ಸ್ಯಾಂಡಲ್ವುಡ್ 2026 ಮೊದಲರ್ಧ
Sandalwood First Half -
ಸಿನಿಮಾ ನೋಡಿದ ಬಳಿಕ ಪ್ರೇಕ್ಷಕರು ಮೊದಲರ್ಧ ನಿಧಾನ, ದ್ವೀತಿಯಾರ್ಧ ಚೆನ್ನಾಗಿತ್ತು ಎನ್ನುವುದು ಸಾಮಾನ್ಯ. ಇದೀಗ 2026ರಲ್ಲಿ ತೆರೆಗೆ ಬಂದ ಕನ್ನಡ ಚಿತ್ರಗಳ ಪರಿಸ್ಥಿತಿಯೂ ಹಾಗೇ ಇದೆ. ಈ ವರ್ಷ ಮೊದಲ ಆರು ತಿಂಗಳ 26 ವಾರಗಳಲ್ಲಿ "ಐ ಯಾಮ್ ಪ್ರಗ್ನೆಂಟ್', "ನೀಲಿ ಹಕ್ಕಿ', "ಆ ಒಂದು ನೋಟು', "ಪುಟ್ಟ ಭಯ', "ಉಗ್ಗು' ಐದು ನೇರವಾಗಿ ಒಟಿಟಿಯಲ್ಲಿ ಬಿಡುಗಡೆಯಾದ ಚಿತ್ರಗಳು ಸೇರಿ ಒಟ್ಟು 126 ಸಿನಿಮಾಗಳು ರಿಲೀಸ್ ಆಗಿವೆ. "ಲವ್ ಮಾಕ್ಟೇಲ್ 3', "ರಕ್ಕಸಪುರದೋಳ್', "ಸೆಕೆಂಡ್ ಕೇಸ್ ಆ್ ಸೀತಾರಾಮ್', "ಲ್ಯಾಂಡ್ಲಾರ್ಡ್' ಸೇರಿ ಕೆಲ ಚಿತ್ರಗಳಷ್ಟೇ ಬಾಕ್ಸಾಫಿಸಿನಲ್ಲಿ ಗೆದ್ದು ಬೀಗಿವೆ. ಉಳಿದಂತೆ ಹಲವು ಚಿತ್ರಗಳು ಉತ್ತಮ ಕಂಟೆಂಟ್ ಮೂಲಕ ಗಮನ ಸೆಳೆದರೂ, ಪ್ರೇಕ್ಷಕರನ್ನು ಥಿಯೇಟರ್ಗಳತ್ತ ಸೆಳೆಯುವಲ್ಲಿ ಸೋತಿವೆ.
ಗಮನ ಸೆಳೆದ ಚಿತ್ರಗಳು
"ತೀರ್ಥರೂಪ ತಂದೆಯವರಿಗೆ', "ಲ್ಯಾಂಡ್ಲಾರ್ಡ್', "ವಲವಾರ', "ರಕ್ಕಸಪುರದೋಳ್', "ಸೆಕೆಂಡ್ ಕೇಸ್ ಆ್ ಸೀತಾರಾಮ್', "ದ ರೈಸ್ ಆಫ್ ಅಶೋಕ', "ಲವ್ ಮಾಕ್ಟೇಲ್ 3', "ಪೀಟರ್', "ಲೋ ನವೀನ', "ಮ್ಯಾಂಗೋ ಪಚ್ಚ' ಚಿತ್ರಗಳು ಕಂಟೆಂಟ್ ಮೂಲಕ ಗಮನ ಸೆಳೆದಿವೆ. ಆದರೆ, ಕೆಲ ಸಿನಿಮಾಗಳು ಕ್ರಿಟಿಕಲ್ ಆಗಿ ಉತ್ತಮ ಎನಿಸಿಕೊಂಡರೂ, ಕಲೆಕ್ಷನ್ನಲ್ಲಿ ಹಿಂದೆ ಬಿದ್ದಿವೆ. ಹಾಗೇ ದೊಡ್ಡ ಬಜೆಟ್ನಲ್ಲಿ ಮೂಡಿಬಂದ ಪ್ರೇಮ್ ಮತ್ತು "ಕೆಡಿ - ದ ಡೆವಿಲ್' ಕೂಡ ದೊಡ್ಡ ಮಟ್ಟದಲ್ಲಿ ನಿರೀಕ್ಷೆ ಮೂಡಿಸಿದ್ದರೂ, ದೊಡ್ಡ ಮಟ್ಟದಲ್ಲಿ ಕಲೆಕ್ಷನ್ ಮಾಡಲಿಲ್ಲ.
