ಬೆಂಗಳೂರು: ಗುಜರಿ ವ್ಯಾಪಾರಿ ಮನೆಯಲ್ಲಿ 2.5 ಕೆಜಿ ಚಿನ್ನಾಭರಣ ಕಳವು ಪ್ರಕರಣದಲ್ಲಿ ವ್ಯಾಪಾರಿ ಸಂಬಂಧಿಕನೇ ಕಳ್ಳ ಎಂಬುದು ಪೊಲೀಸ್ ತನಿಖೆಯಲ್ಲಿ ಬೆಳಕಿಗೆ ಬಂದಿದ್ದು, ಆರೋಪಿಯನ್ನು ಬಂಧಿಸಲಾಗಿದೆ.
ತಿಲಕನಗರದ ಮಹಮ್ಮದ್ ರಫೀಕ್ (30) ಬಂಧಿತ. ಗುಜರಿ ಅಂಗಡಿ ಮಾಲೀಕ ಶಹಾ ನವಾಜ್ ಮನೆಯಲ್ಲಿ ಆರೋಪಿ ಸೆ.23ರಂದು 2.5 ಕೆಜಿ ಚಿನ್ನಾಭರಣ ಮತ್ತು 10 ಲಕ್ಷ ರೂ. ನಗದು ದೋಚಿದ್ದ. ಆರೋಪಿಯನ್ನು ಬಂಧಿಸಿ 1.10 ಕೋಟಿ ರೂ. ಮೌಲ್ಯದ 1 ಕೆಜಿ 800 ಗ್ರಾಂ ಆಭರಣ ಮತ್ತು 74 ಸಾವಿರ ರೂ. ನಗದು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸ್ ಆಯುಕ್ತ ಬಿ. ದಯಾನಂದ್ ತಿಳಿಸಿದ್ದಾರೆ.
ಎಸ್‌ಆರ್‌ಕೆ ಗಾರ್ಡನ್ 2ನೇ ಕ್ರಾಸ್‌ನಲ್ಲಿ ನೆಲೆಸಿರುವ ಗುಜರಿ ವ್ಯಾಪಾರಿ ಶಹಾ ನವಾಜ್, ಮಗಳ ಮದುವೆಗಾಗಿ ಹಣ ಮತ್ತು ಚಿನ್ನಾಭರಣ ಖರೀದಿಸಿದ್ದರು. ಶಹಾ ನವಾಜ್ ಸಂಬಂಧಿಯಾದ ರಫೀಕ್, ಪಿಯುಸಿ ಓದು ಅರ್ಧಕ್ಕೆ ಬಿಟ್ಟಿದ್ದ. ಸಾಲದ ಆ್ಯಪ್‌ನಲ್ಲಿ 16 ಲಕ್ಷ ರೂ. ಪಡೆದಿದ್ದ. ಕೆಲಸ ಇಲ್ಲದೆ ಸಾಲ ಮಾಡಿಕೊಂಡು ಓಡಾಡುತ್ತಿದ್ದ ರಫೀಕ್, ಗುಜರಿ ವ್ಯಾಪಾರಿ ಕುಟುಂಬದ ಶ್ರೀಮಂತಿಕೆ ನೋಡಿ ಹೊಟ್ಟೆಕಿಚ್ಚು ಪಡುತ್ತಿದ್ದ. ಅಲ್ಲದೆ, ಸಾಲ ತೀರಿಸಲು ಕಳ್ಳತನಕ್ಕೆ ರಫೀಕ್ ಪ್ಲ್ಯಾನ್ ಮಾಡಿದ್ದ.
ಶಹಾ ನವಾಜ್ ಕುಟುಂಬದ ಬೈಕ್ ಬಳಸಲು ಕೀ ಕೊಟ್ಟಾಗ, ಅದರಲ್ಲಿದ್ದ ಮನೆಯ ಬೀಗವನ್ನು ಜಯನಗರದಲ್ಲಿ ನಕಲಿ ಮಾಡಿಸಿಕೊಂಡು ಮೂರು ತಿಂಗಳಿಂದ ಕಳ್ಳತನಕ್ಕೆ ಹೊಂಚು ಹಾಕಿ ಕಾಯುತ್ತಿದ್ದ. ಸೆ.23ರಂದು ವ್ಯಾಪಾರಿ ಕುಟುಂಬ, ಸಂಬಂಧಿಕರ ಮದುವೆಗೆಂದು ರಾಮನಗರಕ್ಕೆ ತೆರಳಿತ್ತು.
ಇದೇ ಅವಕಾಶಕ್ಕಾಗಿ ಕಾಯುತ್ತಿದ್ದ ರಫೀಕ್, ತನ್ನ ಬೈಕ್ ನಂಬರ್ ಪ್ಲೇಟ್ ಬದಲಾಯಿಸಿ ನಕಲಿ ಕೀ ಬಳಸಿ ವ್ಯಾಪಾರಿ ಮನೆಯ ಮೊದಲ ಮಹಡಿ ಬಾಗಿಲ ಬೀಗ ತೆಗೆದು ಒಳಗೆ ನುಗ್ಗಿ ಬೀರುವಿನಲ್ಲಿದ್ದ ಚಿನ್ನಾಭರಣಗಳು ಮತ್ತು 8ರಿಂದ 10 ಲಕ್ಷ ರೂ. ನಗದು ಕಳವು ಮಾಡಿದ್ದ. ಸೆ.25ರ ತಡರಾತ್ರಿ 1 ಗಂಟೆಗೆ ಶಹಾ ನವಾಜ್ ಕುಟುಂಬ ವಾಪಸ್ ಬಂದಾಗ, ಕಳ್ಳತನ ಆಗಿರುವುದು ಬೆಳಕಿಗೆ ಬಂದಿತ್ತು. ವ್ಯಾಪಾರಿ ಕೊಟ್ಟ ದೂರಿನ ಮೇರೆಗೆ ತಿಲಕನಗರ ಪೊಲೀಸರು, ಸ್ಥಳ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.