ಶಿಕಾರಿಪುರ ತಾಲೂಕು ಕಚೇರಿಯಲ್ಲಿ ಲೋಕಾಯುಕ್ತ ಸಿಪಿಐ ಪ್ರಕಾಶ್ ಸಾರ್ವಜನಿಕರ ಅಹವಾಲು ಆಲಿಸಿದರು. ವಿವಿಧ ಇಲಾಖೆಗಳ ಅಧಿಕಾರಿಗಳು ಹಾಜರಿದ್ದರು. 
ನ್ಯೂಸ್

ಲೋಕಾಯುಕ್ತ ಪೊಲೀಸ್‌ಗೆ ಅಹವಾಲು

ಶಿಕಾರಿಪುರ: ಲೋಕಾಯುಕ್ತ ಸಿಪಿಐ ಪ್ರಕಾಶ್ ನೇತೃತ್ವದಲ್ಲಿ ಸೋಮವಾರ ತಾಲೂಕು ಕಚೇರಿ ಸಭಾಂಗಣದಲ್ಲಿ ಸಾರ್ವಜನಿಕರಿಂದ ಅಹವಾಲು ಆಲಿಸಿ ಅರ್ಜಿ ಸ್ವೀಕರಿಸಲಾಯಿತು. ನಂತರ ಮಾತನಾಡಿದ ಲೋಕಾಯುಕ್ತ ಸಿಪಿಐ ಪ್ರಕಾಶ್, ನಮಗೆ ವಿವಿಧ ಇಲಾಖೆಗಳ ಹಲವು ಸಮಸ್ಯೆಗಳ ಬಗ್ಗೆ ಎಂಟು ಅರ್ಜಿಗಳು ಬಂದಿದ್ದು, ಇದರಲ್ಲಿ ಜಯಕರ್ನಾಟಕ ಜನಪರ ವೇದಿಕೆ ಕೂಡ ಹಲವು ಸಮಸ್ಯೆಗಳ ಬಗ್ಗೆ ಅರ್ಜಿ ಸಲ್ಲಿಸಿದೆ. ಅವುಗಳನ್ನು ಸೂಕ್ತ ಕ್ರಮಕ್ಕಾಗಿ ಸಂಬಂಧಿಸಿದ ಇಲಾಖೆಗಳಿಗೆ ಕಳುಹಿಸಲಾಗುತ್ತದೆ. ಜನತೆ ಸಮಸ್ಯೆಗಳ ಬಗ್ಗೆ ಶೀಘ್ರವಾಗಿ ಪರಿಹಾರ ನೀಡಲು ಕೋರಲಾಗುತ್ತದೆ ಎಂದರು.

ಜಯಕರ್ನಾಟಕ ಜನಪರ ವೇದಿಕೆ ಅಧ್ಯಕ್ಷ ಶಿವಯ್ಯ ಎಸ್. ಶಾಸಿ ಮಾತನಾಡಿ, ಸರ್ಕಾರಿ ಕಚೇರಿಗಳಲ್ಲಿ ಸಹ ಸರಿಯಾದ ಸಮಯ ಪಾಲನೆ ಆಗುತ್ತಿಲ್ಲ. ಜನಸಾಮಾನ್ಯರಿಗೆ ಅಧಿಕಾರಿಗಳು ಸಮಸ್ಯೆಗಳಿಗೆ ಸರಿಯಾದ ಉತ್ತರ ನೀಡುತ್ತಿಲ್ಲ. ಸರ್ಕಾರಿ ಕಚೇರಿ ಮತ್ತು ಆವರಣಗಳಲ್ಲಿ ಸ್ವಚ್ಛತೆ ಇಲ್ಲ. ಶೌಚಗೃಹ ವಿಷಯದಲ್ಲಿ ಕಡೆಗಣನೆ ಮಾಡಲಾಗುತ್ತಿದೆ. ಈ ಸಮಸ್ಯೆಗಳನ್ನು ಪರಿಶೀಲಿಸಿ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.

ಇಲಾಖೆಗಳಲ್ಲಿ ಎಲ್ಲರೂ ಕನ್ನಡವನ್ನೇ ಬಳಸಬೇಕು. ಸರ್ವೇ ಆಫೀಸಿನಲ್ಲಿ ಹಣ ಕಟ್ಟಿದ ಮೇಲೆ ನಿಗದಿತ ದಿನಾಂಕದಂದು ಬಂದಾಗ ಬೆಳೆ ಇದ್ದರೆ ಸರ್ವೇ ಮಾಡುವುದಿಲ್ಲ. ಇದರಿಂದ ರೈತರಿಗೆ ಬಹಳ ಕಷ್ಟವಾಗುತ್ತದೆ. ಕೆಲವು ಎಲ್ಲ ಸರ್ಕಾರಿ ಇಲಾಖೆ ಅಧಿಕಾರಿಗಳು ಗುರುತಿನ ನಾಮಫಲಕ, ಐಡಿ ಕಾರ್ಡ್ ಧರಿಸುತ್ತಿಲ್ಲ ಎಂದು ದೂರಿದರು.