ನ್ಯೂಸ್

ಜೂನ್​ನಿಂದ 2,909 ಡೆಂಗ್ಯೂ ಪ್ರಕರಣಗಳನ್ನು ದಾಖಲಿಸಿದ ನಾಗಾಲ್ಯಾಂಡ್‌!; ಎರಡು ದಶಕಗಳಲ್ಲಿ ಇದೇ ಅತಿ ಹೆಚ್ಚು

ನಾಗಾಲ್ಯಾಂಡ್‌: ಈ ವರ್ಷದ ಜೂನ್‌ನಿಂದ 2,909 ಡೆಂಗ್ಯೂ ಪ್ರಕರಣಗಳು ದಾಖಲಾಗಿದ್ದು, ಇದು ಸುಮಾರು ಎರಡು ದಶಕಗಳಲ್ಲೇ ಅತಿ ಹೆಚ್ಚು ಎಂದು ನಾಗಾಲ್ಯಾಂಡ್‌ನ ಹಿರಿಯ ಅಧಿಕಾರಿಯೊಬ್ಬರು ಶುಕ್ರವಾರ (ಅ.27) ಮಾಹಿತಿ ನೀಡಿದ್ದಾರೆ.

ಡೆಂಗ್ಯೂ ಪ್ರಕರಣದಲ್ಲಿ ಏರಿಕೆಯಿದ್ದರೂ ಸಹ ಪರಿಸ್ಥಿತಿ ನಿಯಂತ್ರಣದಲ್ಲಿದೆ ಮತ್ತು ಭಯಪಡುವ ಅಗತ್ಯವಿಲ್ಲ ಎಂದು ಆರೋಗ್ಯ ಇಲಾಖೆ ತಿಳಿಸಿದೆ. ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ನಾಗಾಲ್ಯಾಂಡ್‌ನ ರಾಷ್ಟ್ರೀಯ ಆರೋಗ್ಯ ಮಿಷನ್‌ನ ನಿರ್ದೇಶಕ ಇ ಮೋತ್ಸುತುಂಗ್ ಪ್ಯಾಟನ್, "2005 ರಿಂದ ಲಭ್ಯವಿರುವ ದಾಖಲೆಗಳ ಪ್ರಕಾರ, ರಾಜ್ಯದಲ್ಲಿ ಡೆಂಗ್ಯೂ ಪ್ರಕರಣಗಳಲ್ಲಿ ಹೆಚ್ಚಳ ಕಂಡುಬಂದಿದೆ. ಜೂನ್‌ನಿಂದ ಪರೀಕ್ಷಿಸಲಾದ 8,107 ಮಾದರಿಗಳಲ್ಲಿ 2,909 ಸೋಂಕುಗಳು ದೃಢಪಟ್ಟಿವೆ. 1,398 ಪ್ರಕರಣಗಳೊಂದಿಗೆ ದಿಮಾಪುರ್ ಅಗ್ರಸ್ಥಾನದಲ್ಲಿದೆ" ಎಂದು ಹೇಳಿದರು.

"ಇಲಾಖೆ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ. ಇದು ನಿಯಂತ್ರಣದಲ್ಲಿರುವುದರಿಂದ ಭ ಯಪಡುವ ಅಗತ್ಯವಿಲ್ಲ. ಈ ಅವಧಿಯಲ್ಲಿ 2018 ರಲ್ಲಿ 374 ಡೆಂಗ್ಯೂ ಪ್ರಕರಣಗಳು ದಾಖಲಾಗಿವೆ. ಆರೋಗ್ಯ ಇಲಾಖೆಯು ಡೆಂಗ್ಯೂ ಹರಡುವುದನ್ನು ತಡೆಗಟ್ಟಲು ಕಾರ್ಯಾಗಾರಗಳು ಮತ್ತು ಮನೆ ಮನೆಗೆ ತೆರಳಿ ಪ್ರಚಾರಗಳ ಮೂಲಕ ಜಾಗೃತಿ ಅಭಿಯಾನದಲ್ಲಿ ತೊಡಗಿದೆ" ಎಂದು ಪ್ಯಾಟನ್ ಹೇಳಿದ್ದಾರೆ,(ಏಜೆನ್ಸೀಸ್).