ಮೈಸೂರು: ಕಬಿನಿ ಜಲಾಶಯ ಭರ್ತಿಯಾಗುವ ಹಂತ ತಲುಪಿರುವ ಹಿನ್ನೆಲೆಯಲ್ಲಿ ಜನ ಹಾಗೂ ಜಾನುವಾರುಗಳಿಗೆ ಕುಡಿಯುವ ನೀರಿನ ಉದ್ದೇಶಕೋಸ್ಕರ ಜು.10 ರಿಂದ 16 ದಿನಗಳ ಕಾಲ ನೀರು ಹರಿಸಲು ಕಾವೇರಿ ನೀರಾವರಿ ನಿಗಮ ನಿರ್ಧರಿಸಿದೆ.
ಕಬಿನಿ ಜಲಾಶಯದ ಒಳ ಹರಿವಿನ ಪ್ರಮಾಣ ಹಾಗೂ ಒಟ್ಟಾರೆ ಜಲಾಶಯದಲ್ಲಿ ಸಂಗ್ರಹವಾಗಿರುವ ನೀರಿನ ಲಭ್ಯತೆ ಮೇರೆಗೆ ಕಬಿನಿ ಎಡದಂಡೆ ಹಾಗೂ ಬಲದಂಡೆ ನಾಲೆಗಳ ಮೂಲಕ ಜನ, ಜಾನುವಾರುಗಳಿಗೆ ಕುಡಿಯಲು ಅನುಕೂಲವಾಗುವಂತೆ ಕೆರೆ ಕಟ್ಟೆಗಳಿಗೆ ನೀರು ಹರಿಸಲು ಉದ್ದೇಶಿಸಲಾಗಿದೆ.
ಕಬಿನಿ ನೀರನ್ನು ಪ್ರಸ್ತುತ ಕುಡಿಯುವ ನೀರು ಹಾಗೂ ಜಾನುವಾರುಗಳ ಉಪಯೋಗಕ್ಕೆ ಮಾತ್ರ ಬಳಸಬೇಕು. ಮುಂದಿನ ದಿನಗಳಲ್ಲಿ ಜಲಾಶಯಕ್ಕೆ ಬರುವ ಒಳ ಹರಿವಿನ ಪ್ರಮಾಣ ಆಧರಿಸಿ ಅಚ್ಚುಕಟ್ಟು ಪ್ರದೇಶದಲ್ಲಿ ಖಾರೀಫ್ ಬೆಳೆಗಳನ್ನು ಬೆಳೆಯಲು ಕಬಿನಿ ಜಲಾಶಯದ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು ನಿಗಮ ಬಿಡುಗಡೆ ಮಾಡಿರುವ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಲಾಗಿದೆ.