ಅರಕಲಗೂಡು ಪಪಂ ವಿಶೇಷ ಸಭೆಯಲ್ಲಿ ಅಧ್ಯಕ್ಷ ಪ್ರದೀಪ್‌ಕುಮಾರ್ ಮಾತನಾಡಿದರು. ಬಸವರಾಜ ಟಾಕಪ್ಪ ಶಿಗ್ಗಾವಿ, ಸುಬಾನ ಷರೀಫ್ ಇದ್ದರು. 
ನ್ಯೂಸ್

ಉದ್ಯಾನಕ್ಕೆ ಮೀಸಲಾದ ಜಾಗ ಕುರಿತು ವರದಿ ನೀಡಿ

ಅರಕಲಗೂಡು: ಪಟ್ಟಣದಲ್ಲಿ ಪಾರ್ಕ್‌ಗಳಿಗೆ ಮೀಸಲಾದ ಜಾಗದ ಕುರಿತು ಪರಿಶೀಲಿಸಿ ಎರಡು ದಿನಗಳಲ್ಲಿ ವರದಿ ನೀಡುವಂತೆ ಪಪಂ ಅಧ್ಯಕ್ಷ ಪ್ರದೀಪ್‌ಕುಮಾರ್ ಮುಖ್ಯಾಧಿಕಾರಿಗೆ ಸೂಚನೆ ನೀಡಿದರು.

ಪಪಂ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ವಿಶೇಷ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಉದ್ಯಾನಕ್ಕಾಗಿ ಮೀಸಲಿರಿಸಿದ ಜಾಗಗಳಲ್ಲಿ ಕೆಲವರು ಮನೆ ನಿರ್ಮಿಸಿಕೊಂಡಿರುವ ಕುರಿತು ಸಾರ್ವಜನಿಕರಿಂದ ದೂರುಗಳು ಬಂದಿದೆ. ಯಾವ, ಯಾವ ಬಡಾವಣೆಯಲ್ಲಿ ಎಷ್ಟೆಷ್ಟು ಜಾಗವನ್ನು ಉದ್ಯಾನಕ್ಕಾಗಿ ಮೀಸಲಿರಿಸಿದೆ. ಅದರ ಸ್ಥಿತಿ, ಗತಿಗಳ ಕುರಿತು ಪರಿಶೀಲಿಸಿ ವರದಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದರು. 2025-26ನೇ ಸಾಲಿನ ವಿವಿಧ ಬಾಬುಗಳ ವಾರ್ಷಿಕ ಹರಾಜಿನ ಅಂತಿಮ ಬಿಡ್ ಅನುಮೋದನೆಗೆ ಸಭೆಯಲ್ಲಿ ಮಂಡಿಸಲಾಯಿತು. ವಾರದ ಸಂತೆ, ದಿನವಹಿ ಸುಂಕ, ಮಾಂಸ, ಕೋಳಿ, ಮೀನು, ಶುದ್ಧ ಕುಡಿಯುವ ನೀರಿನ ಘಟಕ ನಿರ್ವಹಣೆ ಕುರಿತು ಹರಾಜು ಪ್ರಕ್ರಿಯೆ ನಡೆದಿದ್ದು ಜಿಎಸ್‌ಟಿ ತೆರಿಗೆಯಿಂದ ಶೇ.29.43 ಲಕ್ಷ ರೂ. ಆದಾಯ ಬಂದಿದೆ ಎಂದು ಸಭೆಗೆ ಮಾಹಿತಿ ನೀಡಲಾಯಿತು.

ಸದಸ್ಯ ರಮೇಶ್ ವಾಟಾಳ್ ಹರಾಜು ಪ್ರಕ್ರಿಯೆ ಕುರಿತು ಆಕ್ಷೇಪ ವ್ಯಕ್ತಪಡಿಸಿ, ವಾರದ ಸಂತೆ, ದಿನವಹಿ ಸುಂಕ, ಸೇರಿದಂತೆ ಕೆಲವು ಬಾಬುಗಳ ಹರಾಜು ಪ್ರಕ್ರಿಯೆ ಎರಡು, ಮೂರು ಬಾರಿ ನಡೆದರೂ ಹೆಚ್ಚಿನ ಮೊತ್ತಕ್ಕೆ ಬಿಡ್ ಆಗಿಲ್ಲ. ಪಪಂ ಅದಾಯ ಹೆಚ್ಚುವಂತೆ ನಿಗಾವಹಿಸಬೇಕು ಎಂದು ಆಗ್ರಹಿಸಿದರು.