ನಿರೀಕ್ಷೆ ಮೂಡಿಸಿರುವ ಚಿತ್ರಗಳು
ಈ ವಾರ ರಿಲೀಸ್ ಆಗುತ್ತಿರುವ "ಗ್ರಾಮಾಯಣ' ಜತೆಗೆ ರಿಲೀಸ್ಗೆ ರೆಡಿಯಾಗುತ್ತಿರುವ ಹಿಟ್ ಕಾಂಬಿನೇಷನ್ "ಅಯೋಗ್ಯ 2', "ಟಾಕ್ಸಿಕ್', "ಕರಾವಳಿ', "ಪಿನಾಕ', "666 ಆಪರೇಷನ್ ಡ್ರೀಮ್ ಥಿಯೇಟರ್', "ಕೊರಗಜ್ಜ', "ಕ್ರಿಮಿನಲ್', "ದೈಜಿ' ಸೇರಿ ಇನ್ನೂ ಕೆಲ ಚಿತ್ರಗಳು ದ್ವೀತಿಯಾರ್ಧದಲ್ಲಿ ಪ್ರೇಕ್ಷಕರನ್ನು ಸೆಳೆಯುವ ನಿರೀಕ್ಷೆಯಿದೆ.
ಈ ವರ್ಷ ಮೊದರ್ಲಧ ಡಲ್ ಇತ್ತು, ದ್ವೀತಿಯಾರ್ಧ ಬಗ್ಗೆ ಆಶಾಭಾವನೆ ಇದೆ. ದೊಡ್ಡ ಸಿನಿಮಾಗಳಿವೆ. "ಡ್ಯಾಡ್', "ಪಿನಾಕ', "ಬೃಂದಾ ವಿಹಾರಿ', "ಟಾಕ್ಸಿಕ್', "ರಾಮಾಯಣ', "ಕರಾವಳಿ' "ಚೀತಾ' ಸೇರಿ ಹಲವು ಬಹುನಿರೀತ ಹಾಗೂ ಸ್ಟಾರ್ ಸಿನಿಮಾಗಳಿವೆ. ಚೆನ್ನಾಗಿ ಆಗಲೇಬೇಕು. ಸಿನಿಮಾ ರಿಲೀಸ್ ಆಗುವುದು ದೊಡ್ಡ ವಿಷಯವಲ್ಲ. ಥಿಯೇಟರ್ಗಳಲ್ಲಿ ನಿಲ್ಲಬೇಕು, ಗೆಲ್ಲಬೇಕು. ದೊಡ್ಡ ಸಿನಿಮಾಗಳ ಜತೆಗೆ ಸಣ್ಣ ಸಿನಿಮಾಗಳೂ ಗೆಲ್ಲಬೇಕು. ಹಾಗಾದಲ್ಲಿ ಚಿತ್ರರಂಗ ಮತ್ತೆ ಚೇತರಿಸಿಕೊಳ್ಳುತ್ತದೆ.
- ಸುಧೀಂದ್ರ ವೆಂಕಟೇಶ್, ಹಿರಿಯ ಪಿಆರ್ಒ
ಮೊದರ್ಲಧ ದೊಡ್ಡ ಮಟ್ಟದಲ್ಲಿ ಯಶಸ್ಸು ದೊರೆತಿಲ್ಲ. ಐದಾರು ಒಳ್ಳೆ ಸಿನಿಮಾಗಳು ಬಂದಿವೆ. ಆದರೆ, ಸ್ಟಾರ್ ಚಿತ್ರಗಳು ಹೆಚ್ಚು ಬಂದಿಲ್ಲ. ಹೀಗಾಗಿ ಜನ ಥಿಯೇಟರ್ಗೆ ಬರುತ್ತಿಲ್ಲ. ಮುಂದಿನ ಆರು ತಿಂಗಳಲ್ಲಿ ಉತ್ತಮ ಕಂಟೆಂಟ್ ಸಿನಿಮಾಗಳು, ಸ್ಟಾರ್ ಚಿತ್ರಗಳು ಲೈನಪ್ನಲ್ಲಿವೆ. "ಗ್ರಾಮಾಯಣ'ದಂತಹ ಕಂಟೆಂಟ್ ಚಿತ್ರಗಳು, "ಟಾಕ್ಸಿಕ್', "ಪಿನಾಕ'ದಂತಹ ಸ್ಟಾರ್ ಸಿನಿಮಾಗಳು ಮತ್ತೆ ಜನರನ್ನು ಥಿಯೇಟರ್ಗೆ ಕರೆತರುವ ನಿರೀೆ ಇದೆ.
- ಎಂ.ಜಿ. ರಾಮಮೂರ್ತಿ, ಕನ್ನಡ ಚಲನಚಿತ್ರ ನಿರ್ಮಾಪಕರ ಸಂಘದ ಅಧ್ಯಕ್ಷ.
ಎಲ್ ನಿನೊ ಕಾರಣ ಬರದ ಪರಿಸ್ಥಿತಿ ನಿರ್ಮಾಣವಾಗಿರುವಂತೆಯೇ, ಕನ್ನಡ ಚಿತ್ರರಂಗಕ್ಕೂ ಉತ್ತಮ ಕಂಟೆಂಟ್ ಮತ್ತು ಪ್ರೇಕ್ಷಕರ ಬರ ನಿರ್ಮಾಣವಾಗಿದೆ. ಮೊದಲು ಕಂಟೆಂಟ್ ಚೆನ್ನಾಗಿರಬೇಕು, ನಂತರ ಮಾರ್ಕೆಟಿಂಗ್ ಸರಿಯಾಗಿ ಮಾಡಬೇಕು. ಮುಂದಿನ ಆರು ತಿಂಗಳು ಚೆನ್ನಾಗಿ ಆಗಬೇಕು ಎಂಬ ಆಸೆ ಇದೆ. ಎಲ್ಲದಕ್ಕೂ ಮೊದಲು ಫಿಲಂ ಚೇಂಬರ್ ಮತ್ತು ಚಿತ್ರರಂಗದ ವಿವಿಧ ಅಂಗ&ಸಂಸ್ಥೆಗಳ ವ್ಯವಸ್ಥೆ ಸರಿಯಾಗಿ ಆಗಬೇಕು, ಪ್ರತಿ ಚಿತ್ರಗಳ ಬೆಂಬಲಕ್ಕೆ ಅವರು ನಿಲ್ಲಬೇಕು. ಹಾಗೇ ಪ್ರತಿ ಸಿನಿಮಾ ಕನಿಷ್ಠ ಎರಡರಿಂದ ಮೂರು ವಾರಗಳಾದರೂ ಥಿಯೇಟರ್ನಲ್ಲಿ ಇರಬೇಕು.
- ಎನ್ನಾರ್ಕೆ ವಿಶ್ವನಾಥ್, ಕನ್ನಡ ಸಿನಿಮಾ ನಿರ್ದೇಶಕರ ಸಂಘದ ಅಧ್ಯಕ್ಷ.
ಮೊದಲರ್ಧ ಕನ್ನಡದಲ್ಲಿ ಯಾವ ಚಿತ್ರವೂ ದೊಡ್ಡ ಮಟ್ಟದಲ್ಲಿ ಸಕ್ಸಸ್ ಆಗಿಲ್ಲ. ಆದರೆ, ಮುಂದಿನ ಆರು ತಿಂಗಳಲ್ಲಿ ಕನ್ನಡದ "ಟಾಕ್ಸಿಕ್' ಸೇರಿ ಬೇರೆ ಭಾಷೆಗಳಲ್ಲೂ ಸ್ಟಾರ್ ಸಿನಿಮಾಗಳು ಬರುತ್ತಿರುವುದು, ಆಶಾಭಾವನೆ ಮೂಡಿಸಿದೆ. ಆ ಚಿತ್ರಗಳಿಂದ ಎರಡು, ಮೂರು ವಾರ ಥಿಯೇಟರ್ಗಳಿಗೆ ಶೇರ್ ಹೆಚ್ಚು ಬಂದರೆ, ಚಿತ್ರಮಂದಿರಗಳೂ ಚೇತರಿಸಿಕೊಳ್ಳುತ್ತವೆ. ಅದು ಒಳ್ಳೆಯದೇ. ಆದರೆ, ಕನ್ನಡದಲ್ಲಿ ಹೆಚ್ಚು ಸ್ಟಾರ್ ಸಿನಿಮಾಗಳು ಬಂದಿದ್ದರೆ ಚೆನ್ನಾಗಿರುತ್ತಿತ್ತು.
- ಕೆ.ವಿ. ಚಂದ್ರಶೇಖರ್, ಪ್ರದರ್ಶಕರ ಸಂಘದ ಅಧ್ಯಕ್ಷ.