ನ್ಯೂಸ್

ಎಥೆನಾಲ್ ಬಳಸುವ ವಾಹನಗಳ ಜಿಎಸ್​ಟಿ ತಗ್ಗಿಸಿ

ನವದೆಹಲಿ: ಎಥೆನಾಲ್ ಬಳಸುವ ವಾಹನಗಳ ಮೇಲಿನ ಸರಕು ಮತ್ತು ಸೇವಾ ತೆರಿಗೆಯನ್ನು (ಜಿಎಸ್​ಟಿ) ಶೇಕಡ 12ಕ್ಕೆ ಇಳಿಸುವ ಕುರಿತು ಜಿಎಸ್​ಟಿ ಮಂಡಳಿಯಲ್ಲಿ ರಾಜ್ಯಗಳ ಹಣಕಾಸು ಸಚಿವರು ರ್ಚಚಿಸಬೇಕಿದೆ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.

ಸೋಮವಾರ ನಡೆದ ಜೈವಿಕ ಇಂಧನ ಮತ್ತು ಟೆಕ್ ಎಕ್ಸ್​ಪೋ ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವ ಗಡ್ಕರಿ, ಪಳೆಯುಳಿಕೆ ಇಂಧನದ ಆಮದು ಕಡಿಮೆ ಮಾಡುವ ಮತ್ತು ಜೈವಿಕ ಇಂಧನದ ಬಳಕೆಯನ್ನು ಉತ್ತೇಜಿಸುವ ಅವಶ್ಯವಿದೆ ಎಂದು ಪ್ರತಿಪಾದಿಸಿದರು.

‘ನಮಗೆ ವಿವಿಧ ರಾಜ್ಯಗಳ ಹಣಕಾಸು ಸಚಿವರಿಂದ ಬೆಂಬಲ ಬೇಕಿದೆ. ನಾವು ಎಲ್ಲ ಹಣಕಾಸು ಸಚಿವರಿಗೆ ಮಾಡಲು ಪ್ರಯತ್ನಿಸುತ್ತೇವೆ’ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಮಗೆ ಭರವಸೆ ನೀಡಿರುವುದಾಗಿ ಹೇಳಿದ ಗಡ್ಕರಿ, ಇದರ ಯಶಸ್ಸಿಗೆ ಎಲ್ಲ ರಾಜ್ಯಗಳ ಸಹಕಾರ ಅಗತ್ಯ ಎಂದರು.

‘ಎಥೆನಾಲ್ ಬಳಸುವ ಕಾರುಗಳು ಮತ್ತು ಸ್ಕೂಟರ್ ಮೇಲೆ ಜಿಎಸ್​ಟಿಯನ್ನು ಕಡಿತಗೊಳಿಸುವ ಪ್ರಸ್ತಾವವನ್ನು ಜಿಎಸ್​ಟಿ ಮಂಡಳಿ ಸಭೆಯಲ್ಲಿ ಮಾಡುವಂತೆ ಈಗಾಗಲೇ ಮಹಾರಾಷ್ಟ್ರದ ಹಣಕಾಸು ಸಚಿವರು ಮತ್ತು ಉತ್ತರಪ್ರದೇಶದ ಮುಖ್ಯಮಂತ್ರಿ ಜತೆ ಪ್ರತ್ಯೇಕವಾಗಿ ಮಾತನಾಡಿದ್ದೇನೆ’ ಎಂದರು.

ತೆರಿಗೆ ಸ್ಲ್ಯಾಬ್ ಬಗ್ಗೆ ಚರ್ಚೆ: ಸೆಪ್ಟೆಂಬರ್ 9ರಂದು ಜಿಎಸ್​ಟಿ ಕೌನ್ಸಿಲ್ ಸಭೆ ನಡೆಯಲಿದ್ದು, ನಕಲಿ ಸರಕು ಮತ್ತು ಸೇವಾ ತೆರಿಗೆ ನೋಂದಣಿ ವಿರುದ್ಧದ ಕಾರ್ಯಾಚರಣೆಯ ಜೊತೆಗೆ ಆನ್​ಲೈನ್ ಗೇಮಿಂಗ್​ನ ತೆರಿಗೆ ಸ್ಲ್ಯಾಬ್ ಬದಲಿಸುವ ಕುರಿತಂತೆ ರ್ಚಚಿಸುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ. ಆನ್​ಲೈನ್ ಗೇಮಿಂಗ್​ಗೆ ಸಂಬಂಧಿಸಿದಂತೆ, ಕೇಂದ್ರ ಮತ್ತು ರಾಜ್ಯ ತೆರಿಗೆ ಅಧಿಕಾರಿಗಳು ಜಿಎಸ್​ಟಿ ಕೌನ್ಸಿಲ್ ಮುಂದೆ ವರದಿಯನ್ನು ಪ್ರಸ್ತುತಪಡಿಸಲಿದ್ದು, ಆ ಬಳಿಕ ಅಂತಿಮ ನಿರ್ಣಯ ತಳೆಯುವ ಸಾಧ್ಯತೆ ಇದೆ.

ಭಾರತವು ಪ್ರತಿ ವರ್ಷ 22 ಲಕ್ಷ ಕೋಟಿ ರೂ. ಮೌಲ್ಯದ ಪಳೆಯುಳಿಕೆ ಇಂಧನವನ್ನು ಆಮದು ಮಾಡಿಕೊಳ್ಳುತ್ತಿದೆ. ಇದು ವಾಯುಮಾಲಿನ್ಯಕ್ಕೆ ಸಂಬಂಧಿಸಿದ ಸಮಸ್ಯೆ ಮಾತ್ರವಲ್ಲದೆ ಆರ್ಥಿಕ ಸಮಸ್ಯೆಯೂ ಆಗಿದೆ. ಆದ್ದರಿಂದ ತೈಲ ಆಮದು ಪ್ರಮಾಣ ಕಡಿಮೆ ಮಾಡಬೇಕು ಮತ್ತು ಜೈವಿಕ ಇಂಧನದ ಬಳಕೆಗೆ ಉತ್ತೇಜನ ನೀಡಬೇಕು. | ನಿತಿನ್ ಗಡ್ಕರಿ ಕೇಂದ್ರ ರಸ್ತೆ ಸಾರಿಗೆ , ಮತ್ತು ಹೆದ್ದಾರಿಗಳ ಸಚಿವ