ನಿಗದಿ ಪಡಿಸಿದ ಮೊತ್ತಕ್ಕಿಂತ ಕಡಿಮೆ ದರಕ್ಕೆ ಹರಾಜು ಕೂಗಿದ ಪ್ರಕರಣಗಳಲ್ಲಿ ಮರು ಹರಾಜು ಮಾಡಲಾಗಿದೆ. ಯಾರು ಬಿಡ್ ಮಾಡಲು ಮುಂದೆ ಬರದಿದ್ದಾಗ ಬಂದ ಹೆಚ್ಚಿನ ಮೊತ್ತಕ್ಕೆ ಅಂತಿಮಗೊಳಿಸಲಾಗಿದೆ ಎಂದು ಅಧ್ಯಕ್ಷ ಪ್ರದೀಪ್‌ಕುಮಾರ್ ಉತ್ತರಿಸಿದರು. ಈ ಹಂತದಲ್ಲಿ ಸಭೆಯಲ್ಲಿ ಕೆಲಕಾಲ ಬಿರುಸಿನ ವಾಗ್ವಾದ ನಡೆಯಿತು. ಸಭೆಯಲ್ಲಿ ತೀರ್ಮಾನಿಸಿದ ವಿಷಯಗಳ ಕುರಿತು ಸಭೆಯಲ್ಲಿ ನಡವಳಿ ಪುಸ್ತಕದಲ್ಲಿ ದಾಖಲಿಸಿ ಸಭೆಗೆ ತಿಳಿಸಬೇಕು ಎಂದು ರಮೇಶ್ ಒತ್ತಾಯಿಸಿದರು.

ವಾಣಿಜ್ಯ ಮಳಿಗೆ ಹರಾಜು, 32 ವಸತಿ ಗೃಹಗಳ ಕುರಿತು ನ್ಯಾಯಾಲಯದಲ್ಲಿರುವ ಪ್ರಕರಣಗಳಿಗೆ ಸಂಬಂಧಿಸಿದಂತೆ ಹಣ ವ್ಯಯವಾಗುತ್ತಿದೆ, ಈ ಕುರಿತು ಗಮನ ಹರಿಸಿ ಕ್ರಮ ಕೈಗೊಳ್ಳುವಂತೆ ಸದಸ್ಯ ರಮೇಶ್ ವಾಟಾಳ್ ಆಗ್ರಹಿಸಿದರು. ಅಂಬೇಡ್ಕರ್ ಹಾಗೂ ವಾಜಪೇಯಿ ವಸತಿ ಯೋಜನೆಯಡಿ ಮನೆ ನಿರ್ಮಿಸಿಕೊಂಡಿರುವ ಫಲಾನುಭವಿಗಳಿಗೆ 2022ರಿಂದ ಹಣ ಬಿಡುಗಡೆಯಾಗಿಲ್ಲ, ಗಮನ ಹರಿಸಿ ಕ್ರಮ ಕೈಗೊಳ್ಳುವಂತೆ ಸದಸ್ಯೆ ಎಚ್.ಎಸ್.ರಶ್ಮಿ ಆಗ್ರಹಿಸಿದರು.

ಸದಸ್ಯರಾದ ಅನಿಕೇತನ್, ಕೃಷ್ಣಯ್ಯ, ಹೂವಣ್ಣ, ಸುಮಿತ್ರಾ ಚರ್ಚೆಯಲ್ಲಿ ಭಾಗವಹಿಸಿದ್ದರು. ಉಪಾಧ್ಯಕ್ಷ ಸುಬಾನ್ ಷರೀಫ್, ಮುಖ್ಯಾಧಿಕಾರಿ ಬಸವರಾಜ ಟಾಕಪ್ಪ ಶಿಗ್ಗಾವಿ ಇದ್ದರು.