ಸೊರಬ ತಾಲೂಕಿನ ಮಾವಲಿಯಲ್ಲಿ ಬೆಳೆ ವಿಮೆ ಕುರಿತು ಆಯೋಜಿಸಿದ್ದ ರೈತರೊಂದಿಗೆ ಸಮಾಲೋಚನಾ ಸಭೆಯಲ್ಲಿ ಕೃಷಿ ಸಹಾಯಕ ನಿರ್ದೇಶಕ ಕೆ.ಜಿ.ಕುಮಾರ್ ಮಾತನಾಡಿದರು. ದೇವರಾಜ್, ಶೇಖರಪ್ಪ ಗೌಡ, ಮಹೇಶ್, ಹಿರಿಯಣ್ಣಪ್ಪ ಇತರರಿದ್ದರು.  
ನ್ಯೂಸ್

ಗೆಜೆಟ್ ನಿಯಮದಂತೆ ರೈತರಿಗೆ ಪರಿಹಾರ

ಸೊರಬ: ಬರ, ಅತಿವೃಷ್ಟಿ, ಕೃಷಿಗೆ ಸಂಬಂಧಿಸಿ ಸರ್ಕಾರ ನೀಡುವ ಗೆಜೆಟ್ ನಿಯಮಾವಳಿ ಪ್ರಕಾರ ಬೆಳೆ ವಿಮೆ ನೀಡಲಾಗುತ್ತದೆ. ಹಾಗಾಗಿ ಭತ್ತ, ಜೋಳ ಬೆಳೆಗಳಿಗೆ ನಿಗದಿಪಡಿಸಿದ ತಿಂಗಳಲ್ಲಿ ವಿಮಾ ಕಂತನ್ನು ರೈತರು ಪಾವತಿಸಬೇಕು ಎಂದು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಕೆ.ಜಿ.ಕುಮಾರ್ ಹೇಳಿದರು.

ತಾಲೂಕಿನ ಮಾವಲಿ ಗ್ರಾಪಂ ವ್ಯಾಪ್ತಿಯ ಅಡಕೆ, ಭತ್ತ, ಜೋಳ ಬೆಳೆಗಳಿಗೆ ನೀಡುವ ಬೆಳೆ ವಿಮಾ ಯೋಜನೆಗೆ ಸಂಬಂಧಿಸಿ ರೈತರೊಂದಿಗೆ ಮಾಹಿತಿ ವಿನಿಮಯ ಕಾರ್ಯಕ್ರಮದಲ್ಲಿ ಮಾತನಾಡಿದರು.

ಸರ್ಕಾರ ಪ್ರತಿ ಏಳು ವರ್ಷಗಳ ಇಳುವರಿಯನ್ನು ತೆಗೆದುಕೊಂಡು ಅದರಲ್ಲಿ ಅತಿವೃಷ್ಟಿ ಮತ್ತು ಬರ ಪರಿಹಾರಕ್ಕೆ ಸಂಬಂಧಿಸಿ ಸರಾಸರಿ ಕ್ರೋಡೀಕರಿಸಿ ಪರಿಹಾರ ನೀಡುತ್ತದೆ. ಅಲ್ಲದೆ, ರೈತರು ನೀಡುವ ಮನವಿಗಳನ್ನು ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದರು.

ತೋಟಗಾರಿಕೆ ಅಧಿಕಾರಿ ದೋರೆ ರಾಜ್ ಮಾತನಾಡಿ, ಮಳೆ ಹೆಚ್ಚಾದರೆ, ಮಳೆ ಆಗದಿದ್ದರೆ, ಬಿಸಿಲ ಪ್ರಮಾಣ ಹೆಚ್ಚಾದರೆ ಅದನ್ನು ಆಧರಿಸಿ ಬೆಳೆಗಳಿಗೆ ಪರಿಹಾರ ನೀಡಲಾಗುತ್ತದೆ. ಇದಕ್ಕಾಗಿ ದತ್ತಾಂಶ ಸಂಗ್ರಹಿಸಲಾಗುತ್ತದೆ. ಆಧಾರ್ ಲಿಂಕ್ ಆಗದಿದ್ದರೆ ವಿಮೆ ಹಣ ಜಮಾ ಮಾಡಲು ತೊಂದರೆಯಾಗುತ್ತದೆ ಎಂದು ತಿಳಿಸಿದರು.

ದೇವರಾಜ್, ಶೇಖರಪ್ಪ ಗೌಡ, ಮಹೇಶ್, ಹಿರಿಯಣ್ಣಪ್ಪ, ವೀರಪ್ಪಗೌಡ, ರಾಜಶೇಖರ ಗೌಡ, ಬಂಗಾರಪ್ಪ, ಅಣ್ಣಾಜಿ ಗೌಡ, ಚಂದ್ರಪ್ಪ, ಬಂಗಾರಪ್ಪ, ಶಿವರಾಜ್, ಇಂದೂಧರ, ಪಾಲಾಕ್ಷಪ್ಪ ಗೌಡ, ಕೋಮಲಪ್ಪ, ಸಂದೀಪ್ ಇತರರಿದ್ದರು.