ನ್ಯೂಸ್

ಸ್ಪೀಡ್ ಪೋಸ್ಟ್‌ನಲ್ಲಿ ಆರ್‌ಸಿ, ಡಿಎಲ್ ಕಳುಹಿಸಲು ನಿರಾಸಕ್ತಿ; ಶೋರೂಂ ಮಾಲೀಕರು, ಮಧ್ಯವರ್ತಿಗಳ ಅನುಕೂಲಕ್ಕೆ ಹಿಂದೇಟು

ಬೆಂಗಳೂರು: ಡ್ರೈವಿಂಗ್ ಲೈಸೆನ್ಸ್ (ಡಿಎಲ್) ಹಾಗೂ ರಿಜಿಸ್ಟ್ರೇಷನ್ ಸ್ಮಾರ್ಟ್ ಕಾರ್ಡ್ (ಆರ್‌ಸಿ)ಗಳನ್ನು ಕಡ್ಡಾಯವಾಗಿ ಸ್ಪೀಡ್ ಪೋಸ್ಟ್‌ನಲ್ಲೇ ಕಳುಹಿಸಬೇಕು ಎಂದು ಸಾರಿಗೆ ಮತ್ತು ರಸ್ತೆ ಸುರಕ್ಷತೆ ಆಯುಕ್ತ ಎ.ಎಂ.ಯೋಗೀಶ್ ಅ.12ರಂದೇ ಆದೇಶ ಹೊರಡಿಸಿದ್ದರೂ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು (ಆರ್‌ಟಿಒ) ಪಾಲನೆ ಮಾಡುವಲ್ಲಿ ನಿರಾಸಕ್ತಿ ತೋರಿರುವ ವಿಚಾರ ಬೆಳಕಿಗೆ ಬಂದಿದೆ. ಕೆಲ ಕಚೇರಿಗಳಲ್ಲಿ ಡಿಎಲ್ ಕಾರ್ಡ್‌ಗಳನ್ನು ಪೋಸ್ಟ್‌ನಲ್ಲೇ ಕಳುಹಿಸುತ್ತಿದ್ದರೂ ಆರ್‌ಸಿ ಕಾರ್ಡ್‌ಗಳನ್ನು ಕಳುಹಿಸುತ್ತಿಲ್ಲ.

ಸಾರ್ವಜನಿಕರು ಹಾಗೂ ಆರ್‌ಟಿಒ ಅಧಿಕಾರಿಗಳ ಅನುಕೂಲಕ್ಕಾಗಿ ಡಿಎಲ್ ಹಾಗೂ ಆರ್‌ಸಿ ಸ್ಮಾರ್ಟ್ ಕಾರ್ಡ್‌ಗಳನ್ನು ಸ್ಟೀಡ್ ಪೋಸ್ಟ್‌ನಲ್ಲಿ ಕಳುಹಿಸಲು 2023 ಆ.18ರಂದು ಅಂಚೆ ಇಲಾಖೆಯೊಂದಿಗೆ ಸಾರಿಗೆ ಇಲಾಖೆ ಒಡಂಬಡಿಕೆ ಮಾಡಿಕೊಂಡಿದೆ. ಆದರೆ, ಶೋ ರೂಂಗಳು ಹಾಗೂ ಮಧ್ಯವರ್ತಿಗಳ ಅನುಕೂಲಕ್ಕಾಗಿ ಕಾರ್ಡ್‌ಗಳನ್ನು ಸ್ಪೀಡ್ ಪೋಸ್ಟ್‌ನಲ್ಲಿ ಕಳುಹಿಸುವ ವ್ಯವಸ್ಥೆ ಎಲ್ಲ ಆರ್‌ಟಿಒಗಳಲ್ಲೂ ಜಾರಿಗೆ ಬಂದಿಲ್ಲ. ಈ ವಿಚಾರ ಆಯುಕ್ತರ ಗಮನಕ್ಕೆ ಬಂದ ಹಿನ್ನೆಲೆಯಲ್ಲಿ ಕಳೆದ ಶುಕ್ರವಾರ (ಡಿ.1) ಎಲ್ಲ ಜಂಟಿ ಆಯುಕ್ತರೊಂದಿಗೆ ವಿಡಿಯೋ ಕಾನ್ಫೆರೆನ್ಸ್ ಮೂಲಕ ಸಭೆ ನಡೆಸಿದ್ದಾರೆ. ಕಾರ್ಡ್‌ಗಳನ್ನು ಪೋಸ್ಟ್‌ನಲ್ಲೇ ಕಳುಹಿಸಲು ಸೂಚನೆ ನೀಡುವಂತೆ ಜಂಟಿ ಆಯುಕ್ತರಿಗೆ ನಿರ್ದೇಶನ ಕೊಟ್ಟಿದ್ದಾರೆ.

