ಪಾಟ್ನಾ: ಇಡೀ ದೇಶದ ಗಮನವನ್ನು ತನ್ನತ್ತ ಸೆಳೆದುಕೊಂಡಿದ್ದ ಬಿಹಾರ ಚುನಾವಣೆಯ (Bihar Election ) ಮೊದಲ ಹಂತದಲ್ಲಿ 64.66% ಮತದಾನವಾಗಿದ್ದು, ಇದು ರಾಜ್ಯದ ಇತಿಹಾಸದಲ್ಲಿಯೇ ದಾಖಲೆ ಎನ್ನಲಾಗಿದೆ. 2020 ರಲ್ಲಿ ದಾಖಲಾದ 56.1% ಕ್ಕಿಂತ 8.5% ರಷ್ಟು ಏರಿಕೆಯಾಗಿದ್ದು, ಎಲ್ಲ ಪಕ್ಷಗಳ ವಲಯದಲ್ಲೂ ಉತ್ಸಾಹ ಮೂಡಿಸಿದೆ.
ಈ ದಾಖಲೆಯನ್ನು ಎನ್‌ಡಿಎ ಮತ್ತು ಮಹಾಘಟಬಂಧನ್ ಮೈತ್ರಿಕೂಟ ತಮ್ಮ ಅನುಕೂಲಕ್ಕೆ ತಕ್ಕಂತೆ ಅರ್ಥೈಸಿಕೊಂಡಿವೆ. ಗುರುವಾರ (ನ 6) 18 ಜಿಲ್ಲೆಗಳ 121 ಕ್ಷೇತ್ರಗಳಿಗೆ ಮತದಾನ ನಡೆದಿದ್ದು, 3.75 ಕೋಟಿ ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ. ಸುಮಾರು ಮೂರನೇ ಎರಡರಷ್ಟು ಪಾಲ್ಗೊಳ್ಳುವಿಕೆ ಎನ್ನಲಾಗಿದೆ. 2020 ರ ವಿಧಾನಸಭಾ ಚುನಾವಣೆಯಲ್ಲಿ, 3.70 ಕೋಟಿ ಅರ್ಹ ಮತದಾರರಲ್