ಬೆಂಗಳೂರು: ಹೊರ ಗುತ್ತಿಗೆ ನೇಮಕಾತಿಯಲ್ಲಿ ಮೀಸಲಾತಿ ಅಳವಡಿಸುವ ಬಗ್ಗೆ ರಾಜ್ಯ ಸರ್ಕಾರ ರಾಜ್ಯಪತ್ರ ಹೊರಡಿಸುವ ಮೂಲಕ ಅಧಿಕೃತ ಮುದ್ರೆ ಒತ್ತಿದೆ.
ಡಿ.21,2023 ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಹೊರಗುತ್ತಿಗೆ ನೇಮಕಾತಿಯಲ್ಲಿ ಮೀಸಲಾತಿ ನೀತಿ ಜಾರಿಗೊಳಿಸಲು ನಿರ್ಣಯಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ ನಡೆಯುವ ಎಲ್ಲ ಹೊರಗುತ್ತಿಗೆ ನೇಮಕಾತಿಯಲ್ಲಿ ಪ್ರಸ್ತುತ ಜಾರಿಯಲ್ಲಿರುವ ಮೀಸಲಾತಿ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ತಿಳಿಸಲಾಗಿದೆಯಲ್ಲದೆ, ಕೆಲವು ಸೂಚನೆಗಳನ್ನು ಪಾಲಿಸಲು ನಿರ್ದೇಶಿಸಲಾಗಿದೆ.
ರಾಜ್ಯಪತ್ರದಲ್ಲಿ ನೀಡಿರುವ ಸೂಚನೆಗಳು ಸರ್ಕಾರದ ಎಲ್ಲ ಇಲಾಖೆಗಳು/ಸ್ವಾಯತ್ತ ಸಂಸ್ಥೆಗಳು /ನಿಗಮಗಳು/ಮಂಡಳಿಗಳು/ವಿಶ್ವವಿದ್ಯಾವಿಲಯಗಳಿಗೂ ಅನ್ವಯಿಸುತ್ತದೆ.
*ಹೊರಗುತ್ತಿಗೆ ಮೀಸಲಾತಿಯು ನೀತಿಯು 45 ದಿನಗಳಿಗಿಂತ ಕಡಿಮೆ ಅವಧಿಯ ನೇಮಕಾತಿಗಳಿಗೆ ಅನ್ವಯಿಸುವುದಿಲ್ಲ.
*ಪ್ರತಿ ವರ್ಷವು ಹೊರ ಸಂಪನ್ಮೂಲ ಏಜಿನ್ಸಿಗಳಿಂದ ಕೆ.ಟಿ.ಪಿ.ಪಿ ಅಧಿನಿಯಮ 1999 ರಂತೆ ಟೆಂಡರ್ ಕರೆಯುವಾಗ ಕಡ್ಡಾಯವಾಗಿ ಮೀಸಲಾತಿಯಂತೆ ಸಿಬ್ಬಂದಿಗಳನ್ನು ಪಡೆಯಲು ಪರತ್ತುಗಳನ್ನು ನಮೂದಿಸುವುದು.
*ಹೊರಗುತ್ತಿಗೆ ನೇಮಕಾತಿಯಲ್ಲಿ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ/
ಹಿಂದುಳಿದ ವರ್ಗಗಳಿಗೆ ನಿಗದಿಪಡಿಸಿದ ಮೀಸಲಾತಿ ಪ್ರಮಾಣದಲ್ಲಿ ಕನಿಷ್ಟ ಶೇ.33 ರಷ್ಟು ಮಹಿಳೆಯರನ್ನು ನೇಮಕಾತಿ ಮಾಡಿಕೂಳ್ಳತಕ್ಕದ್ದು.
