ಬೆಂಗಳೂರು: ಚಿತ್ರದುರ್ಗದ ರೇಣುಕಸ್ವಾಮಿ ಹತ್ಯೆ ಪ್ರಕರಣದಲ್ಲಿ ಬಂಧಿತ ನಟ ದರ್ಶನ್ ಮತ್ತು ಗ್ಯಾಂಗ್ ಜತೆಗೆ ಹಾಸ್ಯ ನಟ ಚಿಕ್ಕಣ್ಣನಿಗೂ ಸಂಕಷ್ಟ ಎದುರಾಗಿದೆ. ವಿಜಯನಗರ ಉಪವಿಭಾಗ ಪೊಲೀಸರ ತೀವ್ರ ವಿಚಾರಣೆ ಎದುರಿಸಿದ್ದು, ಕೇಸಿನಲ್ಲಿ ಸಾಕ್ಷಿ ಆಗುತ್ತಾರೋ ಇಲ್ಲ ಆರೋಪಿಯೇ ಆಗುತ್ತಾರೋ ಎಂಬ ಕುತೂಹಲ ಸಂಗತಿ ಚರ್ಚೆಗೆ ಗ್ರಾಸವಾಗಿದೆ.
ಜೂ.8ರಂದು ಚಿತ್ರದುರ್ಗದಿಂದ ರೇಣುಕಸ್ವಾಮಿಯನ್ನು ಶೆಡ್‌ಗೆ ಕರೆತಂದಿದ್ದರು. ಇದೇ ವೇಳೆ ರಾಜರಾಜೇಶ್ವರಿನಗರದಲ್ಲಿ ಇರುವ ಉದ್ಯಮಿ ವಿನಯ್‌ಗೆ ಸೇರಿದ ಸ್ಟೋನಿ ಬ್ರೂಕ್ ಬಾರ್ ಆ್ಯಂಡ್ ರೆಸ್ಟೋರೆಂಟ್‌ನಲ್ಲಿ ದರ್ಶನ್ ಮತ್ತು ಸಹಚರರು ಮದ್ಯದ ಪಾರ್ಟಿ ಮಾಡಿದ್ದರು. ಈ ಪಾರ್ಟಿಯಲ್ಲಿ ನಟ ಚಿಕ್ಕಣ್ಣ ಸಹ ಭಾಗಿ ಆಗಿದ್ದರು. ತುರ್ತು ಕೆಲಸ ಬಂದ ಹಿನ್ನೆಲೆಯಲ್ಲಿ ಚಿಕ್ಕಣ್ಣ ಅರ್ಧದಲ್ಲಿಯೇ ಹೋಗಿದ್ದಾರೆ ಎನ್ನಲಾಗುತ್ತಿದೆ.
ಇದಲ್ಲದೆ, ರೇಣುಕಸ್ವಾಮಿ ಅಶ್ಲೀಲ ೆಟೋ ಮತ್ತು ಸಂದೇಶ ಕಳುಹಿಸುತ್ತಿದ್ದ ಬಗ್ಗೆ ಚಿಕ್ಕಣ್ಣನ ಜತೆಗೆ ದರ್ಶನ್ ಸ್ನೇಹಿತೆ ಪವಿತ್ರಾಗೌಡ ಚರ್ಚೆ ನಡೆಸಿದ್ದಳು. ರೇಣುಕಸ್ವಾಮಿಗೆ ಸರಿಯಾಗಿ ಬುದ್ಧಿ ಕಲಿಸಬೇಕು ಎಂದು ಹೇಳಿಕೊಂಡಿದ್ದಳು. ಈ ಬಗ್ಗೆ ವಿಚಾರಣೆ ನಡೆಸುವ ಉದ್ದೇಶಕ್ಕೆ ಪೊಲೀಸರು ನೋಟಿಸ್ ಕೊಟ್ಟು ಸೋಮವಾರ ಸಂಜೆ ಪೊಲೀಸ್ ಠಾಣೆಗೆ ಖುದ್ದು ಹಾಜರ್‌ಗೆ ಚಿಕ್ಕಣ್ಣನಿಗೆ ಸೂಚಿಸಿದ್ದರು.
ನೋಟಿಸ್ ಸ್ವೀಕರಿಸಿದ ಚಿಕ್ಕಣ್ಣ, ದರ್ಶನ್ ಕರೆತಂದು ಮಹಜರ್ ನಡೆಸುತ್ತಿದ್ದ ಸ್ಟೋನಿ ಬ್ರೂಕ್ ಬಾರ್ ಆ್ಯಂಡ್ ರೆಸ್ಟೋರೆಂಟ್‌ಗೆ ಬಂದು ಪೊಲೀಸ್ ಅಧಿಕಾರಿಗಳನ್ನು ಭೇಟಿ ಮಾಡಿದ್ದಾರೆ. ಕೆಲಕಾಲ ಚರ್ಚೆ ನಡೆಸಿದ ಬಳಿಕ ಅಧಿಕಾರಿಗಳ ಸೂಚನೆ ಮೇರೆಗೆ ಕಾರಿನಲ್ಲಿ ಅನ್ನಪೂಣೇಶ್ವರಿನಗರ ಠಾಣೆಗೆ ಹಾಜರಾಗಿದ್ದಾರೆ.
ಜೂ. 8ರಂದು ರೆಸ್ಟೋರೆಂಟ್‌ನಲ್ಲಿ ನಡೆದ ಪಾರ್ಟಿ ಬಗ್ಗೆ ತನಿಖಾಧಿಕಾರಿಗಳು, ಚಿಕ್ಕಣ್ಣನಿಗೆ ತೀವ್ರ ವಿಚಾರಣೆ ನಡೆಸಿದ್ದಾರೆ. ಪಾರ್ಟಿಯಲ್ಲಿ ಯಾರು ಯಾರು ಭಾಗವಹಿಸಿದ್ದರು. ಏನೆಲ್ಲ ಚರ್ಚೆಗಳು ನಡೆದವು ಎಂದು ಪ್ರಶ್ನಿಸಿದ್ದಾರೆ. ಪಾರ್ಟಿಯಲ್ಲಿ ಊಟ ಮಾಡಿಕೊಂಡು ತುರ್ತು ಕರೆ ಬಂದ ಹಿನ್ನೆಲೆಯಲ್ಲಿ ಅಲ್ಲಿಂದ ಹೊರಟು ಹೋದೆ. ಆನಂತರ ಏನಾಯಿತು ಗೊತ್ತಿಲ್ಲ ಎಂದು ಚಿಕ್ಕಣ್ಣ ಹೇಳಿಕೆ ನೀಡಿದ್ದಾರೆ ಎನ್ನಲಾಗಿದೆ.