ನ್ಯೂಸ್

ಉಚಿತ ಚಿಕನ್ ಸಿಗದ ಬೇಸರಕ್ಕೆ ಚಿಕನ್​ನಿಂದಲೂ ಕೊರನಾ ವೈರಸ್ ಸೋಂಕು ಬರುತ್ತದೆ ಎಂದು​ ಕತೆ ಕಟ್ಟಿದ್ದ ಯುವಕನ ಬಂಧನ

ಚೆನ್ನೈ: ಚಿಕನ್​ ಮೂಲಕವೂ ಮಾರಕ ಕೊರೊನಾ ವೈರಸ್​ ಸೋಂಕು ತಗಲುತ್ತದೆ ಎಂದು ವದಂತಿಯನ್ನು ಹಬ್ಬಿಸಿದ್ದ ಯುವಕನನ್ನು ತಮಿಳುನಾಡು ಪೊಲೀಸರು ಕಡಲೂರು ಜಿಲ್ಲೆಯಲ್ಲಿ ಬುಧವಾರ ಬಂಧಿಸಿದ್ದಾರೆ.

ಬಂಧಿತ 18 ವರ್ಷದ ಯುವಕನಾಗಿದ್ದು, ನೈವೇಲಿಯ ನಿವಾಸಿ. ಸ್ನೇಹಿತನ ಶಾಪ್​ನಲ್ಲಿ ಉಚಿತವಾಗಿ ಚಿಕನ್ ಸಿಗದ ಕಾರಣ ಆತ ಈ ವದಂತಿಯನ್ನು ಹಬ್ಬಿಸಿದ್ದ ಎಂದು ಪೊಲೀಸ್​ ವಿಚಾರಣೆ ವೇಳೆ ಬಹಿರಂಗವಾಗಿದೆ.

ಆರೋಪಿಯು ನೈವೇಲಿಯ ಸೂಪರ್​ ಬಜಾರ್​ನಲ್ಲಿರುವ ಸ್ನೇಹಿತನ ಶಾಪ್​ನಿಂದ ಆಗಾಗ ಉಚಿತವಾಗಿ ಚಿಕನ್​ ಪಡೆಯುತ್ತಿದ್ದನಂತೆ. ಆದರೆ, ಇತ್ತೀಚೆಗೆ ಸ್ನೇಹಿತ ಫಕ್ರುದ್ದೀನ್​ ಅಲಿ ಅಹಮ್ಮದ್​ ಚಿಕನ್​ ನೀಡಲು ನಿರಾಕರಿಸಿದ್ದಾನೆ. ಬಳಿಕ ಆತನ ವಿರುದ್ಧ ಸೇಡು ತೀರಿಸಿಕೊಳ್ಳಲು ಚಿಂತಿಸುತ್ತಿದ್ದ ಆತನ ತಲೆಗೆ ಹೊಳೆದಿದ್ದೇ ಅಪಾಯಕಾರಿ ಕೊರೊನಾ ವೈರಸ್​ ಸೋಂಕು.

ಬಳಿಕ ಕತೆಯೊಂದನ್ನು ಹೆಣೆದ ಆರೋಪಿ ಸೂಪರ್​ ಬಜಾರ್​ನ ಸಹನಾ ಚಿಕನ್​ ಸೆಂಟರ್​ನಿಂದ ಕೊಂಡು ತಂದ ಮಾಂಸದಿಂದ ತನ್ನ ಸ್ನೇಹಿತ ಅನಾರೋಗ್ಯಕ್ಕೆ ತುತ್ತಾಗಿದ್ದಾನೆ. ಆತನನ್ನು ನೈವೇಲಿಯ ಲಿಗ್ನೈಟ್​ ಕಾರ್ಪೊರೇಶನ್​ ಆಸ್ಪತ್ರೆಗೆ ದಾಖಲಿಸಲಾಯಿತು. ಬಳಿಕ ಕಡಲೂರು ಸರ್ಕಾರಿ ಆಸ್ಪತ್ರೆಯ ಸಹಾಯದಿಂದ ಹೆಚ್ಚಿನ ಚಿಕಿತ್ಸೆಗಾಗಿ ಪುದುಚೆರಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಯಿತು, ಅವನಿಗೆ ಕೊರೊನಾ ವೈರಸ್​ ತಗಲಿದೆ ಎಂದು ಸುಳ್ಳುಸುದ್ದಿ ಬರೆದು ವಾಟ್ಸ್​ಆ್ಯಪ್​ನಲ್ಲಿ ಮಂಗಳವಾರ ಪೋಸ್ಟ್​ ಮಾಡಿದ್ದ. ಅದಾದ ಕೆಲವೇ ಕ್ಷಣಗಳಲ್ಲಿ ಪೋಸ್ಟ್​ ವೈರಲ್​ ಆಗಿತ್ತು.

ಇದರಿಂದ ಎಚ್ಚೆತ್ತ ಪೊಲೀಸರು ಬುಧವಾರ ಆರೋಪಿಯನ್ನು ಬಂಧಿಸಿದ್ದಾರೆ. ಬಳಿಕ ಚಿಕನ್​ ಮೂಲಕ ಕೊರೊನಾ ವೈರಸ್​ ಹರಡುವುದಿಲ್ಲ ಎಂಬ ಆರೋಪಿಯ ಹೇಳಿಕೆಯ ವಿಡಿಯೋ ಮಾಡಿ ಪೊಲೀಸರೆ ಹರಿಬಿಟ್ಟು ಸ್ಪಷ್ಟನೆ ನೀಡಿದ್ದಾರೆ. ಸಾರ್ವಜನಿಕ ಜೀವನದಲ್ಲಿ ಹುಡುಗಾಟವಾಡಿದ ಆರೋಪದಲ್ಲಿ ಭಾರತೀಯ ದಂಡ ಸಂಹಿತೆ ಸೆಕ್ಷನ್​ 505(2) ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್​ 67ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಇತ್ತೀಚಿನ ವರದಿಯ ಪ್ರಕಾರ ವದಂತಿಯ ಪರಿಣಾಮವಾಗಿ ಮಾರುಕಟ್ಟೆಯಲ್ಲಿ ಚಿಕನ್​ ಮಾರಾಟ ಭಾರಿ ಪ್ರಮಾಣದಲ್ಲಿ ಇಳಿಕೆಯಾಗಿದೆ. ಕಳೆದ ತಿಂಗಳಿನಿಂದ ಬರೋಬ್ಬರಿ 50 ರಷ್ಟು ಚಿಕನ್​ ಮಾರಾಟ ಕುಸಿದಿದೆ. ಚಿಕನ್​ ಬೆಲೆಯೂ ಕೂಡ 70 ರಷ್ಟು ಇಳಿದಿದೆ. ಮಾರಾಕ ಕೊರೊನಾ ವೈರಸ್​ನಿಂದ ಚೀನಾ ಸೇರಿ ಹಲವೆಡೆ ಸಾವಿರಾರು ಮಂದಿ ಈಗಾಗಲೇ ಸಾವಿಗೀಡಾಗಿದ್ದಾರೆ. ಆದರೆ, ಇದು ಚಿಕನ್​ ಮೂಲಕ ಹರಡುವುದಿಲ್ಲ ಎಂದು ವೈದ್ಯರೇ ಧೃಡಪಡಿಸಿದ್ದಾರೆ. (ಏಜೆನ್ಸೀಸ್​)