ನ್ಯೂಸ್

ಮತದಾನ ಪ್ರಮಾಣ ಹೆಚ್ಚಳ ನಿತೀಶ್​, ನನ್ನ ಆಡಳಿತದ ಕಾರ್ಯಕ್ಷಮತೆಗೆ ಸಾಕ್ಷಿ: ಪ್ರಧಾನಿ ನರೇಂದ್ರ ಮೋದಿ | Narendra Modi

ಪಾಟ್ನಾ: ಬಿಹಾರದ ವಿಧಾನಸಭಾ ಚುನಾವಣೆಯ ಮೊದಲ ಹಂತದ ದಾಖಲೆಯ ಮತದಾನಕ್ಕಾಗಿ ಮತದಾರರನ್ನು ಶ್ಲಾಘಿಸಿರುವ ಪ್ರಧಾನಿ ನರೇಂದ್ರ ಮೋದಿ (Narendra Modi), ಇದು ತಮ್ಮ ಮತ್ತು ಸಿಎಂ ನಿತೀಶ್ ಕುಮಾರ್ ಕಾರ್ಯಕ್ಷಮತೆಯ ಮೇಲೆ ಜನರು ಇಟ್ಟಿರುವ ನಂಬಿಕೆಯನ್ನು ಬಿಂಬಿಸುತ್ತದೆ ಎಂದು ಹೇಳಿದ್ದಾರೆ.

ಔರಂಗಾಬಾದ್‌ನಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ, ಮೊದಲ ಹಂತದ ಚುನಾವಣೆಯಲ್ಲಿ ದಾಖಲೆಯ ಮತದಾನಕ್ಕಾಗಿ ಭಾರತೀಯ ಚುನಾವಣಾ ಆಯೋಗವನ್ನು ಸಹ ಶ್ಲಾಘಿಸಿದರು.

ಮೋದಿ-ನಿತೀಶ್​​ರ ಹಿಂದಿನ ದಾಖಲೆ ಎಲ್ಲರ ಮುಂದೆ ಇದೆ. ನಾನು ಹೇಳಿದ್ದನ್ನು ಮಾಡುತ್ತೇನೆ. ರಾಮ ಮಂದಿರ ನಿರ್ಮಿಸುವುದಾಗಿ ನಾನು ಹೇಳಿದ್ದೆ, ಅದು ಆಯಿತೋ ಇಲ್ಲವೋ?... 370ನೇ ವಿಧಿಯ ಗೋಡೆ ಕುಸಿಯುತ್ತದೆ ಎಂಬ ಭರವಸೆ ನೀಡಿದ್ದೆ. ಅದು ಆಯಿತೋ ಇಲ್ಲವೋ? ಎಂದು ನೆರೆದಿದ್ದವರನ್ನು ಪ್ರಶ್ನಿಸಿದರು. ಮಹಾಮೈತ್ರಿಕೂಟದ ವಿರುದ್ಧ ವಾಗ್ದಾಳಿ ನಡೆಸಿದ ಪ್ರಧಾನಿ ಮೋದಿ, ಕೇಂದ್ರದಲ್ಲಿ ಅಧಿಕಾರ ನಡೆಸಿದ ಕಾಂಗ್ರೆಸ್-ರಾಷ್ಟ್ರೀಯ ಜನತಾದಳ ನಿತೀಶ್ ಕುಮಾರ್​​ರನ್ನು ಮುಖ್ಯಮಂತ್ರಿಯಾಗಿ ಮೊದಲ ಒಂಬತ್ತು ವರ್ಷಗಳಲ್ಲಿ ಸರ್ಕಾರ ನಡೆಸಲು ಅವಕಾಶ ನೀಡಲಿಲ್ಲ, 2014 ರಲ್ಲಿ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಬಿಹಾರದ ಅಭಿವೃದ್ಧಿಗಾಗಿ ಮೂರು ಪಟ್ಟು ಹೆಚ್ಚು ಅನುದಾನ ಬಿಡುಗಡೆ ಮಾಡಿದೆ ಎಂದರು.

ಆರ್‌ಜೆಡಿ ಮತ್ತು ಕಾಂಗ್ರೆಸ್‌ನ ಹಿಂದಿನ ದಾಖಲೆಯನ್ನು ನೋಡಿದ್ದೀರಿ. ಉದ್ಯೋಗಕ್ಕಾಗಿ ಬಿಹಾರದ ಯುವಕರಿಂದ ಭೂಮಿಯನ್ನು ಕಸಿದುಕೊಳ್ಳುವ ಜನರು ಮತ್ತು ಇಂದು ಜಾಮೀನಿನ ಮೇಲೆ ಹೊರಗಿದ್ದಾರೆ. ಏಜೆನ್ಸಿಗಳು ಅವರ ಬಗ್ಗೆ ತನಿಖೆ ನಡೆಸುತ್ತಿವೆ ಎಂದು ಹೇಳಿದರು. ಔರಂಗಾಬಾದ್ ಕೂಡ ನಕ್ಸಲಿಸಂ ಮತ್ತು ಮಾವೋವಾದಿ ಭಯೋತ್ಪಾದನೆಯಿಂದ ಬಳಲುತ್ತಿತ್ತು, ಕತ್ತಲಾಗುವ ಮುನ್ನ ರಸ್ತೆಗಳು ಮೌನವಾಗುತ್ತಿದ್ದ ಆ ದಿನಗಳನ್ನು ನಾವು ಮರೆಯಲು ಸಾಧ್ಯವಿಲ್ಲ ಎಂದು ಹೇಳಿದರು.

ಕಳೆದ 35 ರಿಂದ 40 ವರ್ಷಗಳಲ್ಲಿ ಗೆಲ್ಲದ ಸೀಟುಗಳನ್ನು ಮಾತ್ರ ಆರ್‌ಜೆಡಿ ಕಾಂಗ್ರೆಸ್‌ ಪಕ್ಷಕ್ಕೆ ನೀಡಿದೆ, ಲಾಲು ಪ್ರಸಾದ್ ಯಾದವ್​ರ ಆರ್​ಜೆಡಿ ಕಾಂಗ್ರೆಸ್ ತಲೆಗೆ ಬಂದೂಕು ಇಟ್ಟು ಮುಖ್ಯಮಂತ್ರಿ ಅಭ್ಯರ್ಥಿ ಸ್ಥಾನವನ್ನು ಕಸಿದುಕೊಂಡಿದೆ, ಇಂದಿಗೂ ಕೂಡ ಆರ್‌ಜೆಡಿ ಮತ್ತು ಕಾಂಗ್ರೆಸ್ ಹಲವಾರು ಕ್ಷೇತ್ರಗಳಲ್ಲಿ ಪರಸ್ಪರ ಸ್ಪರ್ಧೆ ನಡೆಸುತ್ತಿವೆ, ಇವರೆಲ್ಲಾ ತಮ್ಮದೇ ಸಹೋದ್ಯೋಗಿಗಳಿಗೆ ದ್ರೋಹ ಬಗೆಯಬಲ್ಲವರು, ಇಂತಹವರು ನಿಮಗೆ ಒಳ್ಳೆಯದನ್ನು ಮಾಡಬಹುದೇ? ಎಂದು ಪ್ರಶ್ನಸಿದರು.(ಏಜೆನ್ಸೀಸ್​)