ನ್ಯೂಸ್

Renukaswamy Murder Case: ರೇಣುಕಾಸ್ವಾಮಿ ಕೊಲೆ ಪ್ರಕರಣದ ಮೂವರು ಆರೋಪಿಗಳಿಗೆ ಜಾಮೀನು!

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಮೂವರು ಆರೋಪಿಗಳಿಗೆ ಜಾಮೀನು ಮಂಜೂರು ಆಗಿದೆ. ಪ್ರಕರಣದಲ್ಲಿ ಆರೋಪಿಯಾದ ಕಾರ್ತಿಕ್, ಕೇಶವಮೂರ್ತಿ, ನಿಖಿಲ್ ಗೆ ಜಾಮೀನು ಸಿಕ್ಕಿದೆ. ( Renukaswamy Murder Case ) ಕರ್ನಾಟಕ ಹೈಕೋರ್ಟ್ ಮೊರೆ ಹೋಗಿದ್ದ ಕೇಶವಮೂರ್ತಿಯ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್, ಆತನಿಗೆ ಜಾಮೀನು ಕೊಡಲು ತೀರ್ಮಾನಿಸಿದೆ.

ನಟ ದರ್ಶನ್ ಮತ್ತು ಗ್ಯಾಂಗ್​ನಿಂದ ರೇಣುಕಾಸ್ವಾಮಿ ಹತ್ಯೆ ನಡೆಯಿತು ಎಂಬ ಆರೋಪ ಇದೆ. ಘಟನೆ ನಡೆದ ಬಳಿಕ ಕೆಲವರು ಸೆರೆಂಡರ್​ ಆಗಿದ್ದರು. ಆ ಪೈಕಿ ಕಾರ್ತಿಕ್​, ನಿಖಿಲ್​ ನಾಯಕ್ ಮತ್ತು ಕೇಶವಮೂರ್ತಿ ಪ್ರಮುಖರು. ಈ ಕೇಸ್​ನಲ್ಲಿ ಕಾರ್ತಿಕ್​ ಎ15, ಕೇಶವಮೂರ್ತಿ ಎ16 ಹಾಗೂ ನಿಖಿಲ್ ನಾಯಕ್​ ಎ17 ಆಗಿದ್ದಾರೆ. ಈ ಮೂವರಿಗೂ ಜಾಮೀನು ನೀಡಲಾಗಿದ್ದು, ಸದ್ಯಕ್ಕೆ ರಿಲೀಫ್ ಸಿಕ್ಕಂತಾಗಿದೆ.

ಈ ಮೂವರು ರೇಣುಕಾಸ್ವಾಮಿ ಕೊಲೆಯಲ್ಲಿ ಭಾಗಿಯಾಗಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು. ಆದರೆ ತನಿಖೆ ವೇಳೆ ಆರೋಪಿಗಳು ನೇರವಾಗಿ ಕೊಲೆಯಲ್ಲಿ ಭಾಗಿಯಾಗಿಲ್ಲ. ಸಾಕ್ಷಿನಾಶ ಮಾಡಲು ಮುಂದಾಗಿದ್ದ ವಿಚಾರ ಬೆಳಕಿಗೆ ಬಂದಿತ್ತು. ಹೀಗಾಗಿ ಪೊಲೀಸರು ಸಾಕ್ಷ್ಯನಾಶ ಆಡಿಯಲ್ಲಿ ಚಾರ್ಜ್ ಶೀಟ್ ಸಲ್ಲಿಸಿದ್ದರು. ಕೊಲೆಯಲ್ಲಿ ನೇರವಾಗಿ ಭಾಗಿಯಾಗದ ಕಾರಣ ಮೂವರಿಗೆ ಇಂದು ಜಾಮೀನು ಸಿಕ್ಕಿದೆ.

ಬಳ್ಳಾರಿ ಜೈಲಿನಲ್ಲಿ ನಟ ದರ್ಶನ್ Renukaswamy Murder Case

ಆದರೆ ಕೊಲೆ ಪ್ರಕರಣದ ಎ1 ಆರೋಪಿ ಆಗಿರುವ ಪವಿತ್ರಾ ಗೌಡ ಮತ್ತು ಎ2 ನಟ ದರ್ಶನ್​ ಕೂಡ ಜಾಮೀನಿಗಾಗಿ ಕಾಯುತ್ತಿದ್ದಾರೆ. ಅವರು ಕೂಡ ಜಾಮೀನು ಅರ್ಜಿ ಸಲ್ಲಿಸಿದ್ದಾರೆ. ಇಂದು (ಸೆ.23) ಇಬ್ಬರ ಜಾಮೀನು ಅರ್ಜಿಯ ವಿಚಾರಣೆ ಕೂಡ ಮುಂದೂಡಿಕೆ ಆಗಿದೆ. ಸೆಪ್ಟೆಂಬರ್​ 25ರಂದು ಪವಿತ್ರಾ ಗೌಡ ಜಾಮೀನು ಅರ್ಜಿ ಹಾಗೂ ಸೆಪ್ಟೆಂಬರ್​ 27ಕ್ಕೆ ದರ್ಶನ್​ ಅವರ ಜಾಮೀನು ಅರ್ಜಿ ವಿಚಾರಣೆ ನಡೆಯಲಿದೆ. ಸದ್ಯ ನಟ ದರ್ಶನ್ ಬಳ್ಳಾರಿ ಜೈಲಿನಲ್ಲಿ ಇದ್ದಾರೆ.