ನ್ಯೂಸ್

ಸಂಪಾದಕೀಯ: ಬೆಂಗಳೂರಿಗೆ ಕಾಯಕಲ್ಪ

ಬಾಬುಪ್ರಸಾದ್​ ಮೋಡಿಸ್​

ಬೆಂಗಳೂರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿರುವ ನಗರ. ಐಟಿ-ಬಿಟಿ ಮತ್ತಿತರ ಉದ್ಯಮಗಳ ಕಾರಣಕ್ಕಾಗಿ ಜಾಗತಿಕ ಉದ್ಯಮ ಮುಖಂಡರು ಇಲ್ಲಿಗೆ ಬರುತ್ತಿರುತ್ತಾರೆ. ಇದಲ್ಲದೆ, ವಿಶ್ವದ ಬೇರೆ ಬೇರೆ ಭಾಗಗಳ ರಾಜಕೀಯ, ಸಾಮಾಜಿಕ ಹಾಗೂ ರಾಜತಾಂತ್ರಿಕ ನಾಯಕರು ಕೂಡ ಆಗಮಿಸುತ್ತಿರುತ್ತಾರೆ.

ಹಾಗೇ, ವಿಪುಲ ಅವಕಾಶಗಳ ನಗರವಾದ್ದರಿಂದಾಗಿ ದೇಶದ ಬೇರೆ ಬೇರೆ ರಾಜ್ಯಗಳ ಜನರೂ ಬರುತ್ತಾರೆ. ಈಗ ಬೆಂಗಳೂರಿನ ಆಡಳಿತ ಇತಿಹಾಸದಲ್ಲಿ ಹೊಸದೊಂದು ಅಧ್ಯಾಯ ಶುರುವಾಗಿದೆ. ಮೇ 15ರಿಂದ ಗ್ರೇಟರ್ ಬೆಂಗಳೂರು ಆಡಳಿತ ವ್ಯವಸ್ಥೆ ಜಾರಿಗೆ ಬಂದಿದೆ. ಇದರೊಂದಿಗೆ, ಬಿಬಿಎಂಪಿ ಜಾಗದಲ್ಲಿ ಹೊಸ ಆಡಳಿತ ಅಡಿಯಿಟ್ಟಿದೆ. ಇದು ಕೇವಲ ಹೆಸರಿನ ಬದಲಾವಣೆ ಆಗದೆ, ಬೆಂಗಳೂರಿನ ಸಮಗ್ರ ಆಡಳಿತದಲ್ಲಿ ನಿಜಾರ್ಥದಲ್ಲಿ ಬದಲಾವಣೆ ಸಾಕಾರವಾಗಬೇಕು ಎಂಬುದು ಜನರ ನಿರೀಕ್ಷೆ. ಹಾಗಂತ, ತಕ್ಷಣಕ್ಕೆ ಆಡಳಿತದಲ್ಲಿ ಬದಲಾವಣೆ ಆಗುವುದಿಲ್ಲ.

ಬಿಬಿಎಂಪಿ ವತಿಯಿಂದಲೇ ದೈನಂದಿನ ಆಡಳಿತಾತ್ಮಕ ಕಾರ್ಯಗಳು ನಡೆಯುತ್ತವೆ. ಗ್ರೇಟರ್ ಬೆಂಗಳೂರನ್ನು ಪೂರ್ಣ ಪ್ರಮಾಣದಲ್ಲಿ ಅಸ್ತಿತ್ವಕ್ಕೆ ತರಲು ನಾಲ್ಕು ತಿಂಗಳ ಗಡುವು ವಿಧಿಸಲಾಗಿದೆ. ಹೊಸ ಪಾಲಿಕೆಗಳ ರಚನೆ, ವ್ಯಾಪ್ತಿ, ಸಂಪನ್ಮೂಲ ಕ್ರೋಡೀಕರಣ, ಆಡಳಿತ ವ್ಯವಸ್ಥೆ, ಚುನಾವಣೆ ಇತ್ಯಾದಿ ಪ್ರಕ್ರಿಯೆಯನ್ನು ಆ ಅವಧಿಯೊಳಗೆ ಮುಗಿಸಬೇಕಿದೆ. ಹೊಸ ವ್ಯವಸ್ಥೆ ಮೂರು ಹಂತಗಳನ್ನು ಒಳಗೊಳ್ಳಲಿದ್ದು, ಮೇಲಿನ ಹಂತದ ಗ್ರೇಟರ್ ಬೆಂಗಳೂರು ಪ್ರಾಧಿಕಾರಕ್ಕೆ ಮುಖ್ಯಮಂತ್ರಿ ಅಧ್ಯಕ್ಷರಾಗಿರಲಿದ್ದು, ಬೆಂಗಳೂರು ನಗರಾಭಿವೃದ್ಧಿ ಸಚಿವರು ಉಪಾಧ್ಯಕ್ಷರಾಗಿರಲಿದ್ದಾರೆ. ಉಳಿದಂತೆ, ನಗರಪಾಲಿಕೆಗಳು ಹಾಗೂ ವಾರ್ಡ್ ಸಮಿತಿಗಳು ಅಧಿಕಾರಿವರ್ಗದ ಜೊತೆ ಆಡಳಿತದಲ್ಲಿ ಮುಖ್ಯ ಪಾತ್ರ ವಹಿಸಲಿವೆ.

