ಶಿವಮೊಗ್ಗ: ಗೌರಿ-ಗಣೇಶ ಮತ್ತು ಈದ್ ಮಿಲಾದ್ ಹಬ್ಬಗಳನ್ನು ಎಲ್ಲ ಧರ್ಮಿಯರು ಒಟ್ಟಾಗಿ ಸಡಗರ ಸಂಭ್ರಮದಿಂದ ಯಾವುದೇ ಆತಂಕಗಳಿಲ್ಲದೇ ಆಚರಿಸುವಂತೆ ಆಗಬೇಕು. ಶಾಂತಿಗೆ ಭಂಗತರುವ ಅಥವಾ ವ್ಯವಸ್ಥೆ ವಿರುದ್ಧವಾಗಿ ಇದ್ದವರ ಮೇಲೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವುದು ಅನಿವಾರ್ಯವಾಗುತ್ತದೆ ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗೆಡೆ ಎಚ್ಚರಿಕೆ ನೀಡಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ಜಿಲ್ಲಾಡಳಿತ, ಜಿಲ್ಲಾ ಪೊಲೀಸ್ ಇಲಾಖೆ, ಮಹಾನಗರ ಪಾಲಿಕೆಯಿಂದ ಗಣೇಶ ಹಾಗೂ ಈದ್ ಮಿಲಾದ್ ಹಬ್ಬಗಳ ನಿಮಿತ್ತ ಸರ್ವಧರ್ಮದ ಮುಖಂಡರ ಶಾಂತಿ ಸಭೆ ನಡೆಸಿ, ಯಾವುದೇ ಗಲಭೆಗಳಿಗೆ ಆಸ್ಪದ ನೀಡದಂತೆ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಎಲ್ಲ ರೀತಿಯ ಮುನ್ನೆಚ್ಚರಿಕಾ ಕ್ರಮ ಕೈಗೊಂಡಿದೆ. ಅಗತ್ಯಬಿದ್ದರೆ ಅಶಾಂತಿಯನ್ನುಂಟು ಮಾಡುವವರನ್ನು ಜಿಲ್ಲೆಯಿಂದಲೇ ಗಡಿಪಾರು ಮಾಡುವುದಕ್ಕೂ ಹಿಂಜರಿಯುವುದಿಲ್ಲ ಎಂದರು.
ಶಿವಮೊಗ್ಗ ಶಾಂತಿಪ್ರಿಯವಾದ ಜಿಲ್ಲೆ. ವಿಶ್ವಮಾನವ ಸಂದೇಶ ಸಾರಿದ ರಾಷ್ಟ್ರಕವಿ ಕುವೆಂಪು ಜನ್ಮತಾಳಿದ ನಾಡು. ಈ ಜಿಲ್ಲೆಯಲ್ಲಿ ಸಾಕಷ್ಟು ಸಜ್ಜನರಿದ್ದಾರೆ. ಆದರೆ ಇದೀಗ ಕೆಲವೇ ಕೆಲವು ಕಿಡಿಗೇಡಿಗಳಿಂದ ಇಡೀ ಜಿಲ್ಲೆಗೆ ಕೋಮು ಸೂಕ್ಷ್ಮಪ್ರದೇಶ ಎನ್ನುವ ಕಳಂಕ ಬಂದಿದೆ. ಜಿಲ್ಲಾಡಳಿತ ಈ ರೀತಿಯ ವ್ಯಕ್ತಿಗಳನ್ನು ಗುರುತಿಸಿ ಗಡಿಪಾರು ಹಾಗೂ ಕಾನೂನು ಕ್ರಮ ತೆಗೆದುಕೊಳ್ಳುತ್ತದೆ ಎಂದು ಹೇಳಿದರು.
ಎಸ್‌ಪಿ ಜಿ.ಕೆ.ಮಿಥುನ್‌ಕುಮಾರ್ ಮಾತನಾಡಿ, ಗಣೇಶ ಹಾಗೂ ಈದ್ ಮಿಲಾದ್ ಹಬ್ಬಗಳು ಒಟ್ಟಿಗೆ ಬಂದಿರುವುದರಿಂದ ಜಿಲ್ಲಾ ಪೊಲೀಸ್ ಇಲಾಖೆಯಿಂದ ಈಗಾಗಲೇ ಸಾವಿರಕ್ಕೂ ಹೆಚ್ಚು ಶಾಂತಿಸಭೆ ನಡೆಸಲಾಗಿದೆ. ಜಿಲ್ಲಾದ್ಯಂತ 3,500ಕ್ಕೂ ಅಧಿಕ ಗಣೇಶಮೂರ್ತಿಗಳ ಪ್ರತಿಷ್ಠಾಪಿಸಲಾಗುತ್ತದೆ. ಈದ್ ಮಿಲಾದ್ ಹಬ್ಬ ಆಚರಣೆಯೂ ಎಲ್ಲ ಕಡೆ ನಡೆಯುತ್ತಿರುವುರಿಂದ ಎರಡೂ ಸಮುದಾಯದ ಮುಖಂಡರು ಹಾಗೂ ಯುವಕರಿಗೆ ಹಬ್ಬವನ್ನು ಉತ್ತಮವಾಗಿ ಶಾಂತಿಯುತವಾಗಿ ಆಚರಿಸುವಂತೆ ಸೂಚನೆ ನೀಡಲಾಗಿದೆ ಎಂದರು.
ಎಂಎಲ್‌ಸಿಗಳಾದ ಡಿ.ಎಸ್.ಅರುಣ್, ಡಾ. ಧನಂಜಯ ಸರ್ಜಿ, ಕರ್ನಾಟಕ ರಾಜ್ಯ ಭೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಸ್.ರವಿಕುಮಾರ್, ಮಹಾನಗರ ಪಾಲಿಕೆ ಆಯುಕ್ತೆ ಕವಿತಾ ಯೋಗಪ್ಪನವರ್, ಎಡಿಸಿ ಸಿದ್ದಲಿಂಗಪ್ಪ, ಪ್ರೊಬೇಷನರಿ ಐಎಎಸ್ ಅಧಿಕಾರಿ ದೃಷ್ಟಿ ಜೈಸ್ವಾಲ್, ಎಎಸ್‌ಪಿ ಎ.ಜಿ.ಕಾರಿಯಪ್ಪ ಉಪಸ್ಥಿತರಿದ್ದರು.
ಗಣಪತಿ ಪ್ರತಿಷ್ಠಾಪನೆಗೆ ಯಾವುದೇ ಅನುಮತಿ ಬೇಕಾಗಿಲ್ಲ. ಬಾಲಗಂಗಾಧರ ತಿಲಕ್ ಅವರು ಸ್ವಾತಂತ್ರೃಕ್ಕಾಗಿ ಗಣೇಶ ಪ್ರತಿಷ್ಠಾಪನೆ ಮಾಡಿದ್ದರು. ನಮಗೆ ಅಂದೇ ಅನುಮತಿ ಸಿಕ್ಕಾಗಿದೆ. ನಿಬಂಧನೆಗಳಿಂದ ಹಬ್ಬ ಆಚರಿಸುವಂತಾಗಬಾರದು. ಸಂಭ್ರಮದಿಂದ ಆಚರಿಸಬೇಕು. ಹೊರಗಡೆಯಿಂದ ಬಂದು ಗಲಭೆ ಎಬ್ಬಿಸುವವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಇದಕ್ಕೆ ನಮ್ಮ ಬೆಂಬಲವಿದೆ.- ಎಸ್.ಎನ್.ಚನ್ನಬಸಪ್ಪ, ಶಾಸಕ