ಚೇತನ್ - ಅದಿತಿ  
ನ್ಯೂಸ್

success story: ಪೆಟ್ರೋಲ್​, ಡೀಸೆಲ್​ ಮನೆಬಾಗಿಲಿಗೆ ಕೊಟ್ಟು 200ಕೋಟಿ ರೂ.ಸಾಮ್ರಾಜ್ಯ ಕಟ್ಟಿದ ದಂಪತಿ!

ಪುಣೆ: ವಾಹನಗಳಿಗೆ ಡೀಸೆಲ್​ - ಪೆಟ್ರೋಲ್​ ಅನ್ನು ಸಾಮಾನ್ಯವಾಗಿ ಬಂಕ್​ಗಳಲ್ಲಿ ಹಾಕಿಸುತ್ತೇವೆ. ಆದರೆ ಇಲ್ಲೊಂದು ಆ ದಂಪತಿ ವಿಭಿನ್ನವಾಗಿ ಆಲೋಚಿಸಿ ಗ್ರಾಹಕರ ಮನೆ ಬಾಗಿಲಿಗೆ ಪೆಟ್ರೋಲಿಯಂ ಉತ್ಪನ್ನಗಳನ್ನು ಸರಬರಾಜು ಮಾಡಿ 200ಕೋಟಿ ಸಾಮ್ರಾಜ್ಯದ ಒಡೆಯರಾಗಿದ್ದಾರೆ. ಪುಣೆಯ ಚೆತನ್​ ವಾಲುಂಜ್​ ಮತ್ತು ಅದಿತಿ ಭೋಸ್ಲೆ ಇಂತಹ ಸಾಧನೆ ತೋರಿದ ದಂಪತಿ, ಇವರ ಯಶೋಗಾಥೆ ಕಂಡು ರಾಷ್ಟ್ರದ ಖ್ಯಾತ ಉದ್ಯಮಿ ರತನ್​ ಟಾಟಾ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಹೌದು, ಸಾಧಿಸುವ ಛಲ ಮತ್ತು ಕಠಿಣ ಶ್ರಮವಿದ್ದರೆ ಅಸಾಧ್ಯವಾದದ್ದನ್ನೂ ಸಾಧಿಸಬಹುದು ಎನ್ನುವುದಕ್ಕೆ ಈ ದಂಪತಿ ಆದರ್ಶಪ್ರಾಯವಾಗಿ ನಿಲ್ಲುತ್ತಾರೆ. ಹಲವು ಸಂಸ್ಥೆಗಳು ಆಹಾರ, ತರಕಾರಿ, ಔಷಧ ಸೇರಿದಂತೆ ಹಲವು ವಸ್ತುಗಳನ್ನು ಡೋರ್​ ಡೆಲವರಿ ಮಾಡುತ್ತಿರುವುದನ್ನು ಕಂಡು ಫ್ಯೂಯೆಲ್​(ಡೀಸೆಲ್​ ಮತ್ತು ಪೆಟ್ರೋಲ್​)ನ್ನು ಸಹ ಅದೇ ರೀತಿ ಮಾರಾಟ ಮಾಡಬೇಕೆಂದು ಆಲೋಚಿಸಿ 'ರೆಪೋಸ್​ ಎನರ್ಜಿ'(ರೆಪೋಸ್​ ಮೊಬೈಲ್ ಪೆಟ್ರೋಲ್ ಪಂಪ್ ) ಸಂಸ್ಥೆ ಪ್ರಾರಂಭಿಸಿದ್ದಾರೆ.

ರಾಷ್ಟ್ರದಲ್ಲಿ ಸ್ಟಾರ್ಟಾಪ್ ಸಂಸ್ಕೃತಿ ಹೆಚ್ಚುತ್ತಿದ್ದು, ಇದಕ್ಕೆ ಪೂರಕವಾಗಿ ಹೊಸ ಉದ್ದಿಮೆಗಳು ಹುಟ್ಟಿಕೊಳ್ಳುತ್ತಿವೆ. ಸ್ವಿಗ್ಗಿ, ಜೊಮಾಟೊ ತರಹದ ವಾಹನ ಬಳಕೆದಾರರಿಗೆ ಅಗತ್ಯವಾದ ಡೀಸೆಲ್, ಪೆಟ್ರೋಲ್​ ಅನ್ನು ಮನೆ ಬಾಗಿಲಿಗೆ ಒದಗಿಸಿ 200 ಕೋಟಿ ರೂ.ಸಂಪಾದನೆ ಮಾಡಿದ್ದಾರೆ.

ಅದಿತಿಗೆ ಸ್ಟಾರ್ಟಾಪ್​ ಕನಸು: ಮದುವೆ ನಂತರ ಹೇಗಾದರೂ ಮಾಡಿ ಸ್ಟಾರ್ಟಾಪ್ ಸಂಸ್ಥೆ ಮಾಡಬೇಕೆಂದು ಕನಸು ಕಂಡಿದ್ದ ಅದಿತಿ, ಪತಿ ಜೊತೆ ಪುಣೆಯಲ್ಲಿ ರೆಪೋಸ್ ಎನರ್ಜಿ ಪ್ರಾರಂಭಿಸಿದರು. ಪ್ರಸ್ತುತ ದೇಶಾದ್ಯಂತ 65 ನಗರಗಳಿಗೆ ಇದರ ಬ್ರಾಂಚ್​ಗಳು ವಿಸ್ತರಿಸಿದ್ದು ವ್ಯಾಪಾರ-ವಹಿವಾಟಿನಲ್ಲಿ ಯಶಸ್ಸು ಕಂಡಿದ್ದಾರೆ.

ಪ್ರಾರಂಭದಲ್ಲಿ ಮಾಸಿಕ 70ಸಾವಿರ ರೂ.ವಹಿವಾಟು ನಡೆಯುತ್ತಿತ್ತು. ಆದರೆ ಈಗ 200ಕೊಟಿ ರೂ.ವಹಿವಾಟು ನಡೆಸುತ್ತಿರುವುದು ಪ್ರಮುಖ ವಾಣಿಜ್ಯೋದ್ಯಮಿಗಳು ಇತ್ತ ತಿರುಗಿ ನೋಡುವಂತೆ ಮಾಡಿದೆ. ಈ ದಂಪತಿಯ ಹೊಸ ಆಲೋಚನೆಗೆ ಮಂತ್ರಮುಗ್ಧರಾಗಿರುವ ದೇಶದ ಪ್ರಮುಖ ಉದ್ಯಮಿ ರತನ್​ ಟಾಟಾ 'ರೆಪೋಸ್​ ಎನರ್ಜಿ' ಸಂಸ್ಥೆಯಲ್ಲಿ ಹೂಡಿಕೆಗೆ ಮುಂದೆ ಬಂದಿದ್ದಾರೆ. ಹೀಗಾಗಿ ಸಂಸ್ಥೆ ಆದಾಯ ಕಳೆದ ವರ್ಷ 65 ಕೋಟಿ ರೂ,ಗಳಿಸಿದೆ.

'ರೆಪೋಸ್​ ಎನರ್ಜಿ' ಪ್ರಸ್ತುತ ಟಾಟಾ ಗ್ರೂಪ್​, ಮಹಿಂದ್ರಾ ಅಂಡ್​ ಮಹಿಂದ್ರಾ, ಜನರಲ್​ ಎಲೆಕ್ರಿಕಲ್​, ಲಾರೆನ್ಸ್​ ಅಂಡ್​ ಟಬ್ರೋ, ಷಿಂಡ್ಲರ್​, ಜೆಡಬ್ಲ್ಯೂ, ಮಾರಿಯಟ್​ ಹೋಟೆಲ್​, ಫೀನಿಕ್ಸ್​ ಮಾಲ್​, ದಿ ವೆಸ್ಟಿನ್​ ಹೋಟೆಲ್​ನಂಥ ಸಂಸ್ಥೆಗಳ ಜತೆ ಒಡಂಬಡಿಕೆ ಮಾಡಿಕೊಂಡಿದೆ.