ಲಖನೌ: ತಮ್ಮ ಮನೆಯಲ್ಲಿ ಚಿನ್ನಾಭರಣಗಳನ್ನು ಕದ್ದಿದ್ದಾಳೆ ಎಂಬ ಆರೋಪದ ಮೇಲೆ ಮಹಿಳೆಗೆ ಆಕೆಯ ಸಂಬಂಧಿಕರು ಚಿತ್ರ ಹಿಂಸೆ ನೀಡಿ ಹತ್ಯೆ ಮಾಡಿರುವ ಘಟನೆ ಉತ್ತರಪ್ರದೇಶದ ಘಾಜಿಯಾಬಾದ್ನಲ್ಲಿ ನಡೆದಿದೆ.
ಮೃತರನ್ನು ಸಮೀನಾ(23) ಎಂದು ಗುರುತಿಸಲಾಗಿದ್ದು, ಆಕೆಯ ಮೇಲೆ ಬ್ಲೇಡ್ ಹಾಗೂ ರಾಡ್ಗಳಿಂದ ಹಲ್ಲೆ ನಡೆಸಿ ಸಂಬಂಧಿಕರು ಹತ್ಯೆ ಮಾಡಿದ್ಧಾರೆ ಎಂದು ಪೊಲೀಸರು ತಿಳಿಸಿದ್ಧಾರೆ.
ಕೆಲ ದಿನಗಳ ಹಿಂದೆ ಸಮೀನಾ ಆಕೆಯ ಸಂಬಂಧಿಕರಾದ ಹೀನಾ ಮತ್ತು ರಮೇಶ್ ಅವರ ಮಗನ ಜನುಮದಿನದ ನಿಮಿತ್ತ ಅವರ ಮನೆಗೆ ಭೇಟಿ ನೀಡಿದ್ದರು. ಇದಾದ ಕೆಲ ಹೊತ್ತಿನ ಬಳಿಕ ಅವರ ಮನೆಯಲ್ಲಿದ್ದ ಒಡವೆಗಳು ಕಾಣೆಯಾಗಿದ್ದವು. ಈ ವೇಳೆ ಹೀನಾ ಹಾಗೂ ರಮೇಶ್ ಚಿನ್ನಾಭರಣಗಳನ್ನು ಸಮೀನಾ ಕದ್ದಿರಬಹುದು ಎಂದು ಶಂಕಿಸಿ ಆಕೆಯ ಮೇಲೆ ಬ್ಲೇಡ್, ರಾಡ್ನಿಂದ ಹಲ್ಲೆ ನಡೆಸಿದ್ಧಾರೆ.
ಆರೋಪಿಗಳಿಬ್ಬರು ಮನೆಯಲ್ಲಿ ಜೋರಾಗಿ ಮ್ಯೂಸಿಕ್ ಹಾಕಿಕೊಂಡು ನಿಜ ಒಪ್ಪಿಕೊಳ್ಳುವಂತೆ ಸಮೀನಾ ಮೇಲೆ ಅಮಾನುಷವಾಗಿ ಹಲ್ಲೆ ನಡೆಸಿದ್ಧಾರೆ. ಆಕೆಯ ದೇಹದ ಭಾಗಗಳನ್ನು ಸಹ ಈ ಇಬ್ಬರು ಬ್ಲೇಡ್ನಿಂದ ಕೊಯ್ದಿದ್ಧಾರೆ. ಹಲ್ಲೆಯಿಂದ ತೀವ್ರವಾಗಿ ಗಾಯಗೊಂಡಿದ್ದ ಸಮೀನಾ ಸ್ಥಳದಲ್ಲೇ ಮೃತಪಟ್ಟಿದ್ಧಾರೆ.
ಸಮೀನಾ ಮೃತಪಟ್ಟಿದ್ದರಿಮದ ಭಯಗೊಂಡ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದು, ಎರಡು ದಿನ ಕಳೆದರೂ ಮ್ಯೂಸಿಕ್ ಸೌಂಡ್ ಕಡಿಮೆ ಮಾಡದೆ ಇರುವುದನ್ನು ಗಮಿನಿಸಿದ ನೆರೆಯ ಮನೆಯವರು ಪೊಲೀಸರಿಗೆ ಮಾಹಿತಿ ನೀಡಿದ್ಧಾರೆ. ಅಧಿಕಾರಿಗಳು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದಾಗ ಕೃತ್ಯ ಬಯಲಿಗೆ ಬಂದಿದೆ.
ತಲೆಮಾರಿಸಿಕೊಂಡಿರುವ ಆರೋಪಿಗಳಿಗಾಗಿ ಬಲೆ ಬೀಸಲಾಗಿದ್ದು, ಶೀಘ್ರದಲ್ಲೇ ಬಂಧಿಸಲಾಗುವುದು ಎಂದು ಎಸಿಪಿ ರವಿ ಕುಮಾರ್ ತಿಳಿಸಿದ್ಧಾರೆ.