ನ್ಯೂಸ್

ತಾಯ್ತನಕ್ಕೆ ಹಿಂಜರಿಕೆ - ಕುಟುಂಬದ ನೆಮ್ಮದಿ ಕದಡೀತು ಜೋಕೆ !

ಮೊನ್ನೆ ಬೆಳಗಿನ ವೇಳೆ ಒಂದು ಪರಿಚಿತ ಕುಟುಂಬ ಆಸ್ಪತ್ರೆಯಲ್ಲಿ ಕುಳಿತಿತ್ತು. ತುಂಬಾ ದೂರದ ಊರಿನಿಂದ ಬಂದಿದ್ದರು. ವಯಸ್ಸಾದ ಪಾಲಕರ ಜತೆ ಮಗ

ಸೊಸೆ ಬಂದಿದ್ದರು. ಬನ್ನಿ ಒಳಗೆ ಎಂದೆ. ಅವರೆಲ್ಲರೂ ಒಳಗೆ ಬಂದರು. ಎಲ್ಲವೂ ಕ್ಷೇಮವೇ? ಎಂದೆ. ಇಷ್ಟು ಅಂದಿದ್ದೇ ತಡ. ಕುಟುಂಬದ ಹಿರಿಯ ಸದಸ್ಯೆ ‘ಅಯ್ಯೋ ಏನು ಕ್ಷೇಮ ಡಾಕ್ಟರೇ! ಲಕ್ಷಾಂತರ ರೂ. ಖರ್ಚು ಮಾಡಿ ಜನ, ಸಂಬಂಧಿಕರು ಹೌದು ಹೌದು ಎನ್ನುವಂತೆ ಮಗನ ಅದ್ಧೂರಿ ಮದುವೆ ಮಾಡಿದೆವು. ನಮಗೂ ಖುಷಿ ಆಯಿತು. ಒಬ್ಬನೇ ಮಗ. ಜವಾಬ್ದಾರಿಯೂ ಮುಗೀತು. ಇನ್ನೇನಿದ್ದರೂ ಮೊಮ್ಮಗನೋ ಮೊಮ್ಮಗಳೋ ಬರುತ್ತಾಳೆ. ಆಡಿಸಿಕೊಂಡು ಜೀವನ ಸಂಧ್ಯಾಕಾಲ ಕಳೆಯೋಣ ಅಂದ್ಕೊಂಡಿದ್ದೆವು. ಆದರೆ...’

ಒಂದು ಕ್ಷಣ ಆ ಮಹಿಳೆ ಮಾತು ನಿಲ್ಲಿಸಿದರು. ಮುಂದೆ ಹೇಳಿ ಎಂದೆ. ಅದಕ್ಕೆ ಆ ಮಹಿಳೆ, ‘ನೋಡಿ ಡಾಕ್ಟರೇ, ನನಗೇನೂ ಮುಚ್ಚು ಮರೆ ಇಲ್ಲ. ನನ್ನ ನಿರೀಕ್ಷೆಯಲ್ಲಿ ತಪ್ಪು ಕೂಡ ಇಲ್ಲ. ನನ್ನ ಮಗ, ಸೊಸೆಗೆ ಹೇಳಿ ಹೇಳಿ ಸಾಕಾಯಿತು. ಬೇಗ ಮಕ್ಕಳನ್ನು ಮಾಡಿಕೊಳ್ಳಿ. ನಮಗೂ ವಯಸ್ಸಾಯ್ತು. ಕೊನೆಯ ದಿನಗಳನ್ನು ಮೊಮ್ಮಕ್ಕಳ ಜತೆ ಕಳೆಯಬೇಕೆನ್ನುವ ಅಸೆ ಈಡೇರಿಸಿ ಅಂತಾ. ಆದರೆ ಅವರೋ, ‘ಇರು ಅಮ್ಮಾ. ಅದಕ್ಕೆಲ್ಲಾ ನಮಗೆ ಪುರುಸೊತ್ತಿಲ್ಲ. ನನಗೇನು ಮಹಾ ವಯಸ್ಸಾಗಿದೆಯಾ? ಮೊದಲು ಸ್ವಲ್ಪ ಗಳಿಸೋಣ. ಕೈ ತುಂಬಾ ಹಣ ಮಾಡ್ಕೊತೀವಿ. ಮಕ್ಕಳು ಮರಿ ಜಂಜಾಟಕ್ಕಿಂತ ಮುಂಚೆ ಹಾಯಾಗಿ ಲೈಫ್ ಎಂಜಾಯ್ ಮಾಡ್ತೇವಿ ಎಂದು ಮುಖಕ್ಕೆ ಹೊಡೆದ ಹಾಗೆ ಮಗ ಹೇಳಿಬಿಟ್ಟ’ ಎಂದು ಅಕೆ ಕಣ್ಣೀರು ಸುರಿಸುತ್ತ ಹೇಳಿದರು.

ಇಂತಹ ಅನೇಕ ಪ್ರಕರಣಗಳು ನಮ್ಮ ಮಧ್ಯೆ ಕಂಡು ಬರುತ್ತವೆ. ಅದರಲ್ಲೇನಿದೆ ಬಿಡಿ, ಈಗಿನ ಜನರೇಷನ್ನೇ ಹಾಗೆ ಎಂದು ಬಿಡುವಷ್ಟು ಸರಳ ವಿಷಯವಲ್ಲ ಇದು. ಇಂದಿನದು ಧಾವಂತದ ಬದುಕು. ಯಾಂತ್ರಿಕ ಜೀವನಶೈಲಿ ಒತ್ತಡ ಸೃಷ್ಟಿಸಿರುತ್ತದೆ. ದೊಡ್ಡ ದೊಡ್ಡ ನಗರಗಳಲ್ಲಿ ಗಂಡ ಹೆಂಡತಿ ಇಬ್ಬರೂ ದುಡಿಯುವುದು ಅನಿವಾರ್ಯ. ಇನ್ನು ಕೆಲಸದ ವೇಳೆಯೂ ಅಷ್ಟೇ. 10ರಿಂದ 12 ತಾಸು. ಟ್ರಾಫಿಕ್​ನಲ್ಲಿ ಕಚೇರಿ ಸರಿಯಾಗಿ ತಲುಪಬೇಕೆಂದರೆ ಬೇಗ ಮನೆ ಬಿಡಬೇಕು. ಮನೆಯಲ್ಲಿ ಅತ್ತೆ ಮಾವನಿಗೆ ಅಡುಗೆ ಮಾಡಿಟ್ಟು, ತಮಗೂ ಕಟ್ಟಿಕೊಂಡು ಹೋಗಬೇಕು. ದಿನವೂ ಹೊರಗಿನ ಊಟ ಆಗದು. ಸ್ಪರ್ಧಾತ್ಮಕ ಯುಗದ ಲೆಕ್ಕಾಚಾರದಲ್ಲಿ ಇದು ಸರಿ ಎನಿಸಿದರೂ ಕೌಟುಂಬಿಕ ವಿಚಾರ ಬಂದಾಗ ಇದರಾಚೆ ಯೋಚಿಸಬೇಕಾಗುತ್ತದೆ. ಹೆತ್ತವರ ವಂಶಾಭಿವೃದ್ಧಿಯ ಕನಸು ನನಸು ಮಾಡುವ ಗುರುತರ ಜವಾಬ್ದಾರಿ ಇರುತ್ತದೆ. ಇನ್ನು ಕೆಲ ಯುವತಿಯರು ಮಕ್ಕಳಾದರೆ ದೇಹಸಿರಿ ಸೊರಗುತ್ತದೆ ಎಂಬ ಕಾರಣವೊಡ್ಡಿ ತಾಯ್ತನ ಮುಂದೂಡುತ್ತಾರೆ. ಇದು ತಪ್ಪು ಮತ್ತು ಅವಾಸ್ತವ.

ಏನೋ ಒಂದೆರಡು ವರ್ಷ ಓಕೆ. ಗಳಿಕೆ ಭರದಲ್ಲಿ ವರ್ಷಗಳು ಉರುಳುತ್ತಾ ಸಾಗಿದರೆ ಹೆತ್ತವರ ಆತಂಕ ಇಮ್ಮಡಿಯಾಗುತ್ತ ಹೋಗುತ್ತದೆ. ಈ ವಿಳಂಬಕ್ಕೆ ಮಗನ ದೋಷ ಕಾರಣವೋ ಅಥವಾ ಸೊಸೆಯದ್ದೋ ಎನ್ನುವ ಆಲೋಚನೆ ಶುರುವಾಗುತ್ತದೆ. ಇನ್ನು ಶುಭ ಸಮಾರಂಭಗಳಲ್ಲಿ ಸೇರಿದ ಸಂಬಂಧಿಕರು ಕೂಡ ಇನ್ನೂ ಏನು ವಿಶೇಷ ಇಲ್ಲವೇನು? ಡಾಕ್ಟರ್​ಗೆ ತೊರಿಸಬೇಕಿತ್ತು ಎನ್ನತೊಡಗುತ್ತಾರೆ. ಇದು ಹೆತ್ತವರ ಮನಸ್ಸಿನ ಮೇಲೆ ಭಾರಿ ಪರಿಣಾಮ ಬೀರುತ್ತದೆ. ಊಟ, ನಿದ್ರೆಗೆ ಭಂಗ ಬರುತ್ತದೆ. ಚಿಂತೆ ಶುರು ಆಗುತ್ತದೆ. ಸೊಸೆ, ಮಗನ ಜತೆ ಮನಸ್ತಾಪವೂ ಆರಂಭವಾಗುತ್ತದೆ.

ಪರಿಹಾರವೇನು?: ತಾಯಿತನ ನಿಸರ್ಗದ ಒಂದು ದೊಡ್ಡ ಕಾಣಿಕೆ. ಅದರ ಪಾತ್ರಕ್ಕೆ ಒಳಗಾಗುವುದರಲ್ಲಿ ಅನಗತ್ಯ ವಿಳಂಬ ಸರಿಯಲ್ಲ. ಮೊದಲನೇ ಮಗುವನ್ನು ತಡಮಾಡದೇ ಪಡೆಯುವುದು ಸೂಕ್ತ. ಬದಲಾದ ಸನ್ನಿವೇಶದಲ್ಲಿ ತಾಯ್ತನ ಮುಂದೂಡುತ್ತಾ ಹೋದರೆ ಪರಿಸ್ಥಿತಿ ಕೈ ಮೀರುವ ಸಾಧ್ಯತೆ ಅಲ್ಲಗಳೆಯುವಂತಿಲ್ಲ. ಹಿಂದೆಲ್ಲ ಹಿರಿಯರು ‘ಮಕ್ಕಳಿರಲವ್ವ ಮನೆತುಂಬ’ ಅಂತಾ ಏಕೆ ಅನ್ನುತ್ತಿದ್ದರು ಅಂದರೆ ಮಕ್ಕಳಿಂದ ಮನೆ ಎನ್ನುವುದು ನಂದಗೋಕುಲವಾಗುತ್ತದೆ. ಈ ಸಂತಸ ಮನೋ ನೆಮ್ಮದಿ ತರುತ್ತದೆ. ಖಿನ್ನತೆಯನ್ನು ದೂರ ಮಾಡುತ್ತದೆ. ಇದನ್ನೇ ಆ ಮಹಿಳೆಯ ಮಗ, ಸೊಸೆಗೆ ಆಪ್ತ ಸಮಾಲೋಚನೆ ಮೂಲಕ ತಿಳಿಹೇಳಿದೆ. ವಾಸ್ತವದ ಅರಿವು ಮೂಡಿಸಿದೆ. ಇಂತಹ ಸಮಸ್ಯೆ ಎದುರಾದಲ್ಲಿ ಯಾರೇ ಇರಲಿ ಮನೋವೈದ್ಯರ ಬಳಿ ಹೋಗಿ. ಮುಕ್ತವಾಗಿ ನಿಮ್ಮ ಸಮಸ್ಯೆ ಹಂಚಿಕೊಳ್ಳಿ. ಸಲಹೆ, ಸಮಾಲೋಚನೆ ಮೂಲಕ ಸಾಗಿ.