ಕೆರೆಕಟ್ಟೆ ಪ್ರದೇಶ ಸೇರಿದಂತೆ ಕುದುರೆಮುಖ ಅರಣ್ಯದಿಂದ ಸ್ವಯಂ ಪ್ರೇರಿತರಾಗಿ ಹೊರಬರಲು ಅರ್ಜಿ ಸಲ್ಲಿಸಿದ್ದ ಕುಟುಂಬಗಳಿಗೆ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಪರಿಹಾರ ಚೆಕ್ ವಿತರಿಸಿದರು.  
ನ್ಯೂಸ್

ಅರಣ್ಯವಾಸಿಗಳನ್ನು ವಸತಿ ಪ್ರದೇಶಗಳ ಸ್ಥಳಾಂತರ

ಮಂಗಳೂರು: ಕುದುರೆಮುಖ ಸೇರಿದಂತೆ ರಾಜ್ಯದ ಅರಣ್ಯದೊಳಗಿರುವ ವಸತಿ ಪ್ರದೇಶಗಳ ಸ್ಥಳಾಂತರಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ತಿಳಿಸಿದ್ದಾರೆ.
ಮಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಇಬ್ಬರ ಮೇಲೆ ಕಾಡಾನೆ ದಾಳಿ ಮಾಡಿದಾಗ, ಪುಂಡಾನೆಯನ್ನು ಸೆರೆ ಹಿಡಿಯಲು ಸೂಚನೆ ನೀಡಲಾಗಿತ್ತು. ಆನೆ ಸೆರೆ ಮಾತ್ರವೇ ಪರಿಹಾರ ಆಗುವುದಿಲ್ಲ. ಹೀಗಾಗಿ ಅರಣ್ಯದೊಳಗಿನ ಜನರ ಸ್ಥಳಾಂತರದ ಮೂಲಕ ಅರಣ್ಯ ಪ್ರದೇಶ ವಿಸ್ತರಣೆ, ಸಂರಕ್ಷಣೆ ಮಾಡಲು ಸರ್ಕಾರ ಕ್ರಮ ವಹಿಸಿದೆ. ಕುದುರೆಮುಖ ಅರಣ್ಯದೊಳಗೆ 1300 ಪರಿವಾರಗಳಿದ್ದವು, 350 ಕುಟುಂಬಗಳಿಗೆ ಪರಿಹಾರ ನೀಡಿದೆ ಸ್ಥಳಾಂತರಿಸಲಾಗಿದೆ. ಇನ್ನೂ 300 ಕುಟುಂಬಗಳು ಸ್ವಯಂ ಇಚ್ಛೆಯಿಂದ ಸ್ಥಳಾಂತರಗೊಳ್ಳಲು ಅರ್ಜಿ ಸಲ್ಲಿಸಿದ್ದು, ಹಂತ ಹಂತವಾಗಿ ಪುನರ್ವಸತಿ ಯೋಜನೆ ಜಾರಿಗೆ ತರಲಾಗುವುದು ಎಂದರು.
*ಆನೆ ದಾಳಿ ಸಂತಸ್ಥ ಕುಟುಂಬಕ್ಕೆ ಉದ್ಯೋಗ
ವನ್ಯಜೀವಿ ದಾಳಿಯಿಂದ ಮೃತಪಟ್ಟ ಕುಟುಂಬಗಳಿಗೆ 20 ಲಕ್ಷ ರೂಪಾಯಿ ಪರಿಹಾರ ನೀಡಲಾಗಿದೆ. ಬಹಳ ವರ್ಷದಿಂದ ಅರ್ಜಿ ಹಾಕಿ ಕಾಯುತ್ತಿದ್ದ ಅರಣ್ಯದೊಳಗಿನ ವಸತಿ ಪ್ರದೇಶಗಳ ಸ್ಥಳಾಂತರ ಯೋಜನೆಯನ್ನು ಆರ್ಥಿಕ ಲಭ್ಯತೆಯ ಇತಿಮಿತಿಯಲ್ಲಿ ಪುನಾರಂಭಿಸಲು ನಿರ್ಧರಿಸಲಾಗಿದ್ದು. ಈ ಬಗ್ಗೆ ನಾನು ಅಧಿಕಾರಿಗಳಿಗೆ ಸೂಚನೆ ನೀಡಿ ಕೂಡಲೇ ಸ್ವಯಂ ಇಚ್ಛೆಯಿಂದ ಕಾಡಿನಿಂದ ಹೊರಗೆ ಬರಲು ಅರ್ಜಿ ಸಲ್ಲಿಸಿರುವ ಕುಟುಂಬಗಳನ್ನು ಗುರುತಿಸಿ ಸ್ಥಳಾಂತರಿಸಲು ಸೂಚಿಸಿದ್ದೆ, ಇಂದು 5 ಕುಟುಂಬಕ್ಕೆ ಚೆಕ್ ನೀಡಲಾಗಿದೆ. ಜೊತೆಗೆ 20 ಕೋಟಿ ರೂಪಾಯಿಗಳನ್ನು ಪುನರ್ವಸತಿ ಯೋಜನೆಗೆ ಹೆಚ್ಚುವರಿಯಾಗಿ ಹಂಚಿಕೆ ಮಾಡಲಾಗಿದೆ. ಕೆರೆಕಟ್ಟೆಯ ಮುಡಬಿಯಲ್ಲಿ ನಡೆದ ದುರ್ಘಟನೆಯಲ್ಲಿ ಮೃತಪಟ್ಟವರ ಕುಟುಂಬದ ಸ್ಥಿತಿಯನ್ನು ಪರಿಗಣಿಸಿ. ಮಾನವೀಯ ನೆಲೆಗಟ್ಟಿನಲ್ಲಿ ಆ ಕುಟುಂಬದ ಇಬ್ಬರಿಗೆ ಹೊರಗುತ್ತಿಗೆ ಆಧಾರದಲ್ಲಿ ಅರಣ್ಯ ಇಲಾಖೆಯಲ್ಲಿ ಉದ್ಯೋಗವನ್ನೂ ನೀಡಲಾಗಿದೆ ಎಂದು ಈಶ್ವರ ಖಂಡ್ರೆ ತಿಳಿಸಿದರು.
ಆನೆ ಕಾರ್ಯಪಡೆಗೆ ಸಿಬ್ಬಂದಿ ನೇಮಕಾತಿ
ವನ ಪ್ರದೇಶ ಇರುವ ಜಿಲ್ಲೆಗಳಲ್ಲಿ ಮಾನವ-ಆನೆ ಸಂಘರ್ಷ ಹೆಚ್ಚಾಗಿದೆ. ಮಂಗಳೂರು ಭಾಗದಲ್ಲೂ ಈ ಸಮಸ್ಯೆ ಇದೆ. ತಾವು ಸಚಿವರಾದ ಬಳಿಕ ದಕ್ಷಿಣ ಕನ್ನಡ ಜಿಲ್ಲೆಗೆ ಸಮರ್ಪಿತ ಆನೆ ಕಾರ್ಯಪಡೆ ಮಂಜೂರು ಮಾಡಲಾಗಿದ್ದು, 25 ಸಿಬ್ಬಂದಿಗೆ ತರಬೇತಿ ನೀಡಲಾಗಿದೆ. ರೈಲ್ವೆ ಬ್ಯಾರಿಕೇಡ್ ಅಳವಡಿಸುತ್ತಿದ್ದೇವೆ. ಕಾಡಿನಲ್ಲಿ ವನ್ಯಜೀವಿಗಳಿಗೆ ನೀರು, ಆಹಾರದ ಕೊರತೆ ಆಗದಂತೆ ನೋಡಿಕೊಳ್ಳುತ್ತಿದ್ದೇವೆ. ಸಿಬ್ಬಂದಿ ನೇಮಕಾತಿ ಮಾಡುತ್ತಿದ್ದೇವೆ. ಕಮಾಂಡ್ ಸೆಂಟರ್ ಆರಂಭಿಸಿದ್ದೇವೆ ಎಂದು ಸಚಿವ ಈಶ್ವರ ಬಿ ಖಂಡ್ರೆ ತಿಳಿಸಿದರು.
--------------------