ಶ್ರೀವತ್ಸ ಚಳ್ಳಕೆರೆ
ಮಣಿಕರ್ಣಿಕಾ ಎಂಬ ಅರ್ನ್ಯಘ ಸ್ತ್ರೀರತ್ನವು ಕಾಶಿಯಲ್ಲಿ (1828 ನವೆಂಬರ್ 19) ಜನಿಸಿತು. ಆ ಕಾಲಧರ್ಮಕ್ಕೆ ಅನುಗುಣವಾಗಿ ಗುರುಹಿರಿಯರಿಂದ ಆಶೀರ್ವದಿತಳಾಗಿ ಝಾನ್ಸಿಯ ಗಂಗಾಧರ ರಾವ್ ಅವರನ್ನು ವಿವಾಹವಾದ ಮಣಿಕರ್ಣಿಕೆಯು ರಾಣಿ ಲಕ್ಷ್ಮೀಬಾಯಿಯಾದಳು. ಸಕಲ ಸದ್ವಿದ್ಯಾ ಸಂಪನ್ನೆಯಾದ ಲಕ್ಷ್ಮೀಬಾಯಿಗೆ ದುರ್ವಿಧಿಯು ವಿಕಟಾಟ್ಟಹಾಸವನ್ನು ಪ್ರದರ್ಶಿಸಿತು. ಗರ್ಭದ ಕುಡಿಯಾಗಿ ಹುಟ್ಟಿಬಂದ ರಾಜ್ಯದ ಉತ್ತರಾಧಿಕಾರಿ ಕೇವಲ ನಾಲ್ಕು ತಿಂಗಳ ಕಂದಮ್ಮನಾಗಿದ್ದಾಗಲೇ ಮರಣವನ್ನಪ್ಪಿತು. ರಾಜನು ಹತ್ತಿರದ ಸಂಬಂಧಿಕರ ಮಗುವೊಂದನ್ನು ದತ್ತು ಪಡೆದು ತನ್ನ ಉತ್ತರಾಧಿಕಾರಿಯನ್ನಾಗಿ ನೇಮಿಸಿದ. ಇದರ ಮರುದಿನವೇ ಆ ವಿಧಿಯು ಝಾನ್ಸಿಯ ಮಹಾರಾಜನನ್ನೂ ಸೆಳೆದೊಯ್ದುಬಿಟ್ಟಿತು. ಕಂದಮ್ಮನನ್ನು ರಾಜಕುಮಾರನನ್ನಾಗಿ ಬೆಳೆಸಿ ಮಹಾರಾಜನಾಗಿ ಪಟ್ಟಕ್ಕೆ ತರುವುದು ಮತ್ತು ತಾನು ಈ ಕೂಡಲೇ ಮಹಾರಾಣಿಯಾಗಿ ಸಾಮ್ರಾಜ್ಯದ ಸಂರಕ್ಷಣೆ ಮಾಡುವ ಗುರುತರ ಹೊಣೆಗಾರಿಕೆಗಳು ಲಕ್ಷ್ಮೀಬಾಯಿಯ ಹೆಗಲಿಗೇರಿದವು.
ಆಘಾತಗಳು ಸಹಜವಾಗಿಯೇ ಒಂದನ್ನೊಂದು ಹಿಂಬಾಲಿಸಿ ಸಾಲಾಗಿ ಬರುತ್ತವೆ. ಅಂದಿನ ಭಾರತದ ಗವರ್ನರ್ ಜನರಲ್ ಆಗಿದ್ದ ಡಾಲ್ ಹೌಸಿಯಾ ತಾನೇ ರೂಪಿಸಿದ ‘ಡಾಕ್ಟ್ರಿನ್ ಆಫ್ ಲ್ಯಾಪ್ಸ್’ನಂತಹ ಸುಲಭ ಸಾಮ್ರಾಜ್ಯ ವಿಸ್ತರಣೆಯ ಕುತಂತ್ರದ ಕಾನೂನನ್ನು ತಂದು ಉತ್ತರಾಧಿಕಾರಿ ರಹಿತ (ದತ್ತುಮಕ್ಕಳಿಗೆ ಉತ್ತರಾಧಿಕಾರದ ಹಕ್ಕಿಲ್ಲ ಎಂಬುದನ್ನು ಈ ಕಾನೂನು ಒಳಗೊಂಡಿತ್ತು) ಸಾಮ್ರಾಜ್ಯವನ್ನು ಬ್ರಿಟಿಷ ಆಡಳಿತಕ್ಕೆ ವಶಪಡಿಸಿಕೊಳ್ಳಲು ಮುಂದಾದ. ಯಾವುದೇ ಕಾರಣಕ್ಕೂ ಝಾನ್ಸಿಯನ್ನು ಒಪ್ಪಿಸಲು ಸಿದ್ಧಳಿಲ್ಲದ ರಾಣಿ ಲಕ್ಷ್ಮೀಬಾಯಿ ತನ್ನ ನಿರ್ಧಾರವನ್ನು ಘೊಷಿಸಿ ಸೈನ್ಯವನ್ನು ಬಲಗೊಳಿಸಲು ಆರಂಭಿಸಿದಳು. ಬುಂದೇಲ್ಖಂಡದಲ್ಲಿ ಸಶಸ್ತ್ರ ಯುದ್ಧವನ್ನು ಸಾರಿಯೇಬಿಟ್ಟಳು. ಶತ್ರುಗಳಿಗೆ ತಕ್ಕ ಪ್ರತ್ಯುತ್ತರವನ್ನು ಸಮರ್ಥವಾಗಿ ನೀಡಿದಳು. ಕ್ರಮೇಣ ತನ್ನ ಸೈನ್ಯಬಲವು ಕುಗ್ಗುತ್ತಿರುವ ಅರಿವಿದ್ದರೂ ಹಿಮ್ಮೆಟ್ಟದೆ ಬಾಲ್ಯಸ್ನೇಹಿತ ತಾತ್ಯಾಟೋಪೆಯ ಸೈನ್ಯದ ಸಹಕಾರದಿಂದ ಯುದ್ಧವನ್ನು ಕೆಚ್ಚೆದೆಯಿಂದ ಮುಂದುವರಿಸಿದಳು. ಬೆಟ್ಟಾ ಕದನದಲ್ಲಿ ಸೈನ್ಯಕ್ಕೆ ಸೋಲು ಎದುರಾಗತೊಡಗಿದಾಗ ಅಧೀರಳಾಗಲಿಲ್ಲ. ಅಲ್ಲಿನ ಕೋಟೆಯಿಂದ ಪಾರಾಗಿ ತಾತ್ಯಾಟೋಪೆಯ ಸಹಾಯದೊಂದಿಗೆ ಭಾರತೀಯ ಹೋರಾಟಗಾರರ ಅಧೀನದಲ್ಲಿದ್ದ ಗ್ವಾಲಿಯರ್ ಕೋಟೆನಗರಕ್ಕೆ ತಲುಪಿದಳು. ಹೋರಾಟನಿರತ ವಿವಿಧ ಸೈನಿಕಶಕ್ತಿಯನ್ನು ಹುರಿದುಂಬಿಸಿ ಬ್ರಿಟಿಷ್ ಶಕ್ತಿಯನ್ನು ಕೆಚ್ಚಿನಿಂದ ಎದುರಿಸಿದಳು ಆ ಲಕ್ಷ್ಮೀಬಾಯಿ. ಬ್ರಿಟಿಷರು ಲಕ್ಷ್ಮೀಬಾಯಿಯ ಕುದುರೆಯನ್ನು ಕೊಂದು, ಆಕೆ ಗಾಯಗೊಂಡು ಕೆಳಗೆ ಉರುಳುವಂತೆ ಹಲ್ಲೆ ಮಾಡಿದರು. ತೀವ್ರ ರಕ್ತಸ್ರಾವದಿಂದ ನಿಶ್ಶಕ್ತ ಸ್ಥಿತಿಯನ್ನು ತಲುಪಿದರೂ ಆಕೆ ಕಂಗಾಲಾಗಲಿಲ್ಲ. ಅಂತ್ಯ ಸಮೀಪ ಎನಿಸಿದಾಗ ತನ್ನ ಮರಣೋತ್ತರ ಕ್ರಿಯೆಗೆ ಏರ್ಪಾಡು ಮಾಡಿದಳು, ವೀರಾವೇಶದಿಂದ ಹೋರಾಡಿದಳು. ಕಡೆಗೆ ದೇಹವು ನಶಿಸಿ ಭೂಮಾತೆಯನ್ನು ಆಶ್ರಯಿಸಿದಳು (1858ರ ಜೂನ್ 18). ಆದರೆ ವೀರವನಿತೆಯಾಗಿ ಚರಿತ್ರೆಯಲ್ಲಿ ದಾಖಲೆಯಾದಳು. ಆಕೆಯ ವೀರಗಾಥೆ ಚಿರಸ್ಥಾಯಿ ಮತ್ತು ಎಂದೆಂದಿಗೂ ಪ್ರೇರಣಾದಾಯಿ.
(ಲೇಖಕರು ಹವ್ಯಾಸಿ ಬರಹಗಾರರು)