ಚಿಕ್ಕಮಗಳೂರು: ತಾಲೂಕಿನ ಸಿದ್ದಾಪುರದಲ್ಲಿ ನಡೆದಿರುವ ಮುತ್ತಮ್ಮ ಕೊಲೆ ಪ್ರಕರಣದ ಮರು ತನಿಖೆಗೆ ಒತ್ತಾಯಿಸಿ ಸಮಾನಮನಸ್ಕರ ವೇದಿಕೆ ಕಾರ್ಯಕರ್ತರು ನಗರದ ಆಜಾದ್ ವೃತ್ತದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.
ವೇದಿಕೆ ಅಧ್ಯಕ್ಷ ದಂಡರಮುಕ್ಕಿ ಶ್ರೀನಿವಾಸ್ ಮಾತನಾಡಿ, ಮುತ್ತಮ್ಮ ಅವರ ಕೊಲೆಯಾಗಿ ಹಲವು ದಿನಗಳೇ ಕಳೆದರೂ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ವಿಫಲರಾಗಿದ್ದಾರೆ ಎಂದು ದೂರಿದರು.
ಮುತ್ತಮ್ಮನನ್ನು ಕೊಲೆ ಮಾಡಿ ತೋಟದಲ್ಲಿ ಸುಟ್ಟು ಹಾಕಲಾಗಿದೆ. ಪ್ರಕರಣದ ಮಾಹಿತಿ ಗೊತ್ತಿದ್ದರೂ ತೋಟದ ಮಾಲೀಕ ಯಾವುದೆ ಮಾಹಿತಿಯನ್ನು ಪೊಲೀಸರಿಗೆ ನೀಡದೆ ಮುಚ್ಚಿಹಾಕಲು ಮುಂದಾಗಿದ್ದ. ಮೂಲ ಆರೋಪಿಗಳನ್ನು ಬಿಟ್ಟು ಬೇರೆ ವ್ಯಕ್ತಿಯನ್ನು ಬಂಧಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅಪರಾಧಿಗಳ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡು ಅನ್ಯಾಯಕ್ಕೊಳಗಾದ ಕಾರ್ಮಿಕರಿಗೆ ವಿತರಿಸಿ ಕುಟುಂಬಕ್ಕೆ ನ್ಯಾಯ ದೊರಕಿಸಬೇಕು. ಕಾರ್ಮಿಕರ ಹಿತ ಕಾಪಾಡುವಲ್ಲಿ ಕಾಫಿ ನಾಡಿನಲ್ಲಿ ತೋಟದ ಮಾಲೀಕರು ನಿರ್ಲಕ್ಷೃ ಧೋರಣೆ ಅನುಸರಿಸುತ್ತಿದ್ದಾರೆ. ಕಾರ್ಮಿಕ ಕಾನೂನುಗಳನ್ನು ಉಲ್ಲಂಘನೆ ಮಾಡಿರುವವರ ವಿರುದ್ಧ ಕಾರ್ಮಿಕ ಇಲಾಖೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಎಸ್‌ಡಿಪಿಐ ಮೂಡಿಗೆರೆ ತಾಲೂಕು ಅಧ್ಯಕ್ಷ ಚಂದ್ರು, ಶ್ರೀನಿವಾಸ್, ಉದ್ದಯ್ಯ, ಉಮೇಶ್, ಸಂತೋಷ್, ರಮೇಶ್, ವೆಂಕಟೇಶ್ ಇತರರಿದ್ದರು.