ನ್ಯೂಸ್

ಖಾಲಿ ಹುದ್ದೆಗಳ ನೇಮಕಾತಿ; ನಕಲಿ ತಾತ್ಕಾಲಿಕ ಪಟ್ಟಿಗೆ ಬೆಚ್ಚಿಬಿದ್ದ ಮಂಡಳಿ

ಬೆಂಗಳೂರು: ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಹೆಸರಿನಲ್ಲಿ ನಕಲಿ ನೇಮಕಾತಿ ತಾತ್ಕಾಲಿಕ ಪಟ್ಟಿ ಬಿಡುಗಡೆ ಮಾಡಿರುವ ಸಂಬಂಧ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಂಡಳಿಯ ಅಧಿಕಾರಿ ಪಿ.ಶ್ವೇತಾ, ಈ ಕುರಿತು ದೂರು ಸಲ್ಲಿಸಿದ್ದಾರೆ. ಈ ಮೇರೆಗೆ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

2018ರಲ್ಲಿ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿಗೆ ಭರ್ತಿ ಮಾಡಲು ಕರ್ನಾಟಕ ಲೋಕಸೇವಾ ಆಯೋಗಕ್ಕೆ ವಹಿಸಿದ್ದರು. ನೇರ ನೇಮಕಾತಿ ಮಾಡಲು ಕೋರಿ ಕೋರ್ಟ್‌ನಲ್ಲಿ ಅರ್ಜಿ ವಿಚಾರಣೆ ಇರುವ ಕಾರಣ ನೇಮಕಾತಿ ಸಂಬಂಧ ಯಾವುದೇ ಪ್ರಕ್ರಿಯೆ ನಡೆದಿಲ್ಲ.

ಇದರ ನಡುವೆ ಮಂಡಳಿ ಅಧ್ಯಕ್ಷರ ಆಪ್ತ ಶಾಖೆ ವಿಭಾಗಕ್ಕೆ ದೂರವಾಣಿ ಕರೆ ಮಾಡಿದ ಅಪರಿಚಿತ ವ್ಯಕ್ತಿ, ದ್ವಿತೀಯ ದರ್ಜೆ ಸಹಾಯಕ ಹುದ್ದೆಗೆ ಅರ್ಜಿ ಸಲ್ಲಿಸಿದ್ದೆ. ಹುದ್ದೆಗಳ ನೇಮಕಾತಿಯ ತಾತ್ಕಾಲಿಕ ಆಯ್ಕೆಪಟ್ಟಿ ಪ್ರಕಟವಾಗಿದೆ. ಇದರ ಬಗ್ಗೆ ಹೆಚ್ಚಿನ ಮಾಹಿತಿ ಬೇಕೆಂದು ಕೋರಿದ್ದ. ನೇಮಕಾತಿಯೇ ನಡೆದಿಲ್ಲ. ತಾತ್ಕಾಲಿಕ ಆಯ್ಕೆ ಪಟ್ಟಿ ಬಗ್ಗೆ ನೇರ ಕಚೇರಿಗೆ ಬಂದು ಮಾಹಿತಿ ನೀಡುವಂತೆ ಕೋರಲಾಗಿತ್ತು.

ಅದರಂತೆ ಯುವಕನೊರ್ವ ಬಂದು ತನ್ನ ಮೊಬೈಲ್‌ನಲ್ಲಿ ಇದ್ದ ತಾತ್ಕಾಲಿಕ ಆಯ್ಕೆಪಟ್ಟಿಯನ್ನು ಹಾಜರುಪಡಿಸಿದ್ದಾರೆ. ಇದರ ಪ್ರಕಾರ ಕಿಡಿಗೇಡಿಗಳು, ಮಂಡಳಿ ಲೆಟರ್ ಹೆಡ್ ಮತ್ತು ಅಧ್ಯಕ್ಷರ ಸಹಿಯನ್ನು ನಕಲಿ ಮಾಡಿ ಸುಳ್ಳು ತಾತ್ಕಾಲಿಕ ಆಯ್ಕೆಪಟ್ಟಿ ಹೊರಡಿಸಿದ್ದಾರೆ. ಇದರಿಂದ ಅಮಾಯಕರಿಗೆ ದಾರಿ ತಪ್ಪಿಸಲಾಗಿದೆ. ಆರೋಪಿಗಳನ್ನು ಪತ್ತೆ ಮಾಡಿ ಕ್ರಮ ತೆಗೆದುಕೊಳ್ಳಬೇಕೆಂದು ದೂರಿನಲ್ಲಿ ಮಂಡಳಿ ಅಧಿಕಾರಿ ಶ್ವೇತಾ, ಮನವಿ ಮಾಡಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.