ಮುಖ್ಯಮಂತ್ರಿ ಸಿದ್ದರಾಮಯ್ಯ  
ನ್ಯೂಸ್

ರೆಡ್ಡಿ ಸಮುದಾಯದ ಅಭಿವೃದ್ಧಿ ನಿಗಮ ಸ್ಥಾಪಿಸಲು ಚಿಂತನೆ: ಸಿಎಂ ಸಿದ್ದರಾಮಯ್ಯ

ಬೆಂಗಳೂರು: ರೆಡ್ಡಿ ಸಮುದಾಯದ ಅಭಿವೃದ್ಧಿ ನಿಗಮ ಸ್ಥಾಪಿಸಲು ನಮ್ಮ ಸರ್ಕಾರ ಗಂಭೀರವಾಗಿ ಚಿಂತನೆ ನಡೆಸಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ರವೀಂದ್ರ ಕಲಾಕ್ಷೇತ್ರದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಶುಕ್ರವಾರ ಆಯೋಜಿಸಿದ್ದ ‘‘ಶ್ರೀಮಹಾಯೋಗಿ ವೇಮನ ಜಯಂತಿ’ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ನಾನು ಮೊದಲ ಬಾರಿಗೆ ಮುಖ್ಯಮಂತ್ರಿ ಆದಾಗ ಸರ್ಕಾರವೇ ವೇಮನ ಜಯಂತಿ ಆಚರಿಸಲು ಆದೇಶಿಸಿದೆ. ನಮ್ಮ ಸರ್ಕಾರ ಎಲ್ಲಾ ಜಾತಿ ಮತ್ತು ಧರ್ಮದ ಬಡವರ ಪರವಾಗಿ ಇರುತ್ತದೆ. ಎಲ್ಲಾ ಜಾತಿಯ ಬಡವರು ಮತ್ತು ಮಧ್ಯಮ ವರ್ಗದವರ ಪರವಾಗಿ ನಮ್ಮ ಸರ್ಕಾರ ಕಾರ್ಯಕ್ರಮಗಳನ್ನು ರೂಪಿಸುತ್ತಿದೆ ಮತ್ತು ಅದನ್ನು ಜಾರಿಗೆ ತರುತ್ತಿದೆ ಎಂದರು.
ಬಸವಣ್ಣ, ಕನಕದಾಸ, ಅಂಬೇಡ್ಕರ್, ವೇಮನ ಯಾರೂ ಒಂದು ಜಾತಿಗೆ ಸೀಮಿತರಾದವರಲ್ಲ. ಇವರೆಲ್ಲರೂ ವಿಶ್ವ ಮಾನವರು. ವೇಮನರಾದಿಯಾಗಿ ಬಸವಾದಿ ಶರಣರು ಮನುಕುಲದ ಆಸ್ತಿ. ಪ್ರತೀ ಮಗುವೂ ಹುಟ್ಟುತ್ತಾ ವಿಶ್ವ ಮಾನವ. ಬೆಳೆಯುತ್ತಾ ಅಲ್ಪಮಾನವರಾಗಿ ಬಿಡುತ್ತಾರೆ ಎಂದು ಕುವೆಂಪು ಹೇಳಿರುವ ಮಾತು ಸತ್ಯ. ವೇಮನ ಅವರು ಆಕಸ್ಮಿಕವಾಗಿ ರೆಡ್ಡಿ ಸಮುದಾಯದಲ್ಲಿ ಹುಟ್ಟಿದ್ದರೂ ಅವರು ಇಡೀ ಮನುಕುಲಕ್ಕೆ ಬೇಕಾದವರಾಗಿದ್ದರು ಎಂದು ವಿವರಿಸಿದರು.
ಶಿಕ್ಷಣ ಕಲಿತು ನಾವು ಮೌಡ್ಯ ಆಚರಿಸಬಾರದು. ಶಿಕ್ಷಣದ ಬೆಳಕಿನಿಂದ ನಾವು ಮೌಡ್ಯದಿಂದ ಹೊರಗೆ ಬರಬೇಕು. ವಿದ್ಯಾವಂತರೂ ಕೂಡ ಜಾತಿಗೆ ಅಂಟಿಕೊಳ್ಳುತ್ತಿದ್ದಾರೆ. ಶಿಕ್ಷಣ ಕಲಿತರೂ ಕೂಡ ಅಜ್ಞಾನಿಯಾದರೆ ಏನು ಪ್ರಯೋಜನಾ? ಎಂದು ಪ್ರಶ್ನಿಸಿದರು. ರೆಡ್ಡಿ ಜನಾಸಂಘ ಶಿಕ್ಷಣ ಸಂಸ್ಥೆಗೆ ಜಮೀನು ನೀಡುವಂತೆ ಬೇಡಿಕೆ ಇಟ್ಟಿದ್ದು, ರೆಡ್ಡಿ ಜನ ಸಂಘದ ಶಿಕ್ಷಣ ಸಂಸ್ಥೆಗೆ ಜಮೀನು ಒದಗಿಸಲು ನಮ್ಮ ಸರ್ಕಾರ ಸಿದ್ದವಿದೆ. ರಾಜ್ಯದ ಮೊದಲ ಮುಖ್ಯಮಂತ್ರಿ ಕೆ.ಸಿ.ರೆಡ್ಡಿ ಅವರ ಪುತ್ಥಳಿಯನ್ನು ಈಗಾಗಲೇ ವಿಧಾನಸೌಧದಲ್ಲಿ ನಿರ್ಮಿಸಲಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ, ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಕರ್ನಾಟಕ ರೆಡ್ಡಿ ಜನಸಂಘದ ಅಧ್ಯಕ್ಷ ಎಸ್.ಜಯರಾಮ ರೆಡ್ಡಿ, ಗಂಗಾವತಿ ಶಾಸಕ ಜನಾರ್ಧನರೆಡ್ಡಿ, ಮಾಜಿ ಸಚಿವ ಎಚ್.ಎಂ.ರೇವಣ್ಣ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಾರ್ಯದರ್ಶಿ ಮಂಜುಳಾ, ಲೇಖಕಿ ಹಾಗೂ ಜನಪದ ತಜ್ಞೆ ಡಾ.ಕೆ.ಆರ್.ಸಂಧ್ಯಾ ರೆಡ್ಡಿ ಸೇರಿ ಇತರರು ಉಪಸ್ಥಿತರಿದ್ದರು.

