ಶಿವಮೊಗ್ಗದಲ್ಲಿ ಮಲೆನಾಡು ವೀರಶೈವ ಲಿಂಗಾಯತ ಮಠಾಧೀಶರ ಪರಿಷತ್‌ನಿಂದ ಶುಕ್ರವಾರ ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ-ತೇಜಸ್ವಿನಿ ದಂಪತಿ ಸನ್ಮಾನಿಸಲಾಯಿತು. ಡಾ. ಶ್ರೀ ಮಲ್ಲಿಕಾರ್ಜುನ ಮುರುಘಾರಾಜೇಂದ್ರ ಸ್ವಾಮೀಜಿ, ಶ್ರೀ ರೇಣುಕಾನಂದ ಸ್ವಾಮೀಜಿ, ಎಸ್.ರುದ್ರೇಗೌಡ, ಡಾ. ಧನಂಜಯ ಸರ್ಜಿ, ಎಸ್.ಎಸ್.ಜ್ಯೋತಿಪ್ರಕಾಶ್ ಇದ್ದರು. 
ನ್ಯೂಸ್

ಸಾಧನೆಗಳ ಭಂಡಾರ ಬಿ.ವೈ.ರಾಘವೇಂದ್ರ: ಬೆಕ್ಕಿನಕಲ್ಮಠ ಶ್ರೀ

ಶಿವಮೊಗ್ಗ: ಜೀವನ ಎಂಬುದು ಮಹತ್ವದ ಕೊಡುಗೆ. ಅದರ ಸಾರ್ಥಕತೆ ಅಡಗಿರುವುದು ನಮ್ಮ ಸಾಧನೆಗಳಲ್ಲಿ. ಅಂತಹ ಸಾಧನೆಗಳ ಭಂಡಾರವೇ ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಆಗಿದ್ದಾರೆ ಎಂದು ಮಲೆನಾಡು ವೀರಶೈವ ಲಿಂಗಾಯತ ಮಠಾಧೀಶರ ಪರಿಷತ್ ಅಧ್ಯಕ್ಷ, ಬೆಕ್ಕಿನ ಕಲ್ಮಠದ ಡಾ. ಶ್ರೀ ಮಲ್ಲಿಕಾರ್ಜುನ ಮುರುಘಾರಾಜೇಂದ್ರ ಸ್ವಾಮೀಜಿ ಬಣ್ಣಿಸಿದರು.

ನಗರದ ಸರ್ಜಿ ಕನ್ವೆನ್ಷನ್ ಹಾಲ್‌ನಲ್ಲಿ ಮಲೆನಾಡು ವೀರಶೈವ ಲಿಂಗಾಯತ ಮಠಾಧೀಶರ ಪರಿಷತ್‌ನಿಂದ 50 ವಸಂತಗಳನ್ನು ಪೂರೈಸಿದ ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಅವರಿಗೆ ಸಾರ್ಥಕ ಸುವರ್ಣ ಅಭಿನಂದನೆ ಸಲ್ಲಿಸಿ ಆಶೀವರ್ಚನ ನೀಡಿದ ಅವರು, ಸಾಧನೆ ಎಂಬುದು ಯಾರಿಗೂ ಸುಮ್ಮನೆ ಬರಲ್ಲ. ಸಾಧನೆ ಎಲ್ಲರ ಸ್ವತ್ತೂ ಆಗಲ್ಲ. ಅದರಲ್ಲೂ ಜನಪ್ರತಿನಿಧಿಯಾಗಿ ಜನಮಾನಸದಲ್ಲಿ ಉಳಿಯುವಂತಹ ಅನೇಕ ಕೆಲಸಗಳನ್ನು ಮಾಡುವುದೂ ದೊಡ್ಡ ಸಾಧನೆ ಆಗಲಿದೆ ಎಂದರು.
ಸ್ವಾಮೀಜಿಗಳಿಗೆ ಜನರು ಸನ್ಮಾನ ಮಾಡುವುದು ಸಾಮಾನ್ಯ. ಆದರೆ ಸ್ವಾಮೀಜಿಗಳೇ ಒಬ್ಬ ಜನಪ್ರತಿನಿಧಿಯನ್ನು ಸನ್ಮಾನಿಸುವುದು ವಿಶೇಷಗಳಲ್ಲಿ ವಿಶೇಷ. ಹಾಗಾಗಿಯೇ ಇದೊಂದು ಭಾವ ಪೂರ್ವಕ, ಕೃತಜ್ಞತಾ ಪೂರ್ವಕವಾದ ಸಮಾರಂಭವಾಗಿದೆ. ಜನಮಾನಸದಲ್ಲಿ ಉಳಿಯುವಂತಹ ಸಮಾರಂಭವಾಗಿದೆ ಎಂದು ಬಣ್ಣಿಸಿದರು.
ಜೀವನದಲ್ಲಿ ಸಾರ್ಥಕ ಬದುಕು ನಮ್ಮದಾಗಬೇಕು. ಅಂತಹ ಬದುಕನ್ನು ರಾಘವೇಂದ್ರ ತೋರಿಸಿಕೊಟ್ಟಿದ್ದಾರೆ. ಆದರ್ಶ ಲೋಕಸಭಾ ಸದಸ್ಯ ಎಂಬ ಕಾರಣಕ್ಕೆ ಸನ್ಮಾನ ಮಾಡಲಾಗಿದೆಯೋ ವಿನಃ ಮಠಗಳಿಗೆ ಹಣ ನೀಡಿದ್ದಾರೆ ಎಂಬ ಕಾರಣಕ್ಕಲ್ಲ ಎಂದು ಸ್ಪಷ್ಟಪಡಿಸಿದರು.
ನಿಟ್ಟೂರು ನಾರಾಯಣಗುರು ಸಂಸ್ಥಾನದ ಶ್ರೀ ರೇಣುಕಾನಂದ ಸ್ವಾಮೀಜಿ, ಜಡೆ ಮಠದ ಡಾ. ಶ್ರೀ ಮಹಾಂತ ಸ್ವಾಮೀಜಿ, ಬಿಳಕಿ ಹಿರೇಮಠದ ಶ್ರೀ ರಾಚೋಟೇಶ್ವರ ಸ್ವಾಮೀಜಿ, ತೊಗರ್ಸಿಯ ಶ್ರೀ ಚನ್ನವೀರ ದೇಶಿಕೇಂದ್ರ ಸ್ವಾಮೀಜಿ ಸೇರಿ ಪರಿಷತ್‌ನ ವಿವಿಧ ಸ್ವಾಮೀಜಿಗಳು ಉಪಸ್ಥಿತರಿದ್ದರು. ರಾಯಚೂರಿನ ಹಿಂದುಸ್ತಾನಿ ಗಾಯಕ ಪಂಡಿತ್ ಅಂಬಯ್ಯನುಲಿ ಅವರು ವಚನ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು.

ವೀರಶೈವ ಸಮಾಜ ದೊಡ್ಡ ಆಲದಮರ
ವೀರಶೈವ ಸಮಾಜ ದೊಡ್ಡ ಆಲದಮರವಿದ್ದಂತೆ. ಇತರೆ ಸಣ್ಣಪುಟ್ಟ ಸಮಾಜಗಳನ್ನೂ ಒಟ್ಟಾಗಿ ಕೊಂಡೊಯ್ಯುವ ಜವಾಬ್ದಾರಿ ನಮ್ಮ ಸಮಾಜದ ಮೇಲಿದೆ ಎಂದು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಹೇಳಿದರು. ಸಾರ್ಥಕ ಸುವರ್ಣ ಅಭಿನಂದನೆ ಸ್ವೀಕರಿಸಿ ಮಾತನಾಡಿದ ಅವರು, ಈ ಸಾರ್ಥಕ ಸುವರ್ಣ ಸನ್ಮಾನವು ಕ್ಷೇತ್ರದ ಜನರಿಗೆ ಸಲ್ಲುವ ಗೌರವವಾಗಿದೆ. ರಾಜ್ಯದಲ್ಲಿ ಬೇರೆ ಸರ್ಕಾರವಿದ್ದರೂ ಶಿವಮೊಗ್ಗ ಕ್ಷೇತ್ರದ ಅಭಿವೃದ್ಧಿಗೆ ಸೇತುವೆಯಾಗಿ ನಿಲ್ಲುತ್ತೇನೆ. ಮುಂದೆಯೂ ನನ್ನ ಕಡೆ ಬೆರಳು ತೋರಿಸುವಂತೆ ಹಾಗೂ ಮತದಾರರಿಗೆ ಅವಮಾನ ಆಗುವಂತೆ ನಡೆದುಕೊಳ್ಳುವುದಿಲ್ಲ ಎಂದರು.

