ್ರರೂಪ ಪಡೆದುಕೊಳ್ಳಲಿದೆ ಎಂದು ಕೂಡಲಸಂಗಮದ ಪಂಚಮಸಾಲಿ ಸಮಾಜದ ಪೀಠಾಧಿಪತಿ ಬಸವಜಯ ಮೃತ್ಯುಂಜಯ ಸ್ವಾಮೀಜಿ ಎಚ್ಚರಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೀಸಲಾತಿಗಾಗಿ ಹಲವು ವರ್ಷಗಳಿಂದ ಹೋರಾಟ ನಡೆಸಿಕೊಂಡು ಬರುತ್ತಿದ್ದೇವೆ. ಆದರೆ, ಸರ್ಕಾರ ಭರವಸೆ ನೀಡುತ್ತ ದಿನ ಕಳೆಯುತ್ತಿದೆ. ಮತ್ತೊಂದೆಡೆ ಹಿಂದುಳಿದ ವರ್ಗಗಳ ಆಯೋಗವು 18 ತಿಂಗಳು ಕಳೆದರೂ ವರದಿ ಸಲ್ಲಿಸಿಲ್ಲ. ಸರ್ಕಾರವು ಕೂಡಲೇ ಆಯೋಗದಿಂದ ವರದಿ ಪಡೆದು ಮೀಸಲಾತಿ ಕುರಿತು ಅಂತಿಮ ನಿಲುವು ಪ್ರಕಟಿಸಬೇಕು. ಇಲ್ಲದಿದ್ದರೆ ಡಿಸೆಂಬರ್ 22ರಂದು ಸುವರ್ಣ ವಿಧಾನಸೌಧದ ಮುಂದೆ 25 ಲಕ್ಷ ಜನರನ್ನು ಸೇರಿಸಿ ಬೃಹತ್ ಪ್ರತಿಭಟನಾ ಸಮಾವೇಶ ನಡೆಸಲಾಗುವುದು ಎಂದರು. ಖಾನಾಪುರ ತಾಲೂಕಿನ ಗಂದಿಗವಾಡ ಗ್ರಾಮದಲ್ಲಿ ಪ್ರಥಮ ಬಾರಿಗೆ ಲಿಂಗಾಯತ ಪಂಚಮಸಾಲಿ ಬೃಹತ್ ಸಮಾವೇಶವನ್ನು ನ. 28ರಂದು ಮಧ್ಯಾಹ್ನ 2 ಗಂಟೆಗೆ ಹಮ್ಮಿಕೊಂಡಿದ್ದೇವೆ. ಸುಮಾರು 25 ಸಾವಿರು ಜನರು ಭಾಗವಹಿಸಲಿದ್ದಾರೆ ಎಂದರು.