ಸೊರಬದಲ್ಲಿ ಪ್ರತಿಬಿಂಬ ಸಾಗರ-ಸೊರಬ ಕಾರ್ಯಕ್ರಮ ಪೂರ್ವಭಾವಿ ಸಭೆಯಲ್ಲಿ ಸಂಚಾಲಕ ಎಚ್.ರಾಜಾರಾಮರಾವ್ ಹೊಸಬಾಳೆ ಮಾತನಾಡಿದರು. ಡಾ. ಎಂ.ಕೆ.ಭಟ್, ಚಂದ್ರಶೇಖರ ಭಟ್ ಹೊರಬಟ್ಟೆ, ರಘುನಂದನ್ ಇತರರಿದ್ದರು. 
ನ್ಯೂಸ್

ಪ್ರತಿಬಿಂಬ ಸಾಗರ-ಸೊರಬ ಡಿಸೆಂಬರ್ 8ಕ್ಕೆ

ಸೋಮಶೇಖರ ಎನ್

ಸೊರಬ: ಶ್ರೀ ಅಖಿಲ ಹವ್ಯಕ ಮಹಾಸಭಾದಿಂದ ಡಿ.8ರಂದು ತಾಲೂಕಿನ ನಿಸರಾಣಿ ಗ್ರಾಮದ ವಿದ್ಯಾಭಿವೃದ್ಧಿ ಸಂಘ ಪ್ರೌಢಶಾಲೆ ಆವರಣದಲ್ಲಿ ಪ್ರತಿಬಿಂಬ ಸಾಗರ-ಸೊರಬ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಪ್ರತಿಬಿಂಬ ಸಂಚಾಲಕ ಎಚ್.ರಾಜಾರಾಮ ರಾವ್ ಹೊಸಬಾಳೆ ಹೇಳಿದರು.

ಪಟ್ಟಣದ ಜೈಮಾತಾ ಸಭಾಂಗಣದಲ್ಲಿ ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ಬೆಳಗ್ಗೆ 9ಕ್ಕೆ ರಾಷ್ಟ್ರಪ್ರಶಸ್ತಿ ಪುರಸ್ಕೃತ ವೈದ್ಯ ಡಾ. ಎಂ.ಕೆ.ಭಟ್ ಕಾರ್ಯಕ್ರಮ ಉದ್ಘಾಟಿಸುವರು. ಪ್ರಗತಿಪರ ಕೃಷಿಕ ಸೀತಾರಾಮಯ್ಯ ಕಟ್ಟಿನಕೆರೆ, ಸಾಗರದ ತೋಟಗಾರಿಕಾ ಇಲಾಖೆ ಸಹಾಯಕ ನಿರ್ದೇಶಕ ಬಿ.ಎಸ್.ಮಹಾಬಲೇಶ್ವರ ಉಪಸ್ಥಿತರಿರುವರು ಎಂದು ತಿಳಿಸಿದರು.

ಬೆಳಗ್ಗೆ 10ರಿಂದ ಸ್ಪರ್ಧಾ ಸೌರಭ ನಡೆಯಲಿದ್ದು, ಆರು ವರ್ಷದ ಮಕ್ಕಳಿಗೆ ಶ್ಲೋಕ ಪಠಣ, ಚಿತ್ರಕ್ಕೆ ಬಣ್ಣ ತುಂಬುವುದು, 6ರಿಂದ 12 ವರ್ಷದವರಿಗೆ ಭಗವದ್ಗೀತಾ ಕಂಠಪಾಠ ಮೊದಲನೇ ಅಧ್ಯಾಯದ ಮೊದಲ 15 ಶ್ಲೋಕ ಮತ್ತು ಚಿತ್ರಕಲೆ, 18ವರ್ಷದೊಳಗಿವರಿಗೆ ರಸಪ್ರಶ್ನೆ, ಆಶುಭಾಷಣ, 18ವರ್ಷ ಮೇಲ್ಪಟ್ಟವರಿಗೆ ಹವ್ಯಕ ಸಂಪ್ರದಾಯ ಗೀತೆ, ರಂಗೋಲಿ ಸ್ಪರ್ಧೆ ಏರ್ಪಡಿಸಲಾಗಿದೆ. ಮಧ್ಯಾಹ್ನ 2ರಿಂದ 4ರವರೆಗೆ ಸಾಂಸ್ಕೃತಿಕ ಕಾರ್ಯಕ್ರಮ, ಸಂಗೀತ, ಗಮಕ ಹಾಗೂ ಭರತನಾಟ್ಯ ಪ್ರದರ್ಶನ ನಡೆಯಲಿದೆ ಎಂದರು.

ಸಂಜೆ 4ಕ್ಕೆ ಸಮಾರೋಪ ಸಮಾರಂಭದಲ್ಲಿ ಅಖಿಲ ಹವ್ಯಕ ಮಹಾಸಭಾ ಮಾಜಿ ಪ್ರಧಾನ ಕಾರ್ಯದರ್ಶಿ ಜಿ.ಜಿ.ಹೆಗಡೆ ತಲೆಕೇರಿ, ವಿದ್ಯಾಭಿವೃದ್ಧಿ ಸಂಘದ ಅಧ್ಯಕ್ಷ ಎನ್.ಎಚ್.ಶ್ರೀಪಾದರಾವ್, ಸಾಗರದ ಆಯುರ್ವೇದ ವೈದ್ಯ ಡಾ. ನಿರಂಜನ ಹೆಗಡೆ, ಸಂಘಟನೆ ನಿರ್ದೇಶಕಿ ರಾಜಲಕ್ಷ್ಮೀ ದೇವಪ್ಪ ಉಪಸ್ಥಿತರಿರುವರು ಎಂದು ತಿಳಿಸಿದರು.

ರಾಷ್ಟ್ರಪ್ರಶಸ್ತಿ ಪುರಸ್ಕೃತ ವೈದ್ಯ ಡಾ. ಎಂ.ಕೆ.ಭಟ್ ಮಾತನಾಡಿ, ಅಖಿಲ ಹವ್ಯಕ ಮಹಾಸಭಾದಿಂದ ಡಿ.27ರಿಂದ 29ರವರೆಗೆ ಬೆಂಗಳೂರಿನಲ್ಲಿ ತೃತೀಯ ವಿಶ್ವ ಹವ್ಯಕ ಸಮ್ಮೇಳನ ನಡೆಯಲಿದೆ ಎಂದರು. ಪ್ರತಿಬಿಂಬದ ಸಹ ಸಂಚಾಲಕ ಚಂದ್ರಶೇಖರ ಭಟ್ ಹೊರಬಟ್ಟೆ, ಪ್ರತಿನಿಧಿಗಳಾದ ರಘುನಂದನ್ ಪಟೇಲ್ ಕೆರೆಕೊಪ್ಪ, ಎನ್.ಚಂದನ್, ಡಾ. ಅಶೋಕ ವಿ.ಹೊಸಬಾಳೆ ಉಪಸ್ಥಿತರಿದ್ದರು.