ಮೌಲ್ಯಗಳ ಸಂಗಮ ಬಿವೈಆರ್
ರಾಜಕೀಯ ಮತ್ತು ಧಾರ್ಮಿಕ ಮೌಲ್ಯಗಳ ಸುಂದರ ಸಂಗಮವೇ ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಎಂದು ಶರಣ ಸಾಹಿತ್ಯ ಪರಿಷತ್‌ನ ರಾಷ್ಟ್ರೀಯ ಅಧ್ಯಕ್ಷ ಡಾ. ಸಿ.ಸೋಮಶೇಖರ್ ಹೇಳಿದರು. ಧಾರ್ಮಿಕ ಮತ್ತು ರಾಜಕೀಯ ಮೌಲ್ಯಗಳು ಎಂಬ ವಿಷಯದ ಕುರಿತು ಉಪನ್ಯಾಸ ನೀಡಿದ ಅವರು, ರಾಘವೇಂದ್ರ ಅವರು ಜಿಲ್ಲೆಗೆ ಬಹಳಷ್ಟು ಕೊಡುಗೆ ನೀಡಿದ್ದಾರೆ. ರೈಲ್ವೆ, ಹೈವೇ, ವಿಮಾನ ನಿಲ್ದಾಣ, ನೀರಾವರಿ ಯೋಜನೆಗಳ ಮೂಲಕ ಅಭಿವೃದ್ಧಿಯ ಹೊಸ ಭಾಷ್ಯ ಬರೆದಿದ್ದಾರೆ. ಸಂಸ್ಕೃತಿ, ಕಲೆ ಪ್ರೀಯರೂ ಆಗಿದ್ದಾರೆ. ಬದುಕು ಎಂಬುದು ಅನುಭವ ಮಂಟಪವಾಗಿದ್ದು ಇಲ್ಲಿ ಪುರಸಭೆ ಸದಸ್ಯರಾಗಿ, ಶಾಸಕರಾಗಿ, ಮೂರು ಬಾರಿ ಲೋಕಸಭಾ ಸದಸ್ಯರಾಗಿ ರಾಘವೇಂದ್ರ ಅವರ ಸೇವೆ ಅನನ್ಯವಾಗಿದೆ ಎಂದರು.

ಅಭಿವೃದ್ಧಿಗೆ ಶಿವಮೊಗ್ಗ ಮಾದರಿ
ಕರ್ನಾಟಕದಲ್ಲಿ ಅಭಿವೃದ್ಧಿಗೆ ಶಿವಮೊಗ್ಗ ಮಾದರಿಯಾಗಿದೆ. ಅದಕ್ಕೆ ಕಾರಣ ಬಿ.ವೈ.ರಾಘವೇಂದ್ರ ಎಂಬುದು ಹೆಮ್ಮೆಯ ಸಂಗತಿಯಾಗಿದೆ ಎಂದು ಬಸವ ಕೇಂದ್ರದ ಡಾ. ಶ್ರೀ ಮರುಳಸಿದ್ಧ ಸ್ವಾಮೀಜಿ ಹೇಳಿದರು. ಪ್ರಾಸ್ತಾವಿಕ ಮಾತನಾಡಿದ ಅವರು, ಶಿವಮೊಗ್ಗದ ಸರ್ವತೋಮುಖ ಅಭಿವೃದ್ಧಿಗಾಗಿ ರಾಘವೇಂದ್ರ ಅವರು ಶ್ರಮಿಸಿದ್ದಾರೆ. ರಾಜ್ಯದ ಅಭಿವೃದ್ಧಿ ವಿಚಾರದಲ್ಲಿ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರು ಹೊಯ್ಸಳ ರಾಜರಾಗಿದ್ದರೆ, ಅವರ ಕೈಗೆಳಗಿರುವ ಬಿ.ವೈ.ರಾಘವೇಂದ್ರ ಅವರು ಶಿವಮೊಗ್ಗದಲ್ಲಿ ಜಕಣಾಚಾರಿ ಆಗಿ ಕೆಲಸ ಮಾಡಿದ್ದಾರೆ. ಒಬ್ಬ ರಾಜಕಾರಣಿಗೆ ಜಿಲ್ಲೆಯ ಎಲ್ಲ ಸಮಾಜದ ಮಠಾಧೀಶರು ಮತ್ತು ಎಲ್ಲ ಸಮಾಜದ ಕೆನೆಪದರುಗಳು ಒಟ್ಟಾಗಿ ಸನ್ಮಾನಿಸಿದ್ದು ವಿಶೇಷ ಎಂದರು.