ಸಕಲೇಶಪುರ: ಅಡಾಣಿ ಗುಡ್ಡದ ಜನರ ಮನೆಗಳಿಗೆ ಶೀಘ್ರವೇ ಪರಿಹಾರ ನೀಡುವ ಮೂಲಕ ಮನೆಗಳನ್ನು ತೆರವುಗೊಳಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಖುಷ್ಬು ಗೊಯಲ್ ಚೌಧರಿ ಹೇಳಿದರು.
ರಾಷ್ಟ್ರೀಯ ಹೆದ್ದಾರಿ 75 ಭೂಕುಸಿತದ ಪ್ರದೇಶಗಳಿಗೆ ಗುರುವಾರ ಭೇಟಿ ನೀಡಿ ಪರಿಶೀಲನೆ ನಡೆಸಿದ ನಂತರ ಮಾತನಾಡಿ, 90 ಡಿಗ್ರಿ ಕೋನದಲ್ಲಿ ಗುಡ್ಡಗಳನ್ನು ಕತ್ತರಿಸಿರುವುದು ಭೂಕುಸಿತಕ್ಕೆ ಕಾರಣವಾಗುತ್ತಿದೆ. ತೀವ್ರ ಭೂಕುಸಿತ ಆತಂಕ ಎದುರಿಸುತ್ತಿರುವ ಅಡಾಣಿ ಗುಡ್ಡದ ಸುಮಾರು 10 ಕುಟುಂಬಗಳಿಗೆ ಈಗಾಗಲೇ ಪರಿಹಾರ ನೀಡಿ ಬೇರಡೆಗೆ ಸ್ಥಳಾಂತರಿಸಲಾಗಿದೆ. ಪರಿಹಾರ ದೊರೆಯದ ಕಾರಣ ಇನ್ನೂ 10 ಕ್ಕೂ ಅಧಿಕ ಕುಟುಂಬಗಳು ಆತಂಕದ ಮಧ್ಯೆ ಗುಡ್ಡದ ಪ್ರದೇಶದಲ್ಲೇ ಜೀವನ ನಡೆಸುತ್ತಿದ್ದಾರೆ. ಆದ್ದರಿಂದ, ಜಿಲ್ಲಾಡಳಿತ ಭೂಕುಸಿತ ಸಾಧ್ಯತೆ ಹೊಂದಿರುವ ಕುಟುಂಬಗಳನ್ನು ಗುರುತಿಸಿ ಭೂಮಿಯನ್ನು ವಶಕ್ಕೆ ಪಡೆದು ಪರಿಹಾರ ನೀಡುವ ಮೂಲಕ ಈ ಕುಟುಂಬಗಳನ್ನು ಶೀಘ್ರವೇ ಸ್ಥಳಾಂತರಿಸುವಂತೆ ಜಿಲ್ಲಾಡಳಿತಕ್ಕೆ ಸೂಚನೆ ನೀಡಿದ್ದೇನೆ. ಅಲ್ಲದೆ 90 ಡಿಗ್ರಿ ಕೋನ ಹೊಂದಿರುವ ಗುಡ್ಡವನ್ನು 45 ಡಿಗ್ರಿ ಕೋನಾಕೃತಿಯಲ್ಲಿ ತುಂಡರಿಸುವಂತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಈ ವೇಳೆ ಜಿಲ್ಲಾಧಿಕಾರಿ ಸತ್ಯಭಾಮಾ, ಉಪವಿಭಾಗಾಧಿಕಾರಿ ಕವಿತಾ, ತಹಸೀಲ್ದಾರ್ ಅರವಿಂದ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.