ನ್ಯೂಸ್

ರೇಣುಕಾಸ್ವಾಮಿ ಹತ್ಯೆ ಕೇಸ್​; ಶೆಡ್‌ ಮಾಲೀಕ ಪಟ್ಟಣಗೆರೆ ಜಯಣ್ಣ ಹೇಳಿದ್ದಿಷ್ಟು

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್​ ಹಾಗೂ ಅವರ ಆಪ್ತರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜಾರಾಜೇಶ್ವರಿನಗರದ ಪಟ್ಟಣಗೆರೆಯಲ್ಲಿರುವ ಜಯಣ್ಣ ಎಂಬುವವರಿಗೆ ಸೇರಿದ ಶೆಡ್​ನಲ್ಲಿ ರೇಣುಕಾಸ್ವಾಮಿಯನ್ನು ಕೊಲೆ ಮಾಡಲಾಗಿದ್ದು, ಇದಕ್ಕೆ ಸಂಬಂಧಿಸಿದಂತೆ ಶೆಡ್​ ಮಾಲೀಕ ಪಟ್ಟಣಗೆರೆ ಜಯಣ್ಣ ಪ್ರತಿಕ್ರಿಯಿಸಿದ್ದಾರೆ.

ಈ ಕುರಿತು ಮಾತನಾಡಿದ ಜಯಣ್ಣ ನಯ್ ನನ್ನ ತಂಗಿಯ ಮಗ. ಶೆಡ್​ನಲ್ಲಿ ಕೊಲೆ ನಡೆದಿರುವುದು ನನಗೆ ತಿಳಿದಿರಲಿಲ್ಲ. ಮಾಧ್ಯಮಗಳ ಮೂಲಕ ತಿಳಿಯಿತು. ಪ್ರಕರಣ ಸಂಬಂಧ ಪೊಲೀಸರು ಕಾನೂನು ರೀತಿ ಕ್ರಮಕೈಗೊಳ್ಳಲಿ. ಕಿಶೋರ್ ಎಂಬುವವರಿಗೆ ಶೆಡ್ ಬಾಡಿಗೆಗೆ ನೀಡಲಾಗಿದೆ. ಪೊಲೀಸರು ನನ್ನನ್ನು ವಿಚಾರಣೆಗೆ ಕರೆದರೆ, ವಿಚಾರಣೆ ಎದುರಿಸಲು ನಾನು ಸಿದ್ಧನಿದ್ದೇನೆ. ನನ್ನ ಮಾಲೀಕತ್ವದ ಭೂಮಿಯಲ್ಲಿಯೇ ಅಪರಾಧ ನಡೆದಿರುವುದರಿಂದ ಯಾವುದೇ ರೀತಿಯ ವಿಚಾರಣೆ ಎದುರಿಸಲು ನಾನು ಸಿದ್ಧನಿದ್ದೇನೆ ಎಂದು ಹೇಳಿದ್ದಾರೆ.

ಬಂಧಿತ ಆರೋಪಿಗಳ ಪೈಕಿ ಒಬ್ಬರಾದ ವಿನಯ್​ ಪಟ್ಟಣಗೆರೆ ಜಯಣ್ಣ ಅವರ ಸೋದರಳಿಯ ಎಂದು ಹೇಳಲಾಗಿದ್ದು, ರೇಣುಕಾಸ್ವಾಮಿಯನ್ನು ಶೆಡ್‌ನಲ್ಲಿ ಇರಿಸಲು ವ್ಯವಸ್ಥೆ ಮಾಡಿದ್ದ ಎನ್ನಲಾಗಿದೆ. ವಿನಯ್​ ಆರ್​ಆರ್​ನಗರದಲ್ಲಿ ಸ್ಟೋನಿಬ್ರೂಕ್​ ಎಂಬ ರೆಸ್ಟೋ ಬಾರ್​ ನಡೆಸುತ್ತಿದ್ದು, ಇದಕ್ಕೆ ನಟ ದರ್ಶನ ಅನೇಕ ಬಾರಿ ಭೇಟಿ ನೀಡಿದ್ದಾರೆ.

ಪೊಲೀಸರು ಸೀಝ್ ಮಾಡಿದ ವಾಹನಗಳನ್ನು ನಿಲ್ಲಿಸಲು ಇಂಟ್ಯಾಕ್ಟ್ ಆಟೋಪಾರ್ಕ್ ಇಂಡಿಯಾ ಪ್ರೈವೇಟ್ ಲಿಮಿಟೆಡ್‌ಗೆ ಶೆಡ್​ಅನ್ನು ಬಾಡಿಗೆಗೆ ನೀಡಲಾಗಿದೆ ಎಂದು ತಿಳಿದು ಬಂದಿದೆ. ಬುಧವಾರ ವಿಧಿ ವಿಜ್ಞಾನ ಪ್ರಯೋಗಾಲಯ ಮತ್ತು ಅಧಿಕಾರಿಗಳ ತಂಡ ಆರೋಪಿಗಳ ಸಮೇತ ಶೆಡ್​ಗೆ ಭೇಟಿ ನೀಡಿ ಸಾಕ್ಷ್ಯ ಸಂಗ್ರಹಿಸಿದ್ದಾರೆ.