ನ್ಯೂಸ್

ಕಾಯ್ದೆ ತಿದ್ದುಪಡಿ ವಿರೋಧಿಸಿ ರೈತರಿಂದ ಮನವಿ ಸಲ್ಲಿಕೆ

ಪಿರಿಯಾಪಟ್ಟಣ: ಭೂ ಸುಧಾರಣೆ ಕಾಯ್ದೆ ತಿದ್ದುಪಡಿ ವಿರೋಧಿಸಿ ರೈತ ಸಂಘದ ತಾಲೂಕು ಮುಖಂಡರು ಶಾಸಕ ಕೆ.ಮಹದೇವ್ ಅವರಿಗೆ ಸೋಮವಾರ ಮನವಿ ಸಲ್ಲಿಸಿದರು.

ಪಟ್ಟಣದ ಶಾಸಕರ ಕಚೇರಿಗೆ ಮೆರವಣಿಗೆಯಲ್ಲಿ ತೆರಳಿದ ರೈತ ಮುಖಂಡರು, ಕಚೇರಿ ಮುಂಭಾಗ ಜಮಾಯಿಸಿ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗುವ ಮೂಲಕ ಪ್ರತಿಭಟನೆ ನಡೆಸಿದರು.

ಸಂಘದ ತಾಲೂಕು ಅಧ್ಯಕ್ಷ ಪಿ.ಜೆ.ಶಿವಣ್ಣಶೆಟ್ಟಿ ಮಾತನಾಡಿ, ಯಾವುದೇ ತಿದ್ದುಪಡಿ ಅಥವಾ ಕಾಯ್ದೆ ಜಾರಿಗೆ ತರಬೇಕಾದರೆ ಸಾರ್ವಜನಿಕರ ಒಪ್ಪಿಗೆ ಇರಬೇಕು. ಆದರೆ ರಾಜ್ಯ ಸರ್ಕಾರ ಜನರ ಗಮನಕ್ಕೆ ತಾರದೆ ಕಾಯ್ದೆ ತಿದ್ದುಪಡಿಗೆ ಮುಂದಾಗಿದೆ. ಇದನ್ನು ಗಮನಿಸಿದರೆ ಉಳುವವನೇ ಭೂಮಿಯ ಒಡೆಯ ಎಂಬ ಪರಿಕಲ್ಪನೆಗೆ ತಿಲಾಂಜಲಿ ಇಟ್ಟಂತಾಗುತ್ತದೆ ಎಂದು ದೂರಿದರು.

ಕಾಯ್ದೆ ವಿರೋಧಿಸಿ ಸದನದಲ್ಲಿ ದನಿ ಎತ್ತಬೇಕು ಹಾಗೂ ರೈತ ಹೋರಾಟಕ್ಕೆ ಬೆಂಬಲ ನೀಡಬೇಕು ಎಂದು ಆಗ್ರಹಿಸಿದರು. ರೈತ ಮುಖಂಡರಿಂದ ಮನವಿ ಸ್ವೀಕರಿಸಿ ಮಾತನಾಡಿದ ಶಾಸಕ ಕೆ.ಮಹದೇವ್, ಈ ಸಂಬಂಧ ಸದನದಲ್ಲಿ ಚರ್ಚಿಸಿ ಆಕ್ಷೇಪ ವ್ಯಕ್ತಪಡಿಸುವುದಾಗಿ ಭರವಸೆ ನೀಡಿದರು.

ಸಂಘದ ತಾಲೂಕು ಪ್ರಧಾನ ಕಾರ್ಯದರ್ಶಿ ಕೆ.ಎಸ್.ಸ್ವಾಮಿಗೌಡ, ಗೌರವಾಧ್ಯಕ್ಷ ಕೆ.ಜಿ.ಪ್ರಕಾಶ್‌ರಾಜೇ ಅರಸ್, ಉಪಾಧ್ಯಕ್ಷ ಟಿ.ಸಿ.ಶ್ರೀನಿವಾಸ್, ಖಜಾಂಚಿ ಕೃಷ್ಣೆಗೌಡ, ಸಂಚಾಲಕರಾದ ಜವರೇಗೌಡ, ಬಿ.ಪಿ.ಸ್ವಾಮಿ, ತಾಪಂ ಸದಸ್ಯ ಎಸ್.ರಾಮು ಮತ್ತಿತರರು ಉಪಸ್ಥಿತರಿದ್ದರು.