ನ್ಯೂಸ್

ರೇಣುಕಾಸ್ವಾಮಿ ಕೊಲೆ ಪ್ರಕರಣ: ವಾದ ಮಂಡನೆ ಅಂತ್ಯ, ತೀರ್ಪು ಕಾಯ್ದಿರಿಸಿದ ಸುಪ್ರೀಂಕೋರ್ಟ್! Renukaswamy Death case

Renukaswamy Death case : ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ನಟ ದರ್ಶನ್​ ಹಾಗೂ ಗೆಳತಿ ಪವಿತ್ರಾ ಗೌಡ ಸೇರಿದಂತೆ 7 ಆರೋಪಿಗಳಿಗೆ ನೀಡಿರುವ ಜಾಮೀನು ಪ್ರಶ್ನಿಸಿ (ಜಾಮೀನು ರದ್ದು ಕೋರಿ) ರಾಜ್ಯ ಸರ್ಕಾರ ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್, ಇಂದು (ಜುಲೈ 24) ಎರಡೂ ಕಡೆಯ ವಾದನ್ನು ಆಲಿಸಿ, ತೀರ್ಪು ಕಾಯ್ದಿರಿಸಿದೆ.

ನ್ಯಾಯಮೂರ್ತಿ ಜೆ.ಬಿ.ಪರ್ದಿವಾಲಾ ಹಾಗೂ ನ್ಯಾ.ಮಹದೇವನ್ ಅವರಿದ್ದ ದ್ವಿಸದಸ್ಯ ಪೀಠ, ಸರ್ಕಾರ ಹಾಗೂ ದರ್ಶನ ಪರ ವಕೀಲರ ವಾದವನ್ನು ಆಲಿಸಿತು. ಲಿಖಿತ ವಾದಾಂಶವನ್ನು ಸಲ್ಲಿಸಲು ಕೋರ್ಟ್​ ಒಂದು ವಾರಗಳ ಗಡುವು ನೀಡಿದ್ದು, ಆ ಬಳಿಕ ತೀರ್ಪು ಪ್ರಕಟಿಸಲಿದೆ. 3 ಪುಟದೊಳಗೆ ಲಿಖಿತ ವಾದ ಸಲ್ಲಿಸಲು ನ್ಯಾಯಾಲಯ ಹೇಳಿದೆ.

ಸರ್ಕಾರದ ಪರ ಸಿದ್ಧಾರ್ಥ್​ ಲೂತ್ರಾ ಹಾಗೂ ನಟ  ದರ್ಶನ್​ ಪರ ಸಿದ್ಧಾರ್ಥ್​ ದವೆ ವಾದ ಮಂಡನೆ ಮಾಡಿದರು. ಸಾಕ್ಷಿಗಳು, ಪ್ರತ್ಯಕ್ಷದರ್ಶಿಗಳ ಹೇಳಿಕೆ, ದರ್ಶನ್​ ಹಾಗೂ ಪವಿತ್ರಾ ಗೌಡ ನಡುವಿನ ಸಂಬಂಧ ಹಾಗೂ ಕೊಲೆಗೆ ಕಾರಣವೇನು? ಮುಂತಾದ ವಿಚಾರಗಳ ಬಗ್ಗೆ ನ್ಯಾಯಾಲಯ ಪ್ರಶ್ನೆಗಳನ್ನು ಕೇಳಿತು. ಎರಡೂ ಕಡೆಯ ವಕೀಲರು ಪ್ರಬಲವಾಗಿ ವಾದ ಮಂಡನೆ ಮಾಡಿದ್ದು, ವಾದವನ್ನು ಆಲಿಸಿದ ನ್ಯಾಯಾಲಯ ತೀರ್ಪನ್ನು ಕಾಯ್ದಿರಿಸಿದೆ. ಸುಮಾರು 10 ದಿನಗಳ ಬಳಿಕ ಕೋರ್ಟ್​ ತೀರ್ಪು ಪ್ರಕಟಿಸುವ ಸಾಧ್ಯತೆ ಇದೆ.

ಕೊಲೆ ಕೇಸ್​ನ ಆರೋಪಿಗಳಾದ ನಟ ದರ್ಶನ್​, ಪವಿತ್ರಗೌಡ, ಪ್ರದೂಶ್​, ಲಕ್ಷ್ಮಣ್​, ನಾಗರಾಜು ಹಾಗೂ ಅನುಕುಮಾರ್​ ಸೇರಿದಂತೆ 7 ಪ್ರಮುಖ ಆರೋಪಿಗಳಿಗೆ ಕಳೆದ(2024) ಡಿಸೆಂಬರ್​ 13ರಂದು ಕರ್ನಾಟಕ ಹೈಕೋರ್ಟ್​ ಜಾಮೀನು ಮಂಜೂರು ಮಾಡಿತ್ತು. ಇದನ್ನು ಪ್ರಶ್ನಿಸಿ ಸರ್ಕಾರದ ಪರ ನಗರ ಪೊಲೀಸರು ಸುಪ್ರೀಂಕೋರ್ಟ್​ ಮೊರೆ ಹೋಗಿದ್ದರು. ಸುದೀರ್ಘ ವಾದ-ವಿವಾದ ಪರಿಶೀಲಿಸಿದ ನ್ಯಾಯಾಲಯ ತೀರ್ಪು ಕಾಯ್ದಿರಿಸಿದೆ.

2024ರ ಜೂನ್​ 8ರಂದು ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆಯಾಗಿತ್ತು. ಈ ಹತ್ಯೆಯ ಕೇಸ್​ನಲ್ಲಿ ನಟ ದರ್ಶನ್​ ಸೇರಿದಂತೆ 17 ಮಂದಿಯನ್ನು ಬಂಧಿಸಲಾಗಿತ್ತು. 6 ತಿಂಗಳ ಬಳಿಕ ಪ್ರಕರಣದ ಎಲ್ಲಾ ಆರೋಪಿಗಳಿಗೆ ಷರತ್ತು ಬದ್ಧ ಜಾಮೀನು ನೀಡಿತ್ತು.