ನ್ಯೂಸ್

ಉರಗ ಸಂರಕ್ಷಣೆ: ಬಿಎಂಟಿಸಿ ಚಾಲಕ ರಂಗನಾಥ್‌ಗೆ ಗೌರವ ಡಾಕ್ಟರೇಟ್

ಬೆಂಗಳೂರು: ಬಿಎಂಟಿಸಿಯಲ್ಲಿ ಚಾಲಕರಾಗಿ ಸೇವೆ ಸಲ್ಲಿಸುತ್ತಿರುವ ಕೆ.ರಂಗನಾಥ್ ಅವರಿಗೆ ಉರಗ ಸಂರಕ್ಷಣೆ ಕ್ಷೇತ್ರದಲ್ಲಿನ ಸೇವೆ ಪರಿಗಣಿಸಿ ಮಲೇಷಿಯಾದ ಅಮೇರಿಕನ್ ವಿಸ್ಡಮ್ ಪೀಸ್ ಯುನಿವರ್ಸಿಟಿಯು ಗೌರವ ಡಾಕ್ಟರೇಟ್ ಪದವಿಯನ್ನು ನೀಡಿದೆ.

ಈ ತಿಂಗಳ 19ರಂದು ಮಲೇಷಿಯಾದ ವಿವಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ‘ಸ್ನೇಕ್ ಹ್ಯಾಂಡಲಿಂಗ್ ಸ್ಕಿಲ್ ಟ್ರೇನರ್ ಸೋಷಿಯಲ್ ಸರ್ವೀಸ್’ಗಾಗಿ ರಂಗನಾಥ್ ಅವರಿಗೆ ಗೌರವ ಡಾಕ್ಟರೇಟ್ ವಿತರಿಸಿ ಸನ್ಮಾನಿಸಲಾಯಿತು.

ನಗರದಲ್ಲಿರುವ ಬಿಎಂಟಿಸಿಯ ಘಟಕ -35ರಲ್ಲಿ ಚಾಲಕರಾಗಿ ರಂಗನಾಥ್ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಕಳೆದ 14 ವರ್ಷಗಳಿಂದ ಸಂಸ್ಥೆಯಲ್ಲಿ ಚಾಲಕರಾಗಿ ಸೇವೆ ಸಲ್ಲಿಸುತ್ತಿರುವ ಇವರು ಕರ್ತವ್ಯದ ನಂತರದ ಬಿಡುವಿನ ವೇಳೆ ಸಾರ್ವಜನಿಕರ ಕೋರಿಕೆಯ ಮೇರೆಗೆ ಯಾವುದೇ ಸಮಯದಲ್ಲಿಯೂ ಕರೆದರೂ ಮನೆ, ಕಚೇರಿಗಳಲ್ಲಿ ಕಂಡು ಬರುವ ಹಾವುಗಳನ್ನು ಸೆರೆರಹಿಡಿದಿದ್ದಾರೆ. ಈವರೆಗೆ ಸುಮಾರು 4,552 ವಿವಿಧ ಜಾತಿಯ ಉರಗಗಳನ್ನು ಸಂರಕ್ಷಿಸಿದ್ದಾರೆ. ಜತೆಗೆ ಹಾವುಗಳ ಕುರಿತು ಜನರಿಗೆ ತಿಳಿವಳಿಕೆ ನೀಡಿ, ಧೈರ್ಯ ತುಂಬುವ ಕಾರ್ಯವನ್ನೂ ಮಾಡುವಲ್ಲಿ ತೊಡಗಿಸಿಕೊಂಡಿದ್ದಾರೆ.

ಈ ಹಿಂದೆ 2023ರಲ್ಲಿ ಇವರ ಉರಗುಗಳ ಸಂರಕ್ಷಣಾ ಕಾರ್ಯ ಗುರುತಿಸಿ ಏಷಿಯಾ ಇಂಟರ್ ನ್ಯಾಷನಲ್ ಕಲ್ಚರ್ ರಿಸರ್ಚ್ ಯುನಿವರ್ಸಿಟಿ (ಐಎಓ) ಸ್ನೇಕ್ ಹ್ಯಾಂಡಲಿಂಗ್ ಸ್ಕಿಲ್ ಸರ್ವಿಸ್‌ಗಾಗಿ ಗೌರವ ಡಾಕ್ಟರೇಟ್ ನೀಡಿ ಗೌರವಿಸಿತ್ತು. ಜತೆಗೆ ರಾಜ್ಯ ಮಟ್ಟವೂ ಸೇರಿ ಹಲವು ಸಂಘ ಸಂಸ್ಥೆಗಳು ಪ್ರಶಸ್ತಿ ನೀಡಿ ಗೌರವಿಸಿವೆ.

ಚಾಲಕ ರಂಗನಾಥ್‌ಗೆ ಗೌರವ ಡಾಕ್ಟರೇಟ್ ಸಂದಿರುವುದಕ್ಕೆ ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕರು ಅಭಿನಂದನೆ ಸಲ್ಲಿಸಿದ್ದಾರೆ.