ನ್ಯೂಸ್

ಮಾವೋವಾದಿ ಮಾನಸಿಕತೆಯ ಕಾಂಗ್ರೆಸ್ ಪಕ್ಷವನ್ನು ತಿರಸ್ಕರಿಸಿರಿ: ಬಿಜೆಪಿ ಮಾಜಿ ಸಚಿವ

ಬೆಂಗಳೂರು: ಪ್ರಗತಿಗೂ ಕಾಂಗ್ರೆಸ್ ಪಕ್ಷಕ್ಕೂ ಆಗಿಬರುವುದಿಲ್ಲ. ಈ ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಇನ್ನೂ ಒಂದು ಹೆಜ್ಜೆ ಮುಂದಿಟ್ಟು, ಮಾವೋವಾದಿ ಮನಸ್ಥಿತಿಯನ್ನು ಹೊರಹಾಕಿದೆ. ಇಂತಹ ಪಕ್ಷವನ್ನು ಜನರು ತಿರಸ್ಕರಿಸಬೇಕು ಎಂದು ಬಿಜೆಪಿ ಮಾಜಿ ಸಚಿವ, ಶಾಸಕ ಎಸ್.ಸುರೇಶ್‌ಕುಮಾರ್ ಸಲಹೆ ನೀಡಿದರು.

ಪಕ್ಷದ ಮಾಧ್ಯಮ ಕೇಂದ್ರದಲ್ಲಿ ಬುಧವಾರ ಕರೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದ ಚುನಾವಣೆ ಪ್ರಣಾಳಿಕೆ ಮತ್ತು ಈ ಪ್ರಣಾಳಿಕೆ ಬಿಡುಗಡೆ ಮಾಡಿದ ಸಂದರ್ಭದಲ್ಲಿ ರಾಹುಲ್ ಗಾಂಧಿ ನೀಡಿದ ಹೇಳಿಕೆ ಗಮನಿಸಬೇಕು.

ಕಾಂಗ್ರೆಸ್ ನೇತೃತ್ವದ ಇಂಡಿ ಒಕ್ಕೂಟ ಅಧಿಕಾರಕ್ಕೆ ಬಂದರೆ ಜಾತಿ ಗಣತಿ ಸಮೀಕ್ಷೆ ನಡೆಸಲಾಗುವುದು. ವಿವರ ಗೊತ್ತಾದ ಬಳಿಕ ಜನಸಂಖ್ಯೆ ಆಧಾರದಲ್ಲಿ ಸಂಪತ್ತಿನ ವಿತರಣೆ ಮಾಡಿ, ಅಸಮಾನತೆಯನ್ನು ನಿವಾರಿಸುತ್ತೇವೆ ಎಂದು ಹೇಳಿದ್ದಾರೆ.

ರಾಹುಲ್ ಗಾಂಧಿ ಮೆಂಟರ್, ಕಾಂಗ್ರೆಸ್‌ನ ಸಾಗರೋತ್ತರ ಅಧ್ಯಕ್ಷ ಸ್ಯಾಮ್ ಪಿತ್ರೋಡಾ ಅವರು ಮೃತಪಟ್ಟ ವ್ಯಕ್ತಿಯ ಪಿತ್ರಾರ್ಜಿತ ಆಸ್ತಿಯಲ್ಲಿ ಶೇ.55ರಷ್ಟು ಜನರಿಗೆ ಹಂಚುವ ಕಾನೂನು ಜಾರಿಗೆ ತರಲಾಗುವುದು ಎಂದಿದ್ದಾರೆ.

ಜನರ ದುಡಿಮೆಗೆ, ಉತ್ತಮ ಬದುಕು ಕಟ್ಟಿಕೊಳ್ಳಲು ಅವಕಾಶ ಕಲ್ಪಿಸುತ್ತೇವೆ ಎಂದು ಹೇಳಿಲ್ಲ. ಆದರೆ ದುಡಿದವರ ಹಣ, ಏನೂ ದುಡಿಯದವರಿಗೆ ಹಂಚುತ್ತೇವೆ ಎನ್ನುವುದು ಮಾವೋವಾದಿ ಮಾನಸಿಕತೆಯಾಗಿದ್ದು, ಕಾಂಗ್ರೆಸ್ ಅದರ ಭಾಗವಾಗಿದೆ ಎಂದು ಸುರೇಶ್ ಕುಮಾರ್ ಕಳವಳ ವ್ಯಕ್ತಪಡಿಸಿದರು.

ದೇಶ ಒಡೆಯುವ ಹುನ್ನಾರ

ಕಾಂಗ್ರೆಸ್ ಸೇರಿ ಇಂಡಿ ಒಕ್ಕೂಟದ ಭಾಗಿದಾರ ಪಕ್ಷಗಳ ಮನಸ್ಥಿತಿ ಕಳವಳಕಾರಿಯಾಗಿದೆ. ಜಾತಿ, ಧರ್ಮ ಹೆಸರಿನಲ್ಲಿ ಕಾಂಗ್ರೆಸ್ ಪಕ್ಷ ವಿಭಜಿಸಿತು. ಕಾಂಗ್ರೆಸ್ ಜತೆ ಕೈಜೋಡಿಸಿರುವ ಒಕ್ಕೂಟದಲ್ಲಿನ ಪಕ್ಷಗಳು ದೇಶ ಒಡೆಯುವ ಹುನ್ನಾರ ಹೂಡಿವೆ ಎಂದು ಆರೋಪಿಸಿದರು.

ಭಾರತದ ಅಣ್ವಸ ಶಕ್ತಿಯನ್ನು ನಾಶಪಡಿಸುತ್ತೇವೆ ಎಂದು ಸಿಪಿಎಂ ಹೇಳುತ್ತದೆ. ಸನಾತನ ಧರ್ಮವನ್ನು ನಿರ್ನಾಮ ಮಾಡುತ್ತೇವೆ ಎಂದು ಡಿಎಂಕೆ ಸಾರುತ್ತದೆ. ಯುಎಪಿಎ ಕಾಯ್ದೆ ರದ್ದು ಮಾಡಲಾಗುವುದು ಎಂದು ಮುಸ್ಲಿಂ ಲೀಗ್ ಹೇಳುತ್ತದೆ.

ಅಪರಾಧಿಗಳಿಗೆ ಜೈಲಿಲ್ಲ, ಬೇಲ್ ನೀಡುವಂತಹ ಕಾನೂನು ಜಾರಿಗೊಳಿಸುತ್ತೇವೆ ಎಂದು ಕಾಂಗ್ರೆಸ್ ಧುರೀಣ ಚಿದಂಬರಂ ಹೇಳಿಕೆ ನೀಡಿದ್ದಾರೆ. ಭ್ರಷ್ಟಾಚಾರದ ಕುರಿತು ಲಾಲೂ ಪ್ರಸಾದ್ ಬೇರೊಂದು ವ್ಯಾಖ್ಯಾನ ನೀಡುತ್ತಾರೆ. ಭಾರತಕ್ಕೆ ಯಾವ ಗತಿ ತರಬಹುದು ಎಂದು ಇವರ ಹೇಳಿಕೆಗಳಿಂದ ಗೊತ್ತಾಗುತ್ತದೆ.

ದೆಹಲಿಯಲ್ಲಿ ತಾಯಿಗೊಂದು ಮನೆ, ಮಗ ರಾಹುಲ್ ಗಾಂಧಿಗೊಂದು ಮನೆ ಬೇಕು. ಆದರೆ ದೇಶದ ಸಂಪತ್ತು ಹಂಚಿಕೆ ಮಾಡಿ ಅಸಮಾನತೆ ನಿವಾರಿಸುತ್ತೇವೆ ಎನ್ನುತ್ತಾರೆ ಎಂದು ಸುರೇಶ್‌ಕುಮಾರ್ ಟೀಕಿಸಿದರು.

ಇದೇ ಸಂದರ್ಭದಲ್ಲಿ ಮಾಜಿ ಸಚಿವ ಡಾ.ಸಿ.ಎನ್.ಅಶ್ವತ್ಥ ನಾರಾಯಣ ಜತೆಗೂಡಿ ‘ಕಾಂಗ್ರೆಸ್ ಡೇಂಜರ್- ಕಾಂಗ್ರೆಸ್ ಪಾಪದ ಪುರಾಣ ತಿಳಿಯಲು ಕ್ಯೂಆರ್ ಕೋಡ್ ಸ್ಕಾೃನ್ ಮಾಡಿ’ ಎಂಬ ಪೋಸ್ಟರ್, ವಿಡಿಯೋ ತುಣುಕು ಬಿಡುಗಡೆ ಮಾಡಿದರು.