ಬಿಬಿಎಂಪಿ ಆಡಳಿತದಲ್ಲಿ ನಿರೀಕ್ಷಿಸಿದಷ್ಟು ಅಭಿವೃದ್ಧಿ ಕಾಣದ ಹಿನ್ನೆಲೆಯಲ್ಲಿ, ಬೆಂಗಳೂರಿನ ಸಮಗ್ರ ಅಭಿವೃದ್ಧಿಯನ್ನು ದೃಷ್ಟಿಯಲ್ಲಿರಿಸಿಕೊಂಡು ಹೊಸ ವ್ಯವಸ್ಥೆಯನ್ನು ತರಲಾಗಿದೆ. ವೇಗದ ಬೆಳವಣಿಗೆ ಕಾಣುತ್ತಿರುವ ಜಾಗತಿಕ ನಗರಗಳಲ್ಲಿ ಬೆಂಗಳೂರು ಸಹ ಮುಂಚೂಣಿಯಲ್ಲಿದೆ. ಹಾಗೇ ಇಲ್ಲಿನ ಸಮಸ್ಯೆಗಳು ಸಹ ವೇಗವಾಗಿ ಪ್ರಚಾರ ಪಡೆಯುತ್ತವೆ. ಸಂಚಾರ ಸಿಕ್ಕು, ಅಸಮರ್ಪಕ ಕಸ ವಿಲೇವಾರಿ, ಸ್ವಚ್ಛತೆ, ಚರಂಡಿ ವ್ಯವಸ್ಥೆ, ಅಯೋಜಿತ ಬೆಳವಣಿಗೆ, ಮಳೆಗಾಲದಲ್ಲಿ ಎದುರಾಗುವ ಸಮಸ್ಯೆಗಳು, ಜನರಿಗೆ ಅಗತ್ಯ ಮೂಲಸೌಕರ್ಯಗಳನ್ನು ಕಲ್ಪಿಸುವುದು, ಸರಿಯಾದ ಸಮಯಕ್ಕೆ ಕಾಮಗಾರಿ ಮುಗಿಯದೆ ಜನರಿಗೆ ತೊಂದರೆ - ಇವೆಲ್ಲ ಅನೇಕ ವರ್ಷಗಳಿಂದ ಇರುವ ಸವಾಲುಗಳು.

ಇದರ ಜೊತೆಗೆ, ಈ ಮಹಾನಗರ ಮತ್ತಷ್ಟು ಆಯಾಮಗಳನ್ನು ಪಡೆಯುತ್ತಿದೆ. ಸುಮಾರು 15 ವರ್ಷಗಳ ಹಿಂದೆಯೇ ಯೋಜಿಸಲಾದ ಐದು ಉಪನಗರಗಳ ಯೋಜನೆ ಇನ್ನೂ ಕಾರ್ಯಗತವಾಗಿಲ್ಲ. ಮುಂಬರುವ ವರ್ಷಗಳಲ್ಲಿ ಇವೂ ಗ್ರೇಟರ್ ಬೆಂಗಳೂರು ವ್ಯಾಪ್ತಿಗೆ ಬರುತ್ತವೆ. ಈ ಎಲ್ಲವನ್ನೂ ದೃಷ್ಟಿಯಲ್ಲಿಟ್ಟುಕೊಂಡು ಹೊಸ ಆಡಳಿತ ವ್ಯವಸ್ಥೆಯನ್ನು ಸರಿಯಾದ ರೀತಿಯಲ್ಲಿ ಜಾರಿಗೆ ತರುವ ಮೂಲಕ ಬ್ರಾ್ಯಂಡ್ ಬೆಂಗಳೂರು ಇಮೇಜನ್ನು ಹೆಚ್ಚಿಸುವ ದೊಡ್ಡ ಸವಾಲು ಸರ್ಕಾರದ ಮುಂದಿದೆ. ಆ ಬದ್ಧತೆಯನ್ನು ಜನಪ್ರತಿನಿಧಿಗಳು ಹಾಗೂ ಅಧಿಕಾರಿವರ್ಗ ತೋರಬೇಕಿದೆ. ಆಡಳಿತ ವ್ಯವಸ್ಥೆಯ ಹೆಸರು ಬದಲಾದರಷ್ಟೇ ಸಾಲದು; ಅದರ ಪರಿಣಾಮ ಕಣ್ಣೆದುರಿಗೆ ಗೋಚರಿಸಿದಲ್ಲಿ ಮಾತ್ರ ಸಾರ್ಥಕ.