ಹುಣಸೂರು ನಗರದ ಸರ್ಕಾರಿ ಆದರ್ಶ ಪ್ರೌಢಶಾಲೆಯಲ್ಲಿ ಆಯೋಜಿಸಿದ್ದ ಕಾನೂನಿನ ಅರಿವು ನೆರವು ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು. ಎಸ್.ಪಿ.ಮಹದೇವ್, ಅನಿತಾ, ಹೇಮಲತಾ, ಸಿ.ಹರೀಶ್‌ಕುಮಾರ್, ಎಚ್.ಕೆ.ಸಂದೀಪ್, ಎಸ್.ವೆಂಕಟೇಶ್ ಇತರರಿದ್ದರು.  
ನ್ಯೂಸ್

ರೀಲ್ಸ್ ಹುಚ್ಚಿನಿಂದ ಜೀವನ, ಜೀವ ಹಾಳು

ಹುಣಸೂರು : ರೀಲ್ಸ್ ಹುಚ್ಚಿಗೆ ಬಲಿಯಾಗಬೇಡಿ...ಅಪ್ರಾಪ್ತ ವಯಸ್ಕರಾದ ನೀವು ವಾಹನ ಚಲಾಯಿಸುವ ಹಟ ಬೇಡ...ಪ್ರೀತಿ ಪ್ರೇಮದ ಬಲೆಗೆ ಸಿಲುಕಿ ಭವಿಷ್ಯ ಕಳೆದುಕೊಳ್ಳಬೇಡಿ ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶೆ ಅನಿತಾ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ನಗರದ ಬಾಚಳ್ಳಿ ರಸ್ತೆಯಲ್ಲಿರುವ ಸರ್ಕಾರಿ ಆದರ್ಶ ಪ್ರೌಢಶಾಲೆಯಲ್ಲಿ ಶುಕ್ರವಾರ ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಸಹಯೋಗದಲ್ಲಿ ಆಯೋಜಿಸಿದ್ದ ಕಾನೂನು ಅರಿವು ನೆರವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಮೊಬೈಲ್‌ನ ಅತಿಯಾದ ಬಳಕೆ ವಿದ್ಯಾರ್ಥಿಗಳ ಭವಿಷ್ಯವನ್ನು ಹಾಳುಗೆಡವುತ್ತಿದೆ. ರೀಲ್ಸ್ ಹುಚ್ಚು ಅತಿರೇಕಕ್ಕೆ ಹೋಗಿದ್ದು, ಜೀವನ ಮತ್ತು ಜೀವ ಎರಡನ್ನೂ ವಿದ್ಯಾರ್ಥಿಗಳು ಕಳೆದುಕೊಳ್ಳುತ್ತಿದ್ದಾರೆ ಎಂದು ಬೇಸರಿಸಿದರು.

ಸಂವಿಧಾನ ನಮಗೆಲ್ಲರಿಗೂ ಹಕ್ಕುಗಳನ್ನು ನೀಡಿದೆ. ಜತೆಗೆ ಕರ್ತವ್ಯವನ್ನೂ ಬೋಧಿಸಿದೆ. 18 ವರ್ಷ ತುಂಬುವ ಮೊದಲೇ ರಸ್ತೆಗಳಲಿ ವಾಹನ ಚಾಲನೆ ಮಾಡಬೇಕೆನ್ನುವ ಹಟಕ್ಕೆ ಬೀಳದಿರಿ. ಅನಾಹುತಗಳು ಸಂಭವಿಸಿದರೆ ನಿಮ್ಮ ಪಾಲಕರು ಅಥವಾ ವಾಹನದ ಮಾಲೀಕರಿಗೆ ಶಿಕ್ಷೆ ನೀಡಲಾಗುತ್ತದೆ. ನಿಮ್ಮಿಂದ ನಿಮ್ಮ ಕುಟುಂಬಕ್ಕೆ ತೊಂದರೆಯಾಗಬಾರದೆನ್ನುವ ಕಾಳಜಿ ಮತ್ತು ಜವಾಬ್ದಾರಿ ನಿಮ್ಮಲ್ಲಿರಲಿ. ಓದುವ ಹರೆಯದಲ್ಲಿ ಪ್ರೀತಿ ಪ್ರೇಮಗಳಿಗೆ ಜಾಗವಿಲ್ಲ. ಅಪ್ರಾಪ್ತರು ಈ ಬಲೆಗೆ ಬಿದ್ದಲ್ಲಿ ಪೋಕ್ಸೋ ಕಾಯ್ದೆ ಜಾರಿಯ ಮೂಲಕ ಬದುಕು ದುಸ್ತರವಾಗಲಿದೆ ಎಂದು ಎಚ್ಚರಿಸಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಪಿ.ಮಹದೇವ್ ಮಾತನಾಡಿದರು. ವಕೀಲ ಎಸ್.ವೆಂಕಟೇಶ್ ಮೂಲಭೂತ ಹಕ್ಕುಗಳು ಮತ್ತು ಕರ್ತವ್ಯ ವಿಷಯದ ಕುರಿತು ವಿಶೇಷ ಉಪನ್ಯಾಸ ನೀಡಿದರು. ಸಹಾಯಕ ಸರ್ಕಾರಿ ಅಭಿಯೋಜಕಿ ಎಚ್.ಡಿ.ಪಾರ್ವತಿ, ಕ್ಷೇತ್ರ ಸಂಪನ್ಮೂಲ ಸಮನ್ವಯಾಧಿಕಾರಿ ಹೇಮಲತಾ, ತಾಲೂಕು ವಕೀಲರ ಸಂಘದ ಉಪಾಧ್ಯಕ್ಷ ಸಿ.ಹರೀಶ್‌ಕುಮಾರ್, ಕಾರ್ಯದರ್ಶಿ ಎಚ್.ಕೆ.ಸಂದೀಪ್, ಕಾರ್ಯಕ್ರಮ ಸಂಯೋಜಕ ಕುಮಾರ್, ಶಾಲೆಯ ಮುಖ್ಯಶಿಕ್ಷಕ ಚಂದ್ರಕುಮಾರ್, ಇಸಿಒ ಡಿ.ಕುಮಾರಸ್ವಾಮಿ ಮತ್ತು ವಿದ್ಯಾರ್ಥಿಗಳು ಇದ್ದರು.