ನ್ಯೂಸ್

ತಾಂತ್ರಿಕ ಕಾರಣ ನೀಡಿ ಪರಿಹಾರ ಘೋಷಣೆ ನಿರಾಕರಣೆ ಸಲ್ಲ: ಹೈಕೋರ್ಟ್ ಅಭಿಮತ

ಬೆಂಗಳೂರು: ಮೃತ ಮಗುವಿನ ವಯಸ್ಸಿನಲ್ಲಿ ಗೊಂದಲವಿದೆ ಎಂಬ ನೆಪ ನೀಡಿ ಪರಿಹಾರ ನಿರಾಕರಿಸುವುದಕ್ಕೆ ಸಾಧ್ಯವಾಗದು ಎಂದಿರುವ ಹೈಕೋರ್ಟ್, 2012ರಲ್ಲಿ ರೈಲು ಅಪಘಾತದಲ್ಲಿ ಮೃತಪಟ್ಟ 8 ವರ್ಷದ ಬಾಲಕನ ಕುಟುಂಬಕ್ಕೆ 8 ಲಕ್ಷ ರೂ. ಪರಿಹಾರ ನೀಡುವಂತೆ ರೈಲ್ವೆ ಇಲಾಖೆಗೆ ನಿರ್ದೇಶನ ನೀಡಿದೆ.

ತಾಂತ್ರಿಕ ಕಾರಣಗಳನ್ನು ನೀಡಿ ಪರಿಹಾರ ಘೋಷಣೆಗೆ ನಿರಾಕರಿಸಿದ್ದ ರೈಲು ಅಪಘಾತಗಳ ಪರಿಹಾರ ನ್ಯಾಯ ಮಂಡಳಿಯ ಆದೇಶವನ್ನು ಪ್ರಶ್ನಿಸಿ, ಮೃತ ಬಾಲಕನ ಪಾಲಕರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಹಂಚಾಟೆ ಸಂಜೀವಕುಮಾರ್ ಅವರ ಏಕಸದಸ್ಯ ಪೀಠ ಈ ಆದೇಶ ನೀಡಿದೆ. ಅಲ್ಲದೆ ಜೀವಕ್ಕೆ ಹಾನಿಯಾಗಿರುವಂತಹ ಸನ್ನಿವೇಶದಲ್ಲಿ ತಾಂತ್ರಿಕ ಕಾರಣಗಳಿಗೆ ಬದಲಾಗಿ ನ್ಯಾಯಕ್ಕೆ ಆದ್ಯತೆ ನೀಡಬೇಕು ಎಂದು ಪೀಠ ಹೇಳಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ದೂರು, ಎ್ಐಆರ್, ಮರಣೋತ್ತರ ಪರೀಕ್ಷಾ ವರದಿ ಮತ್ತು ಸಾಕ್ಷ್ಯಾಧಾರಗಳನ್ನು ಪರಿಶೀಲಿಸಿದ ಪೀಠ, ಮೃತ ಮಗುವಿನ ವಯಸ್ಸು ವ್ಯತ್ಯಾಸವಿದೆ ಎಂಬ ಕಾರಣ ನೀಡಿ ಪರಿಹಾರ ನಿರಾಕರಿಸಲಾಗು ಎಂದಿದೆ. ಮೃತ ಬಾಲಕ ಅಪಘಾತದ ಪರಿಣಾಮ ಸಾವನಪ್ಪಿರುವುದು ಸಾಕ್ಷ್ಯಗಳು ಸ್ಪಷ್ಟಪಡಿಸುತ್ತದೆ.

ಆದರೂ ಪರಿಹಾರ ಘೋಷಣೆ ಮಾಡುವುದಕ್ಕೆ ನಿರಾಕರಿಸಿರುವ ನ್ಯಾಯಾಧೀಕರಣದ ಆದೇಶವನ್ನು ಕಾನೂನಿನಲ್ಲಿ ಸಮರ್ಥನೆ ಮಾಡಿಕೊಳ್ಳುವುದಕ್ಕೆ ಸಾಧ್ಯವಿಲ್ಲ. ಅದರಲ್ಲಿ ಜೀವಕ್ಕೆ ಹಾನಿಯಾಗಿರುವ ಪ್ರಕರಣಗಳಲ್ಲಿ ತಾಂತ್ರಿಕ ಕಾರಣಗಳಿಗಿಂತಲೂ ನ್ಯಾಯಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ನ್ಯಾಯಪೀಠ ಹೇಳಿದೆ.