ನ್ಯೂಸ್

ಒಳಮೀಸಲಾತಿ ವರದಿ ಶೀಘ್ರ ಸಲ್ಲಿಕೆಗೆ ಮೊರೆ | Delegation met Justice

ಬೆಂಗಳೂರು: ಪರಿಶಿಷ್ಟ ಜಾತಿಗಳ ಮೀಸಲು ವರ್ಗೀಕರಣಕ್ಕೆ ಶಿಾರಸು ಮಾಡಿದ ವರದಿಯನ್ನು ಸರ್ಕಾರಕ್ಕೆ ತ್ವರಿತವಾಗಿ ಸಲ್ಲಿಸಿ ಅನುಷ್ಠಾನಕ್ಕೆ ನೆರವಾಗಬೇಕು ಎಂದು ನ್ಯಾ.ಎಚ್.ಎನ್.ನಾಗಮೋಹನ್ ದಾಸ್ ಅವರಿಗೆ ಮಾಜಿ ಸಚಿವ ಎಚ್.ಆಂಜನೇಯ ಮನವಿ ಮಾಡಿದರು.

ಆಯೋಗದ ಕಚೇರಿಯಲ್ಲಿ ನ್ಯಾ.ಎಚ್.ಎನ್.ನಾಗಮೋಹನ್‌ದಾಸ್ ಅವರನ್ನು ಮಾಜಿ ಮಂತ್ರಿ ನೇತೃತ್ವದ ನಿಯೋಗ ಭೇಟಿಯಾಗಿ, ದೇಶದಲ್ಲೇ ಮಾದರಿಯಾದ ಎಸ್‌ಸಿ ಸಮಗ್ರ ಸಮೀಕ್ಷೆ ಪ್ರಕ್ರಿಯೆ ನಡೆಸಿದ್ದಕ್ಕಾಗಿ ಸನ್ಮಾನಿಸಿ ಗೌರವಿಸಿತು.

ಶೈಕ್ಷಣಿಕ, ಸಾಮಾಜಿಕ, ಆರ್ಥಿಕ ಪರಿಸ್ಥಿತಿ ಒಳಗೊಂಡು ಪರಿಶಿಷ್ಟ ಜಾತಿಗಳ ಸಮಗ್ರ ಸಮೀಕ್ಷಾ ಕಾರ್ಯ ಪೂರ್ಣಗೊಂಡಿದೆ. ಸಮುದಾಯಗಳ ಎಲ್ಲ ಜನಸಂಖ್ಯೆ ಮಾಹಿತಿ ನೀಡಲೆಂದು ಮೇ 5 ರಿಂದ ಜೂನ್ 30ರವರೆಗೆ ನಡೆಸಿದ್ದು, ಸಮೀಕ್ಷಾ ಕಾರ್ಯ ಮುಗಿದಿದೆ.

ಸಮುದಾಯಗಳು ನ್ಯಾಯಸಮ್ಮತ ಮೀಸಲು ಹಂಚಿಕೆಗೆ ಕಾಯುತ್ತಿವೆ. ದತ್ತಾಂಶಗಳ ಸಹಿತ ವರದಿ ಸಲ್ಲಿಸಿ, ತ್ವರಿತವಾಗಿ ಜಾರಿಗೆ ಅನುಕೂಲ ಮಾಡಿಕೊಡಬೇಕು. ಆಯೋಗದ ವರದಿ ಸಲ್ಲಿಸಿದ ತಕ್ಷಣ ಆದೇಶ ಹೊರಡಿಸುವುದಕ್ಕೆ ಸಿಎಂ ಸಿದ್ದರಾಮಯ್ಯ ಉತ್ಸುಕರಾಗಿದ್ದಾರೆ ಎಂದು ವಿನಂತಿಸಿತು.

ನಿಯೋಗದ ಆಹವಾಲು ಆಲಿಸಿದ ನ್ಯಾ.ಎಚ್.ಎನ್.ನಾಗಮೋಹನ್‌ದಾಸ್, ಸಂಗ್ರಹಿಸಿದ ಮಾಹಿತಿ ಮತ್ತು ದತ್ತಾಂಶಗಳ ವಿಶ್ಲೇಷಣೆ ಪ್ರಗತಿಯಲ್ಲಿದೆ. ಕಾಲಮಿತಿಯೊಳಗೆ ಸರ್ಕಾರಕ್ಕೆ ವರದಿ ಸಲ್ಲಿಸುವ ಭರವಸೆ ನೀಡಿದ್ದಾರೆ.

ಈ ಸಂದರ್ಭದಲ್ಲಿ ಮಾಜಿ ಸಂಸದ ಬಿ.ಎನ್.ಚಂದ್ರಪ್ಪ, ಮುಖಂಡರಾದ ಕೋಗಿಲು ವೆಂಕಟೇಶ, ಮುತ್ತುರಾಜು, ದೊಡ್ಡಗುಬ್ಬಿ ಸತೀಶ್, ಅನಿಲ್ ಕೋಟಿ, ದೇವದಾಸ್, ವಿವಿಧ ಸಮುದಾಯಗಳ ಮುಖಂಡರು ಇದ್ದರು.

ಮೂಲಗಳಿಂದ ಲಭ್ಯ ಮಾಹಿತಿಯಂತೆ 2011ರ ಜನಗಣತಿ ಪ್ರಕಾರ ಎಸ್‌ಸಿ ಜನಸಂಖ್ಯೆ 10474992, 2025ರ ಅಂದಾಜಿನ ಪ್ರಕಾರ 11667040, ಸಮೀಕ್ಷೆಯಲ್ಲಿ ಗಣತಿಯಾದ ಸಂಖ್ಯೆ 10737397 (ಶೇ.92.03).