ರಾಜ್ಯದ ಎಲ್ಲ ಆರ್‌ಟಿಒಗಳಿಂದ ಪ್ರತಿತಿಂಗಳು 5 ಲಕ್ಷ ಸ್ಮಾರ್ಟ್‌ಕಾರ್ಡ್‌ಗಳನ್ನು ಪೋಸ್ಟ್‌ನಲ್ಲಿ ಕಳುಹಿಸಲು ನಿರೀಕ್ಷೆ ಹೊಂದಲಾಗಿತ್ತು. ಆದರೆ, ಅಕ್ಟೋಬರ್ ತಿಂಗಳಲ್ಲಿ ಬರೀ 60 ಸಾವಿರ ಕಾರ್ಡ್‌ಗಳು ಬಂದಿವೆ. ಒಟ್ಟಾರೆ ಕಾರ್ಡ್‌ಗಳಲ್ಲಿ ಶೇ.1ರಷ್ಟೂ ಇಲ್ಲ. ಪೂರ್ಣಪ್ರಮಾಣದಲ್ಲಿ ಯೋಜನೆ ಜಾರಿಗೆ ಬಂದರೆ ವ್ಯವಸ್ಥೆಯಲ್ಲಿ ಪಾರದರ್ಶಕತೆ ಬರುತ್ತದೆ. ಆನ್‌ಲೈನ್‌ನಲ್ಲೇ ಕಾರ್ಡ್ ಯಾವ ಹಂತದಲ್ಲಿದೆ ಎಂದು ಗ್ರಾಹಕ ತಿಳಿಯಲು ಅವಕಾಶವಿದೆ ಎಂದು ಅಂಚೆ ಇಲಾಖೆ ಅಧಿಕಾರಿಗಳು ಹೇಳುತ್ತಾರೆ.

ಬೆಂಗಳೂರಿನ ಕೆಲ ಕಚೇರಿಗಳಲ್ಲಿ, ಚಿಕ್ಕಬಳ್ಳಾಪುರ, ಕೊಪ್ಪಳ, ದಾವಣಗೆರೆ, ಸಕಲೇಶಪುರ, ಹಾಸನ, ಬಳ್ಳಾರಿ, ಚಿತ್ರದುರ್ಗ, ಚಿಕ್ಕಮಗಳೂರು, ಸಾಗರ ಸೇರಿ ಮತ್ತಿತರ ಆರ್‌ಟಿಒಗಳಲ್ಲಿ ಸ್ಪೀಡ್ ಪೋಸ್ಟ್ ಯೋಜನೆ ಪೂರ್ಣಪ್ರಮಾಣದಲ್ಲಿ ಜಾರಿಯಾಗಿಲ್ಲ. ಚಿತ್ರದುರ್ಗ ಆರ್‌ಟಿಒದಲ್ಲಿ ಅಂದಾಜು 7 ಸಾವಿರ ಆರ್‌ಸಿ ಕಾರ್ಡ್‌ಗಳು ಬಾಕಿ ಉಳಿದಿವೆ. ನೋಂದಣಿಯಾಗಿ ಹಲವು ತಿಂಗಳುಗಳಾದರು ವಾಹನ ಮಾಲೀಕರಿಗೆ ಕಾರ್ಡ್ ತಲುಪಿಸಿಲ್ಲ. ಸಂಚಾರ ಪೊಲೀಸರ ಕೈಗಿ ಸಿಕ್ಕಿಬಿದ್ದಾಗ ಆರ್‌ಸಿ ಕಾರ್ಡ್ ಇಲ್ಲವೆಂಬ ಕಾರಣಕ್ಕೆ ದಂಡ ಪಾವತಿಸುವ ಪರಿಸ್ಥಿತಿ ಇದೆ. ಚಿಕ್ಕಮಗಳೂರು ಆರ್‌ಟಿಒದಲ್ಲಿ ಒಂದೇ ಒಂದು ಕಾರ್ಡ್ ಸ್ಪೀಡ್‌ಪೋಸ್ಟ್‌ನಲ್ಲಿ ಕಳುಹಿಸಿಲ್ಲ. ಸಾಗರ ಕಚೇರಿಯಲ್ಲಿ ಬರೀ 700 ಕಾರ್ಡ್ ಕಳುಹಿಸಿರುವ ಮಾಹಿತಿ ಸಿಕ್ಕಿದೆ.

ವಾಹನಗಳ ನೋಂದಣಿಗೆ ಕಡತಗಳನ್ನು ಭೌತಿಕವಾಗಿ ಕಚೇರಿಗೆ ಕಳುಹಿಸುವ ಅಗತ್ಯವಿಲ್ಲ. ಆನ್‌ಲೈನ್‌ನಲ್ಲಿ ಅಪ್‌ಲೋಡ್ ಆಗುವ ಕಡತಗಳನ್ನು ಪರಿಶೀಲಿಸಿ, ಅನುಮತಿ ಕೊಡಬಹುದು ಎಂದು ನಿಯಮ ಇದೆ. 2023 ಏಪ್ರಿಲ್‌ನಿಂದ ಭೌತಿಕವಾಗಿ ಕಡತಗಳನ್ನು ಕಳುಹಿಸಿಲ್ಲ ಎಂಬ ಕಾರಣಕ್ಕೆ ಹಲುವು ೈಲ್‌ಗಳಿಗೆ ಅನುಮತಿಯೇ ಕೊಟ್ಟಿಲ್ಲ.

ಶೋರೂಂಗಳ ಲಾಬಿ!?

ಸ್ಪೀಡ್ ಪೋಸ್ಟ್ ವ್ಯವಸ್ಥೆ ಜಾರಿಯಾಗದಿರಲು ಶೋರೂಂಗಳ ಲಾಬಿ ಕಾರಣ ಎಂದು ಹೇಳಲಾಗುತ್ತಿದೆ. ಒಂದು ವಾಹನ ನೋಂದಣಿಗೆ ಆರ್‌ಟಿಒ ಶುಲ್ಕ ಎಂದು ಶೋರೂಂನವರು ಮಾಲೀಕನಿಂದ 1500 ರೂ. ಪಡೆಯುತ್ತಾರೆ. ವಾಹನ ಖರೀದಿ ವೇಳೆ ಹೆಚ್ಚುವರಿ ಆ್ಯಕ್ಸೆಸರಿ ಅಳವಡಿಕೆಗೆ ಹಣ ಪಾವತಿ, ಸಾಲ ಮಂಜೂರು ವೇಳೆ ಕೆಲವೊಂದಷ್ಟು ಪ್ರಕ್ರಿಯೆಗಳು ಬಾಕಿ ಉಳಿದಿರುತ್ತವೆ. ಆರ್‌ಸಿ ಕಾರ್ಡ್ ನೇರವಾಗಿ ಅಂಚೆಯಲ್ಲಿ ಮಾಲೀಕನಿಗೆ ತಲುಪಿದರೆ ಶೋರೂಂ ಕಡೆ ಬರುವುದಿಲ್ಲ. ಇದೇ ಕಾರಣಕ್ಕೆ ಆರ್‌ಟಿಒ ಸಿಬ್ಬಂದಿಗೆ 1 ಕಾರ್ಡ್‌ಗೆ 100 ರೂ. ಕೊಟ್ಟು ಕಚೇರಿಯಲ್ಲೇ ಪಡೆಯುತ್ತಾರೆ ಎಂದು ಆರ್‌ಟಿಒ ಮೂಲಗಳು ತಿಳಿಸಿವೆ.

ಆರ್‌ಸಿ ಹಾಗೂ ಡಿಎಲ್ ಕಾರ್ಡ್‌ಗಳನ್ನು ಸ್ಪೀಡ್ ಪೋಸ್ಟ್‌ನಲ್ಲೇ ಕಳುಹಿಸಲು ಅಂಚೆ ಇಲಾಖೆ ಜತೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಕಡ್ಡಾಯವಾಗಿ ಅಂಚೆಯಲ್ಲೇ ಕಾರ್ಡ್‌ಗಳನ್ನು ಕಳುಹಿಸುವ ಕುರಿತು ಇತ್ತೀಚೆಗೆ ಎಲ್ಲ ಜಂಟಿ ಆಯುಕ್ತರ ಜತೆ ಸಭೆ ನಡೆಸಿ ಸೂಚನೆ ಕೊಡಲಾಗಿದೆ.ಎ.ಎಂ.ಯೋಗೀಶ್‌_ಆಯುಕ್ತ, ಸಾರಿಗೆ ಮತ್ತು ರಸ್ತೆ ಸುರಕ್ಷತೆ