*ಟೆಂಡರ್ ಅಂಗೀಕರಿಸುವ ಪ್ರಾಧಿಕಾರವು ಕಡ್ಡಾಯವಾಗಿ ಹೊರ ಸಂಪನ್ಮೂಲ ಏಜಿನ್ಸಿಯು ಅಂತಿಮಗೊಳಿಸಿದ ಸಿಬ್ಬಂದಿಗಳ ಪಟ್ಟಿ ಮೀಸಲಾತಿಯಂತೆ ಇರುವ ಬಗ್ಗೆ ಖಚಿತಪಡಿಸಿಕೊಳ್ಳತಕ್ಕದ್ದು. ಜಾತಿ ಪ್ರಮಾಣ ಪತ್ರ ಮತ್ತು ಇತರೆ ದಾಖಲೆಗಳನ್ನು ಹೊರ ಸಂಪನ್ಮೂಲ ಏಜೆನ್ಸಿಯು ಪಡೆದು ನಿರ್ವಹಿಸತಕ್ಕದ್ದು. ಟೆಂಡರ್ ಅಂಗೀಕರಿಸುವ ಪ್ರಾಧಿಕಾರವು ಈ ಬಗ್ಗೆ ಪರಿಶೀಲಿಸಿ ಕಾರ್ಯಾದೇಶವನ್ನು ನೀಡಲು ಕ್ರಮವಹಿಸುವುದು(ಸಿಂಧುತ್ವ ಪ್ರಮಾಣ ಪತ್ರದ ಅಗತ್ಯವಿರುವುದಿಲ್ಲ).
*ಒಂದು ವೇಳೆ ನೇಮಕಾತಿಗೊಂಡ ಅಭ್ಯರ್ಥಿಗಳು ಕರ್ತವ್ಯಕ್ಕೆ ಹಾಜರಾಗದೇ ಇದ್ದಲ್ಲಿ/ಅರ್ಧದಲ್ಲಿ ಬಿಟ್ಟಿದಲ್ಲಿ ಅಂತಹ ಖಾಲಿ ಉಳಿಯುವ ಸ್ಥಾನವನ್ನು ಭರ್ತಿ ಮಾಡಲು ಅದೇ ಪ್ರವರ್ಗದ ಅಭ್ಯರ್ಥಿಗಳನ್ನು ನೇಮಿಸಿಕೊಳ್ಳಲು ಅಭ್ಯರ್ಥಿಗಳನ್ನು ಒದಗಿಸುವ ಏಜೆನ್ಸಿಯು ಕ್ರಮ ಕೈಗೊಳ್ಳತಕ್ಕದ್ದು.
*ಯಾವುದೇ ಇಲಾಖೆಯಲ್ಲಿ ಕನಿಷ್ಟ 20 ಅಭ್ಯರ್ಥಿಗಳನ್ನು ಹೊರಗುತ್ತಿಗೆ ಆಧಾರದ ಮೇಲೆ ನೇಮಕ ಮಾಡುವ ಸಂದರ್ಭದಲ್ಲಿ ಮಾತ್ರ ಮೀಸಲಾತಿ ನೀತಿಯನ್ನು ಜಾರಿಗೊಳಿಸತಕ್ಕದ್ದು.
*ಹೊರಗುತ್ತಿಗೆ ಆಧಾರದ ಮೇಲೆ ನೇಮಕ ಮಾಡುವ ಅಭ್ಯರ್ಥಿಯ ಕನಿಷ್ಟ ವಯೋಮಿತಿ 18 ವರ್ಷ ಮತ್ತು ಗರಿಷ್ಠ ವಯೋಮಿತಿ 60 ವರ್ಷಗಳಾಗಿರತಕ್ಕದ್ದು.
*ಸಾಮಾಜಿಕ ನ್ಯಾಯ ಮತ್ತು ಸಮಾನ ಉದ್ಯೋಗಾವಕಾಶಗಳನ್ನು ಒದಗಿಸುವ ದೃಷ್ಟಿಯಿಂದ ಹೊರಗುತ್ತಿಗೆ ನೇಮಕಾತಿಯಲ್ಲಿ ಮೀಸಲಾತಿ ಅಳವಡಿಸುತ್ತಿರುವುದರಿಂದ ಯಾವುದೇ ಕಾರಣಕ್ಕಾಗಿ ಹೊರಗುತ್ತಿಗೆ ನೌಕರರನ್ನು ಕಾಯಂ ಮಾಡಲು ಪರಿಗಣಿಸತಕ್ಕದ್ದಲ್ಲ.