ರಾಮಲಿಂಗಾ ರೆಡ್ಡಿಯನ್ನು ಡಿಸಿಎಂ ಮಾಡಿ:
ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಭಾಷಣದ ಮಧ್ಯೆ ನಿಮ್ಮ ಜನಾಂಗದ ರಾಮಲಿಂಗಾರೆಡ್ಡಿ ಅವರು, ನಮ್ಮ ಪಕ್ಷದ ಹಿರಿಯ ನಾಯಕರಾಗಿದ್ದಾರೆ. ನಮ್ಮ ಸಂಪುಟದಲ್ಲಿ ಸಾರಿಗೆ ಸಚಿವರಾಗಿದ್ದು, ಅವರು ಉತ್ತಮ ಕೆಲಸ ಮಾಡುತ್ತಿದ್ದಾರೆ ಎಂದು ಮೆಚ್ಚುಗೆಯ ಮಾತುಗಳನ್ನಾಡಿರು. ಇದಕ್ಕೆ ಧ್ವನಿಗೂಡಿಸಿದ ಸಭಿಕರು ರಾಮಲಿಂಗಾರೆಡ್ಡಿ ಅವರನ್ನು ಡಿಸಿಎಂ ಮಾಡಿ ಎಂದು ಮುಖ್ಯಮಂತ್ರಿಗಳನ್ನು ಒತ್ತಾಯಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಿಎಂ ನಿಮ್ಮ ಬೇಡಿಕೆಯನ್ನು ಹೈಕಮಾಂಡ್‌ಗೆ ತಿಳಿಸುವುದಾಗಿ ಹೇಳಿ ಸಮಾಧಾನಪಡಿಸಿದರು.

ರಾಜ್ಯದ ಪ್ರಥಮ ಮುಖ್ಯಮಂತ್ರಿ ಕೆ.ಸಿ.ರೆಡ್ಡಿ ಹುಟ್ಟೂರಿನಲ್ಲಿ ಸ್ಮಾರಕ ನಿರ್ಮಿಸಲು ಸರ್ಕಾರದ ವತಿಯಿಂದ ಈಗಾಗಲೇ 20 ಎಕರೆ ಜಮೀನು ನೀಡಲಾಗಿದೆ. ಆದರೆ ಅದರ ಅಭಿವೃದ್ಧಿ ಸರಿಯಾಗಿಲ್ಲ ಎಂಬ ಮಾತುಗಳು ಕೇಳಿ ಬಂದಿವೆ. ಅಲ್ಲಿಗೆ ನಾನು ಖುದ್ದಾಗಿ ಭೇಟಿ ನೀಡಿ ಸ್ಮಾರಕವನ್ನು ಅಭಿವೃದ್ಧಿ ಮಾಡುವ ಕೆಲಸ ಮಾಡಲಾಗುವುದು.
ಶಿವರಾಜ್ ತಂಗಡಗಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