ನ್ಯೂಸ್

ಡ್ರಗ್ ಪೆಡ್ಲರ್ ಜತೆ ರಿಯಾ ನಂಟು?

ಮುಂಬೈ: ನಟ ಸುಶಾಂತ್ ಸಿಂಗ್ ಸಾವಿನ ಪ್ರಕರಣಕ್ಕೆ ಮಂಗಳವಾರ ಹೊಸ ತಿರುವು ಸಿಕ್ಕಿದೆ. ಇತ್ತೀಚೆಗೆ ಮುಂಬೈನಲ್ಲಿ ಬಂಧಿಸಲಾಗಿದ್ದ ಇಬ್ಬರು ಡ್ರಗ್ಸ್ ದಂಧೆಕೋರರಿಗೆ ಆರೋಪಿ ರಿಯಾ ಚಕ್ರವರ್ತಿ ಹಾಗೂ ಆಕೆಯ ಸಹೋದರ ಶುವಿಕ್ ಜತೆ ನೇರ ಸಂಪರ್ಕವಿತ್ತು ಎಂಬ ವಿಚಾರ ಬೆಳಕಿಗೆ ಬಂದಿದೆ.

ಸುಶಾಂತ್ ಸಾವಿನ ಹಿಂದೆ ಡ್ರಗ್ಸ್ ಜಾಲದ ಕೈವಾಡ ಇರುವ ಶಂಕೆ ವ್ಯಕ್ತವಾಗುತ್ತಿದ್ದಂತೆ ನಾರ್ಕೆಟಿಕ್ಸ್ ಕಂಟ್ರೋಲ್ ಬ್ಯುರೊ (ಎನ್​ಸಿಬಿ) ತನಿಖೆ ಚುರುಕುಗೊಳಿಸಿ, ಹಲವು ಶಂಕಿತರನ್ನು ವಿಚಾರಣೆಗೆ ಒಳಪಡಿಸುತ್ತಿದೆ. ರಿಯಾ ಚಕ್ರವರ್ತಿಯ ವಾಟ್ಸ್ ಆಪ್ ಚಾಟ್​ಗಳಿಂದ ಎನ್​ಸಿಬಿಗೆ ಡ್ರಗ್ಸ್ ದಂದೆಕೋರರ ಕುರಿತು ಸುಳಿವು ಸಿಕ್ಕಿತ್ತು ಎನ್ನಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಮೂರು ಬಾರಿ ರಿಯಾ ವಿಚಾರಣೆ ನಡೆದಿದ್ದು, ಅವರನ್ನು ಬಂಧಿಸುವ ಸಾಧ್ಯತೆಯೂ ಇದೆ.

ರಿಯಾ ಪಾಲಕರನ್ನೂ ಸಿಬಿಐ ಅಧಿಕಾರಿಗಳು ಮಂಗಳವಾರ ವಿಚಾರಣೆ ನಡೆಸಿದ್ದಾರೆ. ಸುಶಾಂತ್​ರ ಸಹಾಯಕ ನೀರಜ್ ಸಿಂಗ್, ಸ್ನೇಹಿತ ಸಿದ್ಧಾರ್ಥ್ ಪಿಠಾನಿ, ಅಡುಗೆ ಕೆಲಸದ ಕೇಶವ್ ಮತ್ತು ಮಾಜಿ ವ್ಯವಸ್ಥಾಪಕಿ ಶ್ರುತಿ ಮೋದಿಯನ್ನು ಮುಂಬೈನ ಡಿಆರ್​ಡಿಒ ಅತಿಥಿ ಗೃಹದಲ್ಲಿ ಪ್ರತ್ಯೇಕವಾಗಿ ವಿಚಾರಣೆಗೆ ಒಳಪಡಿಸಲಾಗಿದೆ. ಸುಶಾಂತ್ ಪ್ರಕರಣದಲ್ಲಿ ಸಂಭಾವ್ಯ ಹಣ ಅಕ್ರಮ ವರ್ಗಾವಣೆ ಬಗ್ಗೆ ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳು ಗೋವಾ ಮೂಲದ ಹೋಟೆಲ್ ಉದ್ಯಮಿ ಗೌರವ್ ಆರ್ಯ ಅವರನ್ನು ಸತತ ಎರಡನೇ ದಿನ ವಿಚಾರಣೆಗೆ ಒಳಪಡಿಸಿದ್ದಾರೆ.

ಖಿನ್ನತೆ ಔಷಧ ಸೇವಿಸುತ್ತಿದ್ದ ನಟ

ಸುಶಾಂತ್​ರ ಮಾನಸಿಕ ಸಮಸ್ಯೆ ಬಗ್ಗೆ ಅವರ ಕುಟುಂಬಕ್ಕೆ ಮುಂಚೆಯೇ ತಿಳಿದಿತ್ತು ಎಂಬ ಅಂಶ ಬೆಳಕಿಗೆ ಬಂದಿದೆ. ಸುಶಾಂತ್ ಸಿಂಗ್ ಮುಂಬೈನ ಅಪಾರ್ಟ್ ಮೆಂಟ್​ನಲ್ಲಿ ಶವವಾಗಿ ಪತ್ತೆಯಾಗುವ ಆರು ದಿನ ಮೊದಲು ಜೂನ್ 8ರಂದು ಅವರ ಸಹೋದರಿ ಪ್ರಿಯಾಂಕಾ ಜತೆ ನಡೆಸಿದ ಚಾಟ್ ಸಂದೇಶಗಳು ಲಭ್ಯವಾಗಿವೆ. ಅದರಲ್ಲಿ ಪ್ರಿಯಾಂಕಾ, ಒಂದು ವಾರ ಕಾಲ ಲಿಬ್ರಿಯಮ್ ದಿನನಿತ್ಯ ನೆಕ್ಸಿಟೊ ಮತ್ತು ಮಾನಸಿಕ ಆತಂಕ ಉಂಟಾದಾಗ ಲೋನಾಜೆಪ್ ಔಷಧಗಳನ್ನು ತೆಗೆದುಕೊಳ್ಳುವಂತೆ ಸುಶಾಂತ್​ಗೆ ಸೂಚಿಸಿದ್ದಾರೆ. ಪ್ರಿಯಾಂಕಾ ಸೂಚಿಸಿದ ಮಾತ್ರೆಗಳನ್ನು ಖಿನ್ನತೆ ಮತ್ತು ಆತಂಕದಂತಹ ಮಾನಸಿಕ ಖಾಯಿಲೆಗಳಿಗೆ ಚಿಕಿತ್ಸೆ ನೀಡಲು ಬಳಸಲಾಗುತ್ತದೆ.