ನ್ಯೂಸ್

ಸಂಪಾದಕೀಯ: ವಿಶ್ವಾಸಾರ್ಹತೆ ಕುಸಿಯದಿರಲಿ

Mandara

ಅನ್ಯಾಯ, ಅಕ್ರಮ, ಅವ್ಯವಹಾರ, ಕಾನೂನುಬಾಹಿರ ಕೃತ್ಯಗಳು ನಡೆದಾಗ ಸ್ವಾಭಾವಿಕವಾಗಿಯೇ ಜನಸಾಮಾನ್ಯರು ಕಳವಳಕ್ಕೆ ಒಳಗಾಗುತ್ತಾರೆ ಮತ್ತು ನ್ಯಾಯಪ್ರಾಪ್ತಿಯ ನಿರೀಕ್ಷೆಯಿಂದ ಪೊಲೀಸ್, ತನಿಖಾ ಸಂಸ್ಥೆ, ಉನ್ನತ ಮಟ್ಟದ ಸಮಿತಿ ಹೀಗೆ ವ್ಯವಸ್ಥೆಯ ಪ್ರಮುಖ ಅಂಗಗಳ ಮೇಲೆ ವಿಶ್ವಾಸ ಇರಿಸಿ, ಎಲ್ಲವೂ ಸರಿಹೋಗುತ್ತದೆ ಎಂದು ನಂಬುತ್ತಾರೆ. ಅಪರಾಧ ನಿಯಂತ್ರಣ, ಭ್ರಷ್ಟಾಚಾರ ಕೊನೆಗಾಣಿಸುವಿಕೆ ನಿಟ್ಟಿನಲ್ಲಿ ಈ ವ್ಯವಸ್ಥೆ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಿದಷ್ಟು ಸಮಾಜದ ಅಪಸವ್ಯಗಳು ದೂರವಾಗುತ್ತವೆ, ಶ್ರೀಸಾಮಾನ್ಯರ ವಿಶ್ವಾಸವೂ ಹೆಚ್ಚುತ್ತದೆ. ಆದರೆ, ಇದಕ್ಕೆ ತದ್ವಿರುದ್ಧವಾದ ದಿಕ್ಕಿನಲ್ಲಿ ಸಾಗಿದರೆ ವಿಶ್ವಾಸಾರ್ಹತೆಗೆ ದೊಡ್ಡ ಪೆಟ್ಟು ಬಿದ್ದು, ಜನರು ಯಾರನ್ನು ನಂಬಬೇಕು ಎಂಬಂಥ ಪರಿಸ್ಥಿತಿ ಸೃಷ್ಟಿಯಾಗುತ್ತದೆ. ಇಂಥ ಪ್ರಕರಣಗಳು ಹೆಚ್ಚುತ್ತಿದ್ದು, ಕೆಲ ಉನ್ನತ ಅಧಿಕಾರಿಗಳು ಮತ್ತು ನ್ಯಾಯ ಒದಗಿಸಬೇಕಾದ ಸ್ಥಾನದಲ್ಲಿ ಇರುವ ವ್ಯಕ್ತಿಗಳೇ ಅಕ್ರಮ, ಅವ್ಯವಹಾರದಲ್ಲಿ ಶಾಮೀಲಾಗುತ್ತಿರುವುದು ನಿಜಕ್ಕೂ ಶೋಚನೀಯ ಸಂಗತಿ. ವಿದೇಶಿ ಕಳ್ಳಸಾಗಣೆ ಪ್ರಕರಣದಲ್ಲಿ ಸ್ಮಗ್ಲರ್​ಗಳಿಂದ ಜಪ್ತಿ ಮಾಡಲಾಗಿದ್ದ 1 ಕೋಟಿ ರೂ.ಗೂ ಅಧಿಕ ಮೌಲ್ಯದ 2.6 ಕೆಜಿ ಚಿನ್ನ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಗೋದಾಮಿನಿಂದ ನಿಗೂಢವಾಗಿ ಮಾಯವಾಗಿದೆ. ಈ ನಾಪತ್ತೆ ರಹಸ್ಯದ ಬೆನ್ನು ಹತ್ತಿರುವ ಸಿಬಿಐಗೆ, ಪ್ರಕರಣದಲ್ಲಿ ಕಸ್ಟಮ್್ಸ ಅಧಿಕಾರಿಗಳ ಕೈವಾಡ ಇರುವ ಬಗ್ಗೆ ಅನುಮಾನ ವ್ಯಕ್ತವಾಗಿದೆ. ಹಾಗಾಗಿಯೇ, 6 ಕಸ್ಟಮ್್ಸ ಸಿಬ್ಬಂದಿ ವಿರುದ್ಧ ಎಫ್​ಐಆರ್ ದಾಖಲಿಸಲಾಗಿದೆ. ಅಷ್ಟೇ ಅಲ್ಲ, ಗೋದಾಮು ನಿರ್ವಹಣೆಯಲ್ಲಿ ನಿಯಮಗಳನ್ನು ಉಲ್ಲಂಘಿಸಲಾಗಿದ್ದು, ಕರ್ತವ್ಯಲೋಪ ಕಣ್ಣಿಗೆ ರಾಚುವಷ್ಟು ಸ್ಪಷ್ಟವಾಗಿದೆ. ಅಲ್ಲದೆ, ಕೆ.ಜಿ.ಗೆ ಇಂತಿಷ್ಟು ಕಮಿಷನ್ ಪಡೆದು ಚಿನ್ನ ಕಳ್ಳಸಾಗಣೆಗೆ ಅಧಿಕಾರಿಗಳು ಸಹಾಯ ಮಾಡಿದ್ದ ನಿದರ್ಶನಗಳು ಈ ಹಿಂದೆಯೂ ಕಂಡುಬಂದಿವೆ. ಕಳ್ಳಸಾಗಾಣಿಕೆಯನ್ನು ನಿಯಂತ್ರಿಸಿ, ಅಕ್ರಮಗಳನ್ನು ಕೊನೆಗಾಣಿಸಬೇಕಾದ ಅಧಿಕಾರಿಗಳೇ ಇಂಥ ಕೃತ್ಯಗಳಲ್ಲಿ ಶಾಮೀಲಾದರೆ ಅದು ನಿಜಕ್ಕೂ ಅಕ್ಷಮ್ಯ. ಇಂಥವರ ವಿರುದ್ಧ ಕಾನೂನಿನ ಪ್ರಕಾರ ಸೂಕ್ತ ಕ್ರಮ ಕೈಗೊಳ್ಳಬೇಕು ಮತ್ತು ಭ್ರಷ್ಟಾಚಾರ, ಅವ್ಯವಹಾರಗಳಿಗೆ ಅವಕಾಶವಿಲ್ಲ ಎಂಬ ಸ್ಪಷ್ಟ ಸಂದೇಶವನ್ನು ಸರ್ಕಾರ ರವಾನಿಸಬೇಕು.

ಕರ್ನಾಟಕಕ್ಕೆ ದುಬೈ, ಮಲೇಷ್ಯಾ, ಶ್ರೀಲಂಕಾ ಹಾಗೂ ಮಧ್ಯಪ್ರಾಚ್ಯ ರಾಷ್ಟ್ರಗಳಿಂದ ಕಳ್ಳಸಾಗಣೆ ಮೂಲಕ ಚಿನ್ನ ಬರುತ್ತಿದೆ. ವಾರ್ಷಿಕವಾಗಿ ರಾಜ್ಯದ ಹಲವು ವಿಮಾನ ನಿಲ್ದಾಣಗಳಲ್ಲಿ ಸರಾಸರಿ 17 ಕೋಟಿ ರೂ.ಗೂ ಅಧಿಕ ಮೌಲ್ಯದ ಚಿನ್ನ ಜಪ್ತಿಯಾಗುತ್ತಿದೆ ಎಂಬುದು ಗಮನಾರ್ಹ. ಇದೊಂದೇ ಪ್ರಕರಣವಲ್ಲ. ಬಹುಕೋಟಿ ವಂಚನೆಯ ಐಎಂಎ ಪ್ರಕರಣದಲ್ಲಿಯೂ ಹಲವು ಅಧಿಕಾರಿಗಳೇ ಆರೋಪಿಗಳಾಗಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಈಗಾಗಲೇ 28 ಆರೋಪಿಗಳ ವಿರುದ್ಧ ಸಿಬಿಐ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದೆ. ಅಧಿಕ ಬಡ್ಡಿಯ ಆಮಿಷವೊಡ್ಡಿ ಸಾವಿರಾರು ಜನರಿಂದ 4 ಸಾವಿರ ಕೋಟಿ ರೂ. ಸಂಗ್ರಹಿಸಿ, ವಂಚನೆ ಮಾಡಿರುವುದು ತನಿಖೆಯ ವೇಳೆಗೆ ತಿಳಿದುಬಂದಿದೆ. ವ್ಯವಸ್ಥೆಯನ್ನು ಶುದ್ಧೀಕರಿಸಬೇಕಾದ ಅಧಿಕಾರಿಗಳು ಅಥವಾ ಇತರ ಸಿಬ್ಬಂದಿಯೇ ಅವ್ಯವಹಾರದಲ್ಲಿ ಶಾಮೀಲಾಗುವುದು ನೈತಿಕತೆಯ ಅವಸಾನವೇ ಸರಿ. ಕರ್ತವ್ಯನಿಷ್ಠೆ, ಪ್ರಾಮಾಣಿಕತೆ, ಜನಪರ ಕಾಳಜಿಯಂಥ ಮೌಲ್ಯಗಳನ್ನು ಒಂದಿಷ್ಟಾದರೂ ಸ್ಮರಿಸಿಕೊಂಡು, ವೃತ್ತಿಜೀವನದಲ್ಲಿ ಅಳವಡಿಸಿಕೊಂಡರೆ ಯಾರೂ ಇಂಥ ಅಪಸವ್ಯಗಳಿಗೆ ಮುಂದಾಗುವುದಿಲ್ಲ.