ನ್ಯೂಸ್

ಶವಗಳ ಗುರುತು ಪತ್ತೆಗೆ ಸಂಬಂಧಿಕರ ಪರದಾಟ

| ಕಿರಣ್ ಮಾದರಹಳ್ಳಿ ಚಾಮರಾಜನಗರ

ಕೈ, ಕಾಲು, ದೇಹದ ಅರ್ಧಭಾಗ, ಗುರುತು ಸಿಗದ ಮುಖವನ್ನು ನೋಡಿ ತಮ್ಮವರ ಶವಗಳನ್ನು ಪತ್ತೆ ಮಾಡಬೇಕಾದ ಭೀಕರ ಸ್ಥಿತಿಯಲ್ಲಿ ವಯನಾಡು ಕನ್ನಡಿಗರ ಸಂಬಂಧಿಕರಿದ್ದಾರೆ. ಈ ಶವ ನಮ್ಮವರದ್ದೇನಾ? ಎಂದು ದೇವರಲ್ಲಿ ಕೇಳಿಕೊಳ್ಳುತ್ತಿದ್ದಾರೆ.

ಎರಡ್ಮೂರು ದಿನಗಳಿಂದ ನಾಪತ್ತೆಯಾಗಿದ್ದ ಮೂಲತಃ ಚಾಮರಾಜನಗರ ತಾಲೂಕಿನ ವೆಂಕಟಯ್ಯಛತ್ರ ನಿವಾಸಿ, ಚೂರಲ್​ವುಲಾದಲ್ಲಿದ್ದ ರಾಜೇಂದ್ರ(ರಾಜನ್-50) ಮೃತದೇಹ ಸಿಕ್ಕಿರುವುದಾಗಿ ಜಿಲ್ಲಾಡಳಿತ ಬುಧವಾರ ಸಂಜೆ ಅಧಿಕೃತವಾಗಿ ಘೋಷಣೆ ಮಾಡಿತ್ತು. ಹಣೆ, ಮೂಗು, ಬಾಯಿ ಕಲಸಿಕೊಂಡಿದ್ದ ಮೃತದೇಹದಲ್ಲಿ ಬೇರೆ ಭಾಗಗಳನ್ನು ನೋಡಿ ರಾಜೇಂದ್ರನೇ ಎಂದು ಖಚಿತಪಡಿಸಬೇಕಾಗಿತ್ತು. ಶವವನ್ನು ಸೂಕ್ಷ್ಮವಾಗಿ ಗಮನಿಸುತ್ತಲೇ ಇದ್ದ ಸಂಬಂಧಿಕರು ಅಂತ್ಯಕ್ರಿಯೆ ವೇಳೆಗೆ ಈ ಮೃತದೇಹ ರಾಜೇಂದ್ರ ಅವರದ್ದಲ್ಲ ಎಂದು ಅಧಿಕಾರಿಗಳಿಗೆ ತಿಳಿಸಿದ್ದಾರೆ. ನಾಪತ್ತೆಯಾಗಿರುವ ಮತ್ತೊಬ್ಬರನ್ನು ಹುಡುಕುತ್ತಿದ್ದವರು ರಾಜೇಂದ್ರ ಎನ್ನಲಾದ ಮೃತದೇಹದ ಚಹರೆ ಗಮನಿಸಿ ಇದು ನಮ್ಮ ಕಡೆಯವರದ್ದು ಎನ್ನುತ್ತಿದ್ದಾರೆ. ಮೂಲತಃ ತಿ.ನರಸೀಪುರ ನಿವಾಸಿಗಳಾದ, ಮುಂಡಕೈನಲ್ಲಿ ನೆಲೆಸಿದ್ದ ಮಹದೇವಮ್ಮ ಕುಟುಂಬದ 9 ಜನರ ನಾಪತ್ತೆ ವಿಚಾರದಲ್ಲೂ ಗೊಂದಲ ಮುಂದುವರಿದಿದೆ. ಶ್ರೇಯಾ(19) ಮೃತದೇಹ ಪತ್ತೆಯಾಗಿ ಅಂತ್ಯಕ್ರಿಯೆ ಮುಗಿದಿದೆ. ಉಳಿದ 8 ಜನರಲ್ಲಿ ಶಿವಣ್ಣ(50) ಅವರ ಶವವನ್ನು ಗುರುತಿಸಲಾಗಿದ್ದು, ಅಂತ್ಯಕ್ರಿಯೆ ನೆರವೇರಿದೆ. ಗುರುವಾರ ಬೆಳಗ್ಗೆ ಸಾವಿತ್ರಿ(52) ಮೃತದೇಹ ಸಿಕ್ಕಿದೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಆದರೆ ಮುಖ ಗುರುತು ಹಿಡಿಯಲು ಸಾಧ್ಯವಾಗಿಲ್ಲ. ಸಂಬಂಧಿಕರು ಇವರು ಸಾವಿತ್ರಿ ಅಲ್ಲ ಎನ್ನುತ್ತಿದ್ದಾರೆ. ಕಾಲು, ಬೆರಳು ಮತ್ತು ಇನ್ನಿತರ ಅಂಗಾಂಗಗಳನ್ನು ಮಾತ್ರ ನೋಡಿ ಸಾವಿತ್ರಿ ಅವರನ್ನು ಗುರುತಿಸಬೇಕಾದ ಸ್ಥಿತಿಯಲ್ಲಿ ಸಂಬಂಧಿಕರು ಇದ್ದಾರೆ.

ಕರ್ನಾಟಕದ 18 ಜನರು ಮೃತ : ಚಾಮರಾಜನಗರ ಜಿಲ್ಲೆಯ 4, ಮೈಸೂರಿನ 9, ಕೊಡಗಿನ 3, ಮಂಡ್ಯದ ಇಬ್ಬರು ಸೇರಿ ಕರ್ನಾಟಕ ಮೂಲದ ಒಟ್ಟು 18 ಜನರು ಮೃತಪಟ್ಟಿದ್ದಾರೆ. ಇವರಲ್ಲಿ 7 ಮೃತದೇಹಗಳ ಗುರುತು ಪತ್ತೆಯಾಗಿದ್ದು, ಅಂತ್ಯಕ್ರಿಯೆಯೂ ಮುಗಿದೆ. ನಾಪತ್ತೆಯಾಗಿರುವ 5 ಜನರು ಹುಡುಕಾಟ ಮುಂದುವರಿದಿದೆ. ಗುರುವಾರ 3 ಮೃತದೇಹಗಳು ಸಿಕ್ಕಿವೆ. ಉಳಿದಿರುವ 3 ಶವಗಳು ಸಂಬಂಧಿಕರಿಗೆ ಗೊಂದಲ ಉಂಟು ಮಾಡಿವೆ.

ಚಾಮರಾಜನಗರದ ಪುಟ್ಟಸಿದ್ದಿ(62), ರಾಣಿ(52) ಅಂತ್ಯಕ್ರಿಯೆ ಮುಗಿದಿದೆ. ರಾಜೇಂದ್ರ ಮೃತದೇಹ ಗೊಂದಲದಲ್ಲೇ ಶವ ಸಂಸ್ಕಾರವಾಗಿದೆ. ನಾಪತ್ತೆಯಾಗಿರುವ ಈತನ ಪತ್ನಿ ರತ್ನಮ್ಮ ಇನ್ನೂ ಸಿಕ್ಕಿಲ್ಲ. ಮೈಸೂರಿನ ಶ್ರೇಯಾ(19), ಶಿವಣ್ಣ(45), ಕೊಡಗಿನ ರೋಹಿತ್(9), ದರ್ಶಿನಿ(19), ದೊರೆಸ್ವಾಮಿ (52) ಅಂತ್ಯಕ್ರಿಯೆಯಾಗಿದೆ. ಸವಿತಾ (44), ದಿವ್ಯಾ (35), ಅಶ್ವಿನಿ (13), ರಕ್ಷಿತ್ ಕೃಷ್ಣ (10) ಸುಳಿವು ಸಿಕ್ಕಿಲ್ಲ. ಮಂಡ್ಯದ ನಿಹಾಲ್ (7.5), ಲೀಲಾವತಿ(50), ಮೈಸೂರಿನ ಗುರುಮಲ್ಲ (70), ಸಾವಿತ್ರಿ (52), ಸಿದ್ದರಾಜು ಮೃತದೇಹಗಳು ಗುರುವಾರ ಸಿಕ್ಕಿದೆ.

ಕಾಲá--ಚಪ್ಪಲಿ ನೋಡಿ ಪತ್ತೆ: ಮಹದೇವಮ್ಮನ ಮತ್ತೊಬ್ಬ ಪುತ್ರ ಸಿದ್ದರಾಜು (42) ಕಾಲು ಸಿಕ್ಕಿದೆ. ದೇಹವೆಲ್ಲ ಛಿದ್ರಗೊಂಡಿದ್ದರೂ ಕಾಲಿನಲ್ಲಿ ಚಪ್ಪಲಿ ಹಾಗೆಯೇ ಇತ್ತಂತೆ. ಇದನ್ನು ಗಮನಿಸಿ ಮೃತದೇಹವು ಸಿದ್ದ ರಾಜು ಎಂದು ಸಂಬಂಧಿಕರು ಪತ್ತೆ ಮಾಡಿದ್ದಾರೆ. ಇದು ಸಿದ್ದರಾಜುನೋ ಅಥವಾ ಅಲ್ಲವೋ ಎನ್ನುವುದು ಖಚಿತವಾಗಿ ಅವರಿಗೆ ತಿಳಿಯುತ್ತಿಲ್ಲ.

ಶವ ಗುರುತಿಗೆ ಡಿಎನ್​ಎ ಪರೀಕ್ಷೆ: ಮಹದೇವಮ್ಮ ಪುತ್ರ ಗುರುಮಲ್ಲ(70) ಅವರದ್ದು ಎನ್ನಲಾಗುತ್ತಿರುವ ಮೃತದೇಹವನ್ನು ಇತರ ನಾಲ್ವರು ತಮ್ಮ ಕಡೆಯವರೆಂದು ಹೇಳುತ್ತಿದ್ದಾರೆ. ಗುರುಮಲ್ಲ ಅವರ ಮುಖದ ಮೇಲಿನ ಮಚ್ಚೆ ಆಧರಿಸಿ ಸಂಬಂಧಿಕರು ಮೃತದೇಹ ಗುರುಮಲ್ಲನೇ ಎಂದು ಗುರುತಿಸಿದ್ದರು. ಆದರೆ ಇಲ್ಲೇ ಬೇರೆ ಶವಗಳನ್ನು ಹುಡುಕುತ್ತಿರುವವರು ಇದು ನಮ್ಮವರ ಶವ ಎನ್ನುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಡಿಎನ್​ಎ ಪರೀಕ್ಷೆ ನಡೆದಿದೆ ಎಂದು ಗುರುಮಲ್ಲ ಸಂಬಂಧಿ ಲಕ್ಷ್ಮೀ ತಿಳಿಸಿದ್ದಾರೆ.

ಮರಳಿ ಕುಟುಂಬ ಸೇರಿದ ಸಂತ್ರಸ್ತರು: ಭೂಕುಸಿತ ದುರಂತದಲ್ಲಿ ಗಾಯಗೊಂಡಿದ್ದ ಗುಂಡ್ಲುಪೇಟೆ ತಾಲೂಕಿನ ತ್ರಿಯಂಭಕಪುರ ಗ್ರಾಮದ ಸ್ವಾಮಿಶೆಟ್ಟಿ ಹಾಗೂ ಮಂಡ್ಯ ಜಿಲ್ಲೆ ಮಳವಳ್ಳಿಯ ರಾಧಾ ಅವರನ್ನು ಕಂದಾಯ ಅಧಿಕಾರಿಗಳು ಸುರಕ್ಷಿತವಾಗಿ ಕುಟುಂಬದವರ ಬಳಿಗೆ ಸೇರಿಸಿದ್ದಾರೆ.

ಮೃತರ ಸಂಖ್ಯೆ 300ರ ಸಮೀಪ

ವಯನಾಡು: ಕೇರಳದ ಭೀಕರ ಭೂಕುಸಿತದಲ್ಲಿನ ಮರಣ ಪ್ರಮಾಣ ಹೆಚ್ಚುತ್ತಲೇ ಇದ್ದು, ಸಾವಿಗೀಡಾದವರ ಸಂಖ್ಯೆ ಗುರುವಾರ 291ಕ್ಕೆ ತಲುಪಿದೆ. ಮತ್ತೊಂದೆಡೆ ನಾಪತ್ತೆ ಆಗಿರುವ 200 ಮಂದಿ ಇನ್ನೂ ಪತ್ತೆಯಾಗಿಲ್ಲ. ರಕ್ಷಣಾ ಕಾರ್ಯಾಚರಣೆ ಮುಂದುವರಿದಿದ್ದು, ಮಾನವಸೇತು ಹಾಗೂ ರೋಪ್ ಮೂಲಕ ಜನರನ್ನು ರಕ್ಷಿಸಿ ಸ್ಥಳಾಂತರಿಸುವ ಕಾರ್ಯ ನಡೆಯುತ್ತಿದೆ. ಭೂಕುಸಿತದಲ್ಲಿ 80 ಸಾವಿರಕ್ಕೂ ಅಧಿಕ ಚದರ ಮೀಟರ್ ವಿಸ್ತೀರ್ಣದ ಜಾಗ ಜರಿದು ಹೋಗಿದ್ದು, ಇರುವೈಫುಜ ನದಿಯಲ್ಲಿ ಸುಮಾರು 8 ಕಿ.ಮೀ. ಉದ್ದಕ್ಕೂ ಮಣ್ಣಿನ ರಾಶಿ ಹರಿದಿದೆ. ಮತ್ತೊಂದೆಡೆ ಚೂರಲ್​ವುಲಾದಲ್ಲಿ ಭಾರಿ ಮಳೆ ಆಗುತ್ತಿದ್ದು, ಬೆಟ್ಟಗಳಿಂದ ಬಂಡೆಗಳು ಉರುಳಲಾರಂಭಿಸಿವೆ. ಸೇನೆ, ಎನ್​ಡಿಆರ್​ಎಫ್ ಮತ್ತು ರಾಜ್ಯದ ರಕ್ಷಣಾ ತಂಡಗಳು ದುರ್ಗಮ ಪ್ರದೇಶದಲ್ಲಿ ಸವಾಲುಗಳ ನಡುವೆ ಕಾರ್ಯಾಚರಣೆಯಲ್ಲಿ ತೊಡಗಿವೆ.

ಡಾರ್ಕ್ ಟೂರಿಸಂ ಎಚ್ಚರಿಕೆ: ದುರಂತ ಹಿನ್ನೆಲೆಯಲ್ಲಿ ಕೇರಳ ಪೊಲೀಸರು ‘ಡಾರ್ಕ್ ಟೂರಿಸಂ’ ಎಚ್ಚರಿಕೆ ನೀಡಿದ್ದಾರೆ. ಅರ್ಥಾತ್, ಬಾಧಿತ ಪ್ರದೇಶ ಗಳಿಗೆ ಯಾರೂ ಪ್ರವಾಸ ಬರಬೇಡಿ, ಅದು ರಕ್ಷಣಾ ಕಾರ್ಯಕ್ಕೆ ಅಡ್ಡಿ ಉಂಟಾಗುತ್ತದೆ ಎಂದು ಪೊಲೀಸರು ಸೂಚಿಸಿದ್ದಾರೆ.

ಮುಂದುವರಿದ ರಕ್ಷಣಾ ಕಾರ್ಯ: ಸುರಿಯುವ ಮಳೆಯ ನಡುವೆಯೂ ರಕ್ಷಣಾ ತಂಡದಿಂದ ಮೃತದೇಹಗಳ ಹುಡುಕಾಟ ಗುರುವಾರವೂ ಮುಂದುವರಿಯಿತು. ವಯನಾಡಿನಲ್ಲಿ ಭೂಮಿ ಕುಸಿದಿದ್ದರೆ 60-70 ಕಿ.ಮೀ. ದೂರಲ್ಲಿರುವ ಮಲ್ಲಪ್ಪುರಂ ಜಿಲ್ಲೆಯವರೆಗೆ ಶವಗಳು ತೇಲಿಹೋಗಿವೆ. ಈ ಹಿನ್ನೆಲೆಯಲ್ಲಿ ಚಲಿಯಾರ್ ನದಿ ಪಾತ್ರದಲ್ಲಿ ಶೋಧ ಕಾರ್ಯ ಮುಂದುವರಿದಿದೆ. ಕೈ, ಕಾಲು, ರುಂಡ, ಮುಂಡ ಬೇರ್ಪಟ್ಟ ರೀತಿಯಲ್ಲಿ ಮೃತದೇಹಗಳು ಸಿಗುತ್ತಿವೆ. ಸಂತ್ರಸ್ತರ ಕೇಂದ್ರದಲ್ಲಿ ಮೆಡಿಕಲ್ ಕ್ಯಾಂಪ್ ಹಮ್ಮಿಕೊಳ್ಳಲಾಗಿತ್ತು. ಗಾಯಾಳುಗಳಿಗೆ ಚಿಕಿತ್ಸೆ, ಗಂಭೀರ ಗಾಯಾಳುಗಳನ್ನು ಆಸ್ಪತ್ರೆಗೆ ರವಾನೆ ಮಾಡಲಾಯಿತು. ರಕ್ತದೊತ್ತಡ, ಮಧುಮೇಹ ಇರುವವರಿಗೆ ಆರೋಗ್ಯ ನೆರವು ಒದಗಿಸಲಾಯಿತು

ಮಕ್ಕಳು, ಸೊಸೆಯಂದಿರು, ಮೊಮ್ಮಕ್ಕಳ ಬದಲು ನಾನು ಸತ್ತು ಹೋಗಿದ್ದರೆ ಚೆನ್ನಾಗಿರುತ್ತಿತ್ತು. ಕಾಲೇಜು, ಹಾಸ್ಟೆಲ್ ಅಂತ ಹೊರಗೆ ಇದ್ದಿದ್ದರೆ ಮೊಮ್ಮಕ್ಕಳು ಬದುಕಿರುತ್ತಿದ್ದರು. ತಂದೆ-ತಾಯಿ ಇಲ್ಲದ ಮಕ್ಕಳನ್ನು ಓದಿಸೋರು ಯಾರು? ಒಬ್ಬ ಮೊಮ್ಮಗಳಿಗೆ ಮದುವೆ ಮಾಡಬೇಕು ಅಂದುಕೊಂಡಿದ್ವಿ. ಅವಳು ನಿನ್ನೆ ಹೆಣವಾಗಿದ್ದಾಳೆ. ಮತ್ತೊಬ್ಬರ ದೇಹ ಸಿಕ್ಕಿದೆ. ಆದ್ರೆ ಗುರುತಿಸೋಕೆ ಆಗಿಲ್ಲ. ಯಾರೂ ಬದುಕಿ ಬರಲ್ಲ ಅಂತ ನಿಶ್ಚಯ ಮಾಡಿಕೊಂಡಿದ್ದೇನೆ. | ಮಹದೇವಮ್ಮ ತಿ.ನರಸೀಪುರ ತಾಲೂಕು, ಉಕ್ಕಲಗೆರೆ ಗ್ರಾಮಸ್ಥೆ