ಮುಂಬೈ: ಪ್ರಮುಖ ಸಾಮಾಜಿಕ ಜಾಲತಾಣ ಫೇಸ್ಬುಕ್ ಕಳೆದ ತಿಂಗಳು ಮುಕೇಶ್ ಅಂಬಾನಿ ಒಡೆತನದ ರಿಲಯನ್ಸ್ ಜಿಯೋದಲ್ಲಿ 5.7 ಬಿಲಿಯನ್ ಡಾಲರ್ (43,574 ಕೋಟಿ ರೂ.)ಹೂಡಿಕೆ ಮಾಡುವ ಮೂಲಕ ಶೇ.9.99 ರಷ್ಟು ಪಾಲುದಾರಿಕೆ ಪಡೆದುಕೊಂಡಿದೆ.
ಅದರ ಬೆನ್ನಲ್ಲೇ ರಿಯಲನ್ಸ್ ಸಂಸ್ಥೆ ಇದೀಗ ಮತ್ತೊಂದು ಮಹತ್ವದ ಹೆಜ್ಜೆ ಇಟ್ಟಿದೆ. ರಿಲಯನ್ಸ್ ಇಂಡಸ್ಟ್ರೀಸ್ ಎಲ್ಟಿಡಿ (ಆರ್ಐಎಲ್)ನಿಂದ ಆನ್ಲೈನ್ನಲ್ಲಿ ಕಿರಾಣಿ ವಸ್ತುಗಳನ್ನು ಒದಗಿಸುವ ಸೇವೆ ' ಜಿಯೋ ಮಾರ್ಟ್' ಪ್ರಾರಂಭವಾಗಿದೆ.
ಭಾರತದ ಮಾರುಕಟ್ಟೆಯಲ್ಲಿ ಸದ್ಯ ವಿದೇಶಿ ಇ-ಕಾಮರ್ಸ್ ಸಂಸ್ಥೆಗಳಾದ ಅಮೇಜಾನ್, ಫ್ಲಿಪ್ಕಾರ್ಟ್ಗಳು ಮುಂಚೂಣಿಯಲ್ಲಿದ್ದು, ಅಗತ್ಯ ದಿನಸಿ ವಸ್ತುಗಳನ್ನು ಆನ್ಲೈನ್ ಮೂಲಕ ಪೂರೈಸುತ್ತಿವೆ. ಇದೀಗ ಜಿಯೋ ಮಾರ್ಟ್ ಆನ್ಲೈನ್ ಸರ್ವೀಸ್ ಪ್ರಾರಂಭವಾಗಿದ್ದು ಮಹತ್ವದ ಬೆಳವಣಿಗೆ ಎನಿಸಿದೆ. ಜಿಯೋ ಮಾರ್ಟ್ನಲ್ಲಿ ದಿನಸಿ ವಸ್ತುಗಳು ಸೇರಿ ಎಲ್ಲ ಅಗತ್ಯ ವಸ್ತುಗಳೂ ಆನ್ಲೈನ್ ಮೂಲಕ ಲಭ್ಯ ಆಗಲಿವೆ.
ಇದನ್ನೂ ಓದಿ: ರಾಜ್ಯದಲ್ಲಿ 2000ದ ಗಡಿದಾಟಿದ ಕರೊನಾ ಸೋಂಕಿತರ ಸಂಖ್ಯೆ; ಡಿಸ್ಚಾರ್ಜ್ ಆದವರು 654, ಐಸಿಯುನಲ್ಲಿ 17 ಮಂದಿ
ರಿಲಯನ್ಸ್ ಇಂಡಸ್ಟ್ರೀಸ್ನ ರಿಟೇಲ್ ವಿಭಾಗವಾದ ರಿಲಯನ್ಸ್ ಸ್ಮಾರ್ಟ್ನ ಸಿಇಒ ದಾಮೋದರ್ ಮಾಲ್ ಅವರು ಜಿಯೋ ಮಾರ್ಟ್ ಪ್ರಾರಂಭವಾದ ಬಗ್ಗೆ ಟ್ವೀಟ್ ಮಾಡಿ ತಿಳಿಸಿದ್ದಾರೆ. ಹಾಗೇ ಜಿಯೋ ಮಾರ್ಟ್ ತನ್ನ ಸೇವೆಯನ್ನು ದೇಶದ 200 ನಗರಗಳಲ್ಲಿ ಶೀಘ್ರವೇ ಪ್ರಾರಂಭ ಮಾಡಲಿದೆ ಎಂದೂ ತಿಳಿಸಿದ್ದಾರೆ.
ದಾಮೋದರ್ ಮಾಲ್ ಅವರು ಟ್ವೀಟ್ ಮಾಡಿದ್ದಾರೆ ಹೊರತು ಇದುವರೆಗೂ ಮುಂಬೈನಲ್ಲಿರುವ ರಿಲಯನ್ಸ್ ಪ್ರಧಾನ ಕಚೇರಿಯಿಂದ ಜಿಯೋ ಮಾರ್ಟ್ ಪ್ರಾರಂಭವಾದ ಬಗ್ಗೆ ಯಾವುದೇ ಅಧಿಕೃತ ಪ್ರಕಟಣೆ ಹೊರಬಿದ್ದಿಲ್ಲ.
ಕಳೆದ ತಿಂಗಳು ಫೇಸ್ಬುಕ್ ಜಿಯೋದಲ್ಲಿ ಹಣ ಹೂಡಿಕೆ ಮಾಡಿದ ಬೆನ್ನಲ್ಲೇ ರಿಲಯನ್ಸ್ನಿಂದ ಜಿಯೋ ಮಾರ್ಟ್ ಕೂಡ ಶುರುವಾಗಿದೆ. ಆದರೆ ಪರೀಕ್ಷಾರ್ಥವಾಗಿ ಮುಂಬೈನ ಕೆಲವು ಏರಿಯಾಗಳಿಗೆ ಮಾತ್ರ ಸರ್ವೀಸ್ ಕೊಡಲಾಗುತ್ತಿತ್ತು. ಇದೀಗ ದೊಡ್ಡ ಪ್ರಮಾಣದಲ್ಲಿ ಶುರು ಮಾಡಲಾಗಿದ್ದು, ಶೀಘ್ರದಲ್ಲೇ ದೇಶದ ಬೇರೆ ನಗರಗಳಲ್ಲೂ ಜಿಯೋ ಮಾರ್ಟ್ ಸೇವೆ ಪ್ರಾರಂಭವಾಗಲಿದೆ.
ಸದ್ಯ ಲಾಕ್ಡೌನ್ ಬಿಕ್ಕಟ್ಟಿನಿಂದಾಗಿ ಅನೇಕ ನಗರಗಳಲ್ಲಿ ಜನಸಾಮಾನ್ಯರು ಮನೆಯಿಂದ ಹೊರಬೀಳದಂತಾಗಿದೆ. ಈ ಹೊತ್ತಲ್ಲೇ ರಿಲಯನ್ಸ್ ಕೂಡ ಜಿಯೋ ಮಾರ್ಟ್ ಪ್ರಾರಂಭ ಮಾಡಿದ್ದು, ಅನುಕೂಲವಾದಂತೆ ಆಗಿದೆ. ಹಾಗೇ ಅಮೆಜಾನ್, ಫ್ಲಿಪ್ಕಾರ್ಟ್ನಂತಹ ಇ-ಕಾಮರ್ಸ್ ಸಂಸ್ಥೆಗಳಿಗೆ ಪ್ರತಿಸ್ಫರ್ಧಿಯಾಗಲಿದೆ ಎಂಬ ಅಭಿಪ್ರಾಯ ಸಾಮಾಜಿಕ ಜಾಲತಾಣಗಳಲ್ಲಿ ವ್ಯಕ್ತವಾಗಿದೆ. (ಏಜೆನ್ಸೀಸ್)