ಶಿವಮೊಗ್ಗ: ಧರ್ಮಕ್ಕೆ ಎಲ್ಲರನ್ನೂ ಒಂದುಗೂಡಿಸುವ ಶಕ್ತಿಯಿದೆ. ಮನಸ್ತಾಪದಿಂದ ದೂರವಾದವರು, ವೈಯಕ್ತಿಕ ಪ್ರೀತಿ, ವಿಶ್ವಾಸಗಳ ಕೊರತೆ ಇರುವವರೂ ಧರ್ಮದ ಮೂಲಕ ಒಂದಾಗುತ್ತಾರೆ ಎಂದು ಬಸವಕೇಂದ್ರದ ಶ್ರೀ ಬಸವ ಮರುಳಸಿದ್ಧ ಸ್ವಾಮೀಜಿ ಹೇಳಿದರು.
ವಿನೋಬನಗರದ ರಕ್ತೇಶ್ವರಿ ಮತ್ತು ಮಳಲಿ ಗಿಡ್ಡಮ್ಮ ದೇವಾಲಯದ 8ನೇ ವಾರ್ಷಿಕೋತ್ಸವದಲ್ಲಿ ಶುಕ್ರವಾರ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಶ್ರೀಗಳು, ಧರ್ಮಕ್ಕೆ ದೊಡ್ಡ ಶಕ್ತಿಯಿದೆ. ರಾಜಕೀಯ ಭಿನ್ನಾಭಿಪ್ರಾಯಗಳು ಏನೇ ಇದ್ದರೂ ವೈಯಕ್ತಿಕ ಪ್ರೀತಿ, ವಿಶ್ವಾಸ ಮುಖ್ಯ. ಧಾರ್ಮಿಕ ಆಚರಣೆಗಳು ಪರಸ್ಪರ ಬೆಸೆಯುತ್ತವೆ ಎಂದರು.
ಬಟ್ಟೆ ಹೊಲಿಯುವವ ಸೂಜಿ, ದಾರ ಬಳಸುವಂತೆ ಧರ್ಮವನ್ನು ನಾವು ಬಳಸಬೇಕು. ನಾವೆಲ್ಲರೂ ಧರ್ಮದ ಮಾರ್ಗದಲ್ಲಿ ಸತ್ಸಂಕಲ್ಪದಿಂದ ತಾತ್ವಿಕತೆ ಅಳವಡಿಸಿಕೊಂಡು ಬಾಳುವುದು ಮುಖ್ಯ. ಯಜ್ಞ ಎಂದರೆ ಕೃತಜ್ಞತೆ ಸಲ್ಲಿಸುವುದು ಎಂದರ್ಥ. ದೇವ, ಪಿತೃ, ಪ್ರಜಾ, ಆಚಾರ್ಯ, ಭೂತ ಯಜ್ಞ ಎಂಬ 5 ಯಜ್ಞಗಳಿವೆ. ಶರೀರ ಸೇರಿ ಎಲ್ಲವನ್ನೂ ನೀಡಿದ ದೇವರ ಸಂಸ್ಮರಣೆಯೇ ದೇವಯಜ್ಞ ಎಂದು ಹೇಳಿದರು.
ನಮ್ಮ ಜೀವನದ ವಿವಿಧ ಸಂದರ್ಭದಲ್ಲಿ ವಿದ್ಯೆ, ಬುದ್ಧಿ ನೀಡಿ, ತಿದ್ದಿ ತೀಡಿದವರಿಗೆ ಕೃತಜ್ಞತೆ ಸಲ್ಲಿಸುವುದೇ ಆಚಾರ್ಯ ಯಜ್ಞ. ಆಕಾಶ, ಗಾಳಿ, ಅಗ್ನಿ, ನೀರು, ಭೂಮಿ ಪಂಚಭೂತಗಳನ್ನು ನೀಡಿದ ಪಂಚಭೂತಗಳಿಗೆ ಕೃತಜ್ಞತೆ ಸಲ್ಲಿಸುವುದೇ ಭೂತಯಜ್ಞ. ನಮ್ಮ ಅಂತರಾತ್ಮ ಶುದ್ಧವಾಗಿರಿಸಿ ತಾತ್ವಿಕತೆ ಅಳವಡಿಸಿಕೊಂಡು ಬಾಳುವುದೇ ಧರ್ಮ ಎಂದು ಅಭಿಪ್ರಾಯಪಟ್ಟರು.
ಮಾಜಿ ಶಾಸಕ ಕೆ.ಬಿ.ಪ್ರಸನ್ನಕುಮಾರ್, ಮಾಜಿ ಮೇಯರ್ ನಾಗರಾಜ ಕಂಕಾರಿ, ದೇವಸ್ಥಾನ ಸಮಿತಿ ನಿರ್ದೇಶಕ ದೀಪಕ್ ಸಿಂಗ್, ಅಧ್ಯಕ್ಷ ಭೀಮಣ್ಣ, ಮುಖ್ಯ ಅರ್ಚಕ ಶಿವಶಂಕರಮೂರ್ತಿ ಇತರರಿದ್ದರು.