ನ್ಯೂಸ್

ರೇಣುಕಾಚಾರ್ಯರರ ತ್ಯಾಗ, ಜನಪರ ಕಾಳಜಿ ಅದ್ಬುತ

ರಾಣೆಬೆನ್ನೂರ: ರೇಣುಕಾಚಾರ್ಯರ ತ್ಯಾಗ, ಆಧ್ಯಾತ್ಮಿಕ ಶ್ರದ್ಧೆ, ಜನಪರ ಕಾಳಜಿ, ಭವಬಂಧಗಳಿಂದ ಜನಸಾಮಾನ್ಯರನ್ನು ಮುಕ್ತಗೊಳಿಸಿ, ಅವರ ಬದುಕನ್ನು ಹಸನು ಮಾಡಲು ಪ್ರಮಾಣಿಕ ಪ್ರಯತ್ನಕ್ಕೆ ಜಗದ್ಗುರು ರೇಣುಕಾಚಾರ್ಯರ ಜಯಂತಿ ಕಾರ್ಯಕ್ರಮ ಸಾಕ್ಷಿಯಾಗಿದೆ ಎಂದು ದಾವಣಗೆರೆ ಆವರಗೊಳ್ಳ ಪುರವರ್ಗಮಠದ ಓಂಕಾರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ಇಲ್ಲಿನ ದೊಡ್ಡಪೇಟೆಯ ಪಂಚಾಚಾರ್ಯ ಜಗದ್ಗುರು ಮಂಗಲ ಮಂದಿರದ ಹಿರೇಮಠದಲ್ಲಿ ತಾಲೂಕು ಜಂಗಮ ನೌಕರರ ವೇದಿಕೆ ಮತ್ತು ತಾಲೂಕು ಜಂಗಮ ಸಮಾಜದ ಆಶ್ರಯದಲ್ಲಿ ಸೋಮವಾರ ಏರ್ಪಡಿಸಿದ್ದ ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವ ಆಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಆಶೀರ್ವಚನ ನೀಡಿದರು.

ಅಷ್ಟಾವರ್ಣಗಳಾದ ಗುರು, ಲಿಂಗ, ಜಂಗಮ, ವಿಭೂತಿ, ರುದ್ರಾಕ್ಷಿ, ಪಾದೋದಕ, ಪ್ರಸಾದಗಳೆಂಬ ಆಚಾರಗಳಿಂದ ಮಾನವನು ಮಹಾದೇವನಾಗಬಹುದು ಎಂದು ಪ್ರಾಯೋಗಿಕವಾಗಿ ಜಗದ್ಗುರು ರೇಣುಕಾಚಾರ್ಯರು ತಿಳಿಸಿಕೊಟ್ಟರು. ಜಾತಿ, ಲಿಂಗ ಭೇದಗಳಿಲ್ಲದೆ ಸರ್ವರನ್ನೂ ಸಮಾನವಾಗಿ ಕಾಣುವ ವೀರಶೈವ ಧರ್ಮದ ಸಂಪ್ರದಾಯದಂತೆ, ಎಲ್ಲರಲ್ಲೂ ಧರ್ಮ ಸಂಸ್ಕಾರಗಳನ್ನು ಬಿತ್ತಿ ಜನ ಸಾಮಾನ್ಯರ ಬಾಳಿಗೆ ಬೆಳಕಾಗಿದೆ ಎಂದರು.

ಕಲಾವಿದ ಪ್ರಕಾಶ ಗಚ್ಚಿನಮಠ ಅವರು ಸಂಗೀತ ಸೇವೆ ಸಲ್ಲಿಸಿದರು. ಬೆಳಗ್ಗೆ ಜಗದ್ಗುರು ರೇಣುಕಾಚಾರ್ಯರ ಮಂಗಲ ಮೂತಿರ್ಗೆ ರುದ್ರಾಭಿಷೇಕ, ಅಷ್ಟೋತ್ತರ ನಾಮಾವಳಿ, ಅಲಂಕಾರ ಪೂಜೆ ಮತ್ತು ಮಹಾಮಂಗಳಾರತಿ ಕಾರ್ಯಕ್ರಮ ಜರುಗಿದವು. ಚನ್ನೇಶ್ವರ ಮಠದ ವಟುಗಳು ವೇದಘೋಷ ಮಾಡಿದರು.

ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ವಿ.ಎಸ್​. ಹಿರೇಮಠ, ಪ್ರಮುಖರಾದ ರವಿಕುಮಾರ ಪಾಟೀಲ, ಅಖಿಲ ಭಾರತ ವೀರಶೈವ ಮಹಾಸಭಾದ ಕಾರ್ಯದಶಿರ್ ಪರಮೇಶ ಯಡಿಯಾಪುರ, ನಿವೃತ್ತ ಶಿರಸ್ತೇದಾರ ಎಂ.ವಿ. ಹಿರೇಮಠ, ನಿವೃತ್ತ ಪ್ರಾಧ್ಯಾಪಕ ಪ್ರೊ. ಎಸ್​.ವಿ. ಉಜ್ಜಯಿನಿಮಠ, ಶಿವಯೋಗಯ್ಯ ಹಿರೇಮಠ, ಎಸ್​.ಸಿ. ಷಡಾಕ್ಷರಿಮಠ, ಎಫ್​.ಕೆ. ಭಸ್ಮಾಂಗಿಮಠ, ಎಸ್​.ವಿ. ಸಾಲಿಮಠ, ವಾಗೀಶ ನೀರಲಗಿಮಠ, ಮುತ್ತಣ್ಣ ಸುರಳಿಕೇರಿಮಠ ಮತ್ತಿತರರು ಉಪಸ್ಥಿತರಿದ್ದರು.