ಸೊರಬ: ಜಗದ್ಗುರು ಶ್ರೀ ರೇಣುಕಾಚಾರ್ಯರ ಆಚಾರ, ವಿಚಾರಗಳು ಜನತೆಗೆ ಸಂಸ್ಕಾರ ನೀಡಿ, ಧರ್ಮ ಜಾಗೃತಿಗೊಳಿಸಲು ಮಾರ್ಗದರ್ಶನ ನೀಡುವಂತಿವೆ ಎಂದು ಶಿಗ್ಗಾವಿ ಮಂತ್ರೋಡಿಯ ವಿದ್ವಾನ್ ಸಿದ್ದರಾಮಯ್ಯ ಶಾಸಿ ಹೇಳಿದರು.
ಪಟ್ಟಣದ ತಾಲೂಕು ಕಚೇರಿ ಸಭಾಂಗಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಜಗದ್ಗುರು ರೇಣುಕಾರ್ಚಾಯರ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಮಾತನಾಡಿ, ಜೀವನದಲ್ಲಿ ಅರ್ಥಪೂರ್ಣ ಬದುಕು ನಡೆಸಲು ಧರ್ಮಪರಿಪಾಲನೆ ಮುಖ್ಯ. ಮಕ್ಕಳಲ್ಲಿ ಧಾರ್ಮಿಕ ಸಂಸ್ಕಾರ ಬಿತ್ತುವುದು, ಧಾರ್ಮಿಕ ಕ್ಷೇತ್ರಗಳ ಪುನರುತ್ಥಾನ, ಮಠಗಳ ನಿರ್ಮಾಣ ಸೇರಿ ಅನೇಕ ಧಾರ್ಮಿಕ ಕೈಂಕರ್ಯಗಳಿಗೆ ಒತ್ತು ನೀಡಿದ್ದರು ಎಂದು ಸ್ಮರಿಸಿದರು.
ಜಾತ್ಯತೀತ ಪರಿಕಲ್ಪನೆ ಹುಟ್ಟು ಹಾಕಿ, ಜಗತ್ತಿಗೆ ಬೆಳಕಾಗಿ, ಪ್ರತಿ ಮನೆ-ಮನದಲ್ಲೂ ಸಂಸ್ಕಾರ ಬಿತ್ತಿದವರು. ಅವರು ಹಾಕಿಕೊಟ್ಟ ಮಾರ್ಗಗಳು ಶಿವನ ಆರಾಧನೆ ಮಾಡಲು ಸುಲಭವಾಗಿವೆ. ಅನ್ಯಾಯ, ಅಧರ್ಮವನ್ನು ಮೆಟ್ಟಿ ಧರ್ಮ ಉಳಿವಿಗೆ ಅವತರಿಸಿದ ಶ್ರೀಗಳು ಒಂದು ಸೈದ್ಧಾಂತಿಕ ವ್ಯವಸ್ಥೆಯನ್ನು ಕೊಡುಗೆಯಾಗಿ ನೀಡಿದ್ದಾರೆ ಎಂದು ತಿಳಿಸಿದರು.
ಜಡೆ ಶಾಂತಪುರ ಮಠದ ಶ್ರೀ ಶಿವಾನಂದ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ತಹಶೀಲ್ದಾರ್ ಮಂಜುಳಾ ಹೆಗಡಾಳ್, ಶಿರಸ್ತೇದಾರ್ ನಾಗರಾಜ್, ನಿಜಗುಣ ಚಂದ್ರಶೇಖರ್, ಅರೆಮನೆ ಮಠದ ಮಲ್ಲಿಕಾರ್ಜುನ ಶಾಸಿ, ಆನವಟ್ಟಿ ಹೋಬಳಿ ಬೇಡಜಂಗಮ ಸಮಾಜದ ಅಧ್ಯಕ್ಷ ವಿಜಯೇಂದ್ರ ಸ್ವಾಮಿ, ಪ್ರಧಾನ ಕಾರ್ಯದರ್ಶಿ ಮಹೇಶ್ವರಯ್ಯ ಹೊಂಡದಮಠ್, ಮಹೇಶ್ವರಯ್ಯ, ನಾಗರಾಜ್, ಆದರ್ಶಶಾಸಿ, ಸರ್ವಜ್ಞಮೂರ್ತಿ, ಪ್ರಕಾಶ್ ಅಗಸನಹಳ್ಳಿ, ದಯಾನಂದ ಗೌಡ, ಬಸವರಾಜ ಗೌಡ ಇತರರಿದ್ದರು.