ಕಡೂರು: ದೇಶವನ್ನು ಬ್ರಿಟಿಷರ ದಾಸ್ಯದಿಂದ ಮುಕ್ತಗೊಳಿಸಿದ ಸ್ವಾತಂತ್ರ್ಯ ಹೋರಾಟಗಾರರನ್ನು ಸ್ಮರಿಸಿಕೊಳ್ಳುವುದು ಪ್ರತಿಯೊಬ್ಬ ಭಾರತೀಯನ ಕರ್ತವ್ಯ ಎಂದು ಶಾಸಕ ಕೆ.ಎಸ್.ಆನಂದ್ ಹೇಳಿದರು.
ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿನ ಬಿ.ಅರ್.ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ 77ನೇ ಸ್ವಾತಂತ್ರೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ಬ್ರಿಟಿಷರ ವಿರುದ್ಧ ಹೋರಾಟ ನಡೆಸಿ ದೇಶಕ್ಕೆ ಸ್ವಾತಂತ್ರ್ಯ ಪಡೆಯಲಾಯಿತು. ನಂತರ ದೇಶಕ್ಕೆ ಉತ್ತಮ ನಾಯಕತ್ವ ರೂಪಿಸುವ ಮೂಲಕ ಸದೃಢ ರಾಷ್ಟ್ರ ಕಟ್ಟಲು ಪಕ್ಷಾತೀತವಾಗಿ ಅನೇಕ ನಾಯಕರು ಶ್ರಮಿಸಿದ್ದರೆ. ದೇಶದಲ್ಲಿ ಸಾಕ್ಷರತೆ ಪ್ರಮಾಣ ಹೆಚ್ಚಿಸಲು ಮತ್ತು ಸಾಮಾಜಿಕವಾಗಿ ಅಭಿವೃದ್ಧಿ ಹೊಂದಲು 77 ವರ್ಷಗಳಲ್ಲಿ ಅನೇಕ ಯೋಜನೆಗಳನ್ನು ರೂಪಿಸಲಾಗಿದೆ ಎಂದರು.
ರಾಜ್ಯದ ಕಾಂಗ್ರೆಸ್ ಸರ್ಕಾರದ ಮಹತ್ವಕಾಂಕ್ಷಿಯ ಐದು ಗ್ಯಾರಂಟಿ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುವ ಬಡವರ್ಗದ ಶ್ರಮಜೀವಿಗಳ ಆರ್ಥಿಕವಾಗಿ ಸ್ವಾವಲಂಬನೆಗೊಳಿಸಲು ಹೆಚ್ಚಿನ ಆದ್ಯತೆ ನೀಡುತ್ತಿದೆ. ಮಹಿಳೆಯರಿಗೆ ಹೆಚ್ಚಿನ ಗೌರವ ಸಿಗಬೇಕೆಂಬ ಕಲ್ಪನೆಯಲ್ಲಿ ಹಲವು ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ. ಬಹುಮುಖ್ಯವಾಗಿ ಬಡತನ ನಿರ್ಮೂಲನೆ ರಾಜ್ಯ ಸರ್ಕಾರದ ಗುರಿಯಾಗಿದೆ ಎಂದರು.
ತಹಸೀಲ್ದಾರ್ ಎಂ.ಪಿ.ಕವಿರಾಜ್ ಮಾತನಾಡಿ, ದೇಶದ ಸ್ವಾತಂತ್ರ್ಯಕ್ಕಾಗಿ ಅನೇಕ ಹೋರಾಟಗಾರರನ್ನು ಗೌರವಿಸುವ ಜತೆಗೆ ದೇಶ ಕಟ್ಟುವ ಕಾರ್ಯದಲ್ಲಿ ನಾವೆಲ್ಲರೂ ಭಾಗಿಯಾಗಬೇಕಿದೆ. ಗಡಿಕಾಯುವ ಯೋಧರು ದೇಶಕ್ಕೆ ತನ್ನದೇ ಆದ ಕೊಡುಗೆ ನೀಡುತ್ತಿದ್ದು, ದೇಶದ ಸಂವಿಧಾನದ ಆಶಯದಡಿಯಲ್ಲಿ ನಮ್ಮ ಪಾತ್ರ ಅರಿಯಬೇಕು ಎಂದು ಹೇಳಿದರು.
ಪಟ್ಟಣದ 26 ಶಾಲೆ ಮಕ್ಕಳಿಂದ ಆಕರ್ಷಕ ಪಥಸಂಚಲನ ನಡೆಸಿದರು. ಪಥಸಂಚಲನದಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು. ಪೌರಕಾರ್ಮಿಕರ ಪಥಸಂಚಲನ ಎಲ್ಲರ ಗಮನಸೆಳೆಯಿತು. ಸಂಜೆ ಪಟ್ಟಣದ ಗಣಪತಿ ಪೆಂಡಾಲ್ ಆವರಣದಲ್ಲಿ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಲಾಯಿತು. ಪುರಸಭೆ ಮಾಜಿ ಅಧ್ಯಕ್ಷ ಭಂಡಾರಿ ಶ್ರೀನಿವಾಸ್, ಸದಸ್ಯರಾದ ತೋಟದ ಮನೆ ಮೋಹನ್‌ಕುಮಾರ್, ಶ್ರೀಕಾಂತ್, ಹಾಲಮ್ಮ, ಜ್ಯೋತಿ, ಸೈಯಾದ್ ಯಾಸೀನ್, ಇಒ ಸಿ.ಆರ್.ಪ್ರವೀಣ್, ಬಿಇಒ ಸಿದ್ದರಾಜುನಾಯ್, ಸಿಪಿಐ ಶಿವುಕುಮಾರ್, ಅರೇಹಳ್ಳಿ ಮಲ್ಲಿಕಾರ್ಜುನ್, ಪುರಸಭೆ ಮುಖ್ಯಾಧಿಕಾರಿ ಕೆ.ರುದ್ರೇಶ್, ಶಿಕ್ಷಕಿ ಶೋಭಾ ಇದ್ದರು.