ನ್ಯೂಸ್

ಪರಿಶಿಷ್ಟ ಜಾತಿಗೆ ಕಟುಕ ಸಮಾಜ ಸೇರಿಸಲು ಆಗ್ರಹ

Bengaluru - Political - Vilas Melagiri

ಬೆಂಗಳೂರು: ಕಟುಕ, ಕಟಿಕ ಮುಂತಾದ ಹೆಸರುಗಳಿಂದ ಕರೆಯಲ್ಪಡುವ ಸಮಾಜವನ್ನು ಪರಿಶಿಷ್ಟ ಜಾತಿಗೆ ಸೇರ್ಪಡೆ ಮಾಡುವ ಕುರಿತು ಸಚಿವ ಸಂಪುಟ ಸಭೆಯಲ್ಲಿ ಮಂಡಿಸಲಾಗುವುದು ಎಂದು ಮುಖ್ಯ ಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದರು.

ರಾಜ್ಯ ಕಟಿಕ ಸಮಾಜದ ನಿಯೋಗವು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ತಮ್ಮ ಸಮುದಾಯದ ಹಲವು ಬೇಡಿಕೆಗಳನ್ನು ಮುಂದಿಟ್ಟಾಗ ಈ ಪ್ರತಿಕ್ರಿಯೆ ನೀಡಿದರು.

ಕುರಿ, ಮೇಕೆ ಕಡಿಯುವುದು ಸಮಾಜದ ಕಸುಬು. ಹೀಗಾಗಿ ಕಟುಕ ಎನ್ನುವ ಹೆಸರೂ ಸಮಾಜಕ್ಕೆ ಅಂಟಿಕೊಂಡಿದ್ದು, ಸಾಮಾಜಿಕವಾಗಿ ಬಹಳ ಹಿಂದುಳಿದಿದೆ. ಕೇಂದ್ರಾಡಳಿತ ಪ್ರದೇಶದಲ್ಲಿ ಪರಿಶಿಷ್ಟ ಜಾತಿಗೆ ಕಟಿಕ ಸಮಾಜ ಸೇರಿಸಲ್ಪಟ್ಟಿದೆ. ದೆಹಲಿ, ರಾಜಸ್ತಾನ, ಉತ್ತರ ಪ್ರದೇಶ,ಮಹಾರಾಷ್ಟ್ರ ದಲ್ಲಿಯೂ ಪರಿಶಿಷ್ಟ ಜಾತಿಗೆ ಸೇರಿದೆ. 2012 ರ ಕುಲಶಾಸ್ತ್ರೀಯ ಅಧ್ಯಯನದಲ್ಲಿಯೂ ಸಮುದಾಯದ ಕುರಿತು ಸ್ಪಷ್ಟವಾಗಿ ನಮೂದಾಗಿದೆ. ಕರ್ನಾಟಕ ಕಟಿಕ ಸಮುದಾಯವನ್ನು ಪರಿಶಿಷ್ಟ ಜಾತಿಗೆ ಸೇರಿಸಲು ಶಿಫಾರಸ್ಸು ಮಾಡಲಾಗಿದೆ ಎಂದು ನಿಯೋಗ ವಿವರಿಸಿತು.

ಕಟಿಕ ಸಮುದಾಯವನ್ನು ಪರಿಶಿಷ್ಟ ಜಾತಿಗೆ ಸೇರ್ಪಡೆ ಮಾಡಲು ರಾಜ್ಯ ಸರ್ಕಾರ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡುವಂತೆ ಕಟಿಕ ಸಮಾಜದ ಮುಖಂಡ ಹಾಗೂ ವಿಧಾನ ಪರಿಷತ್ ಮಾಜಿ ಸದಸ್ಯ ಆರ್.ಕೆ.ಸಿದ್ರಾಮಣ್ಣ ಮನವಿ ಮಾಡಿದರು. ಮಾಜಿ ಶಾಸಕ ಎಚ್.ಎಂ.ರೇವಣ್ಣ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್ ಉಪಸ್ಥಿತರಿದ್ದರು.