ನ್ಯೂಸ್

ಕರೊನಾ ಸೋಂಕಿತರ ಸೇವೆಯಲ್ಲಿ ತೊಡಗಿರುವ ಆರೋಗ್ಯ ಕಾರ್ಯಕರ್ತರನ್ನು ದಂಗು ಬಡಿಸಿದೆ ಈ ವರದಿ!

ನವದೆಹಲಿ: ಕರೊನಾ ಸೋಂಕಿತರ ಸೇವೆಯಲ್ಲಿ ಹಗಲಿರುಳು ಶ್ರಮವಹಿಸಿ ದುಡಿಯುತ್ತಿರುವ ವಿವಿಧ ಆಸ್ಪತ್ರೆಗಳ ಆರೋಗ್ಯ ಕಾರ್ಯಕರ್ತರಿಗೆ ಆಘಾತ ತರುವ ವರದಿಯೊಂದು ದೆಹಲಿಯ ವಿವಿಧ ಆಸ್ಪತ್ರೆಗಳಿಂದ ವರದಿಯಾಗಿದೆ.

ಒಂದಲ್ಲ, ಎರಡಲ್ಲ.. ಬರೋಬ್ಬರಿ 58 ಆರೋಗ್ಯ ಕಾರ್ಯಕರ್ತರಿಗೆ ದೆಹಲಿ ಒಂದರಲ್ಲಿಯೇ ಕರೊನಾ ಸೋಂಕು ಪತ್ತೆಯಾಗಿದೆ. ಅದೂ ಒಂದೇ ದಿನ!

ಹೌದು. ಕರೊನಾ ಸೋಂಕಿತರ ಸೇವೆಯಲ್ಲಿ ತೊಡಗಿಸಿಕೊಂಡಿದ್ದ ಇವರೆಲ್ಲರಲ್ಲಿಯೂ ಸೋಂಕಿನ ಲಕ್ಷಣ ಕಾಣಿಸಿಕೊಂಡಿದ್ದ ಹಿನ್ನೆಲೆಯಲ್ಲಿ ಪರೀಕ್ಷೆಗೆ ಒಳಪಡಿಸಲಾಗಿತ್ತು. 58 ಮಂದಿಯಲ್ಲಿ ಸೋಂಕು ಪತ್ತೆಯಾಗಿರುವುದಾಗಿ ವರದಿಯಾಗಿದೆ. ವೈದ್ಯರು, ನರ್ಸ್, ದಾದಿಯರು ಎಲ್ಲರನ್ನೂ ಸೇರಿಸಿದರೆ ಇಲ್ಲಿಯವರೆಗೆ 88 ಆರೋಗ್ಯ ಕಾರ್ಯಕರ್ತರು ಸೋಂಕಿನಿಂದ ಬಳಲುತ್ತಿದ್ದಾರೆ. ಇವರ ಜತೆ ಸಂಪರ್ಕಕ್ಕೆ ಬಂದಿರುವ 40ಕ್ಕೂ ಅಧಿಕ ಆರೋಗ್ಯ ಕಾರ್ಯಕರ್ತರನ್ನು ಕ್ವಾರಂಟೈನ್​ ಮಾಡಲಾಗಿದ್ದು, ಅವರ ವರದಿಗಳು ಇನ್ನಷ್ಟೇ ಬರಬೇಕಿದೆ.

ಈ ತಿಂಗಳ ಆರಂಭದಲ್ಲಿ ದೆಹಲಿಯ ಮ್ಯಾಕ್ಸ್​ ಆಸ್ಪತ್ರೆಯಲ್ಲಿ ಇಬ್ಬರು ಹೃದ್ರೋಗಿಗಳಲ್ಲಿ ಕರೊನಾ ಸೋಂಕು ಕಾಣಿಸಿಕೊಂಡಿತ್ತು. ಅವರನ್ನು ಚಿಕಿತ್ಸೆಗೆ ಒಳಪಡಿಸಿದ್ದ ಹಾಗೂ ಅವರ ಸಂಪರ್ಕಕ್ಕೆ ಬಂದಿದ್ದ 39 ಆರೋಗ್ಯ ಕಾರ್ಯಕರ್ತರು ಸ್ವಯಂ ಕ್ವಾರಂಟೈನ್​ಗೆ ಒಳಗಾಗಿದ್ದು. ಇದಕ್ಕೂ ಮುನ್ನ ದೆಹಲಿಯ ಏಮ್ಸ್​ನಲ್ಲಿ ಕೂಡ ಸೋಂಕಿತರನ್ನು ಚಿಕಿತ್ಸೆ ಒಳಪಡಿಸಿದ್ದ ವೈದ್ಯರಿಗೆ ಅನಾರೋಗ್ಯ ಶುರುವಾಗಿದ್ದ ಕಾರಣ, 30 ವೈದ್ಯರನ್ನು ಕ್ವಾರಂಟೈನ್​ನಲ್ಲಿ ಇಡಲಾಗಿತ್ತು. ಇವರ ಪೈಕಿ ಬಹುತೇಕ ಮಂದಿಯಲ್ಲಿ ಸೋಂಕು ಪತ್ತೆಯಾಗಿ ಆತಂಕ ಮೂಡಿಸಿತ್ತು. ಇದರ ಬೆನ್ನಲ್ಲೇ ಈಗ ಒಂದೇ ದಿನ 58 ಆರೋಗ್ಯ ಕಾರ್ಯಕರ್ತರಿಗೆ ಸೋಂಕು ತಗುಲಿರುವುದು ಪತ್ತೆಯಾಗಿದೆ.

ಕರೊನಾ ಸೋಂಕಿತರ ಪ್ರದೇಶಗಳಿಗೆ ಹೋಗುವ ಆರೋಗ್ಯ ಕಾರ್ಯಕರ್ತರ ಮೇಲೆ ಹಲ್ಲೆ ನಡೆಯುತ್ತಿರುವುದು ಒಂದೆಡೆಯಾದರೆ, ಈಗ ಈ ರೀತಿಯಾಗಿ ಅವರ ದೇಹವನ್ನೇ ಈ ಮಹಾಮಾರಿ ಆವರಿಸಿಕೊಳ್ಳುತ್ತಿರುವುದು ಆರೋಗ್ಯ ಕಾರ್ಯಕರ್ತರನ್ನು ದಂಗು ಬಡಿಸಿದೆ. (ಏಜೆನ್ಸೀಸ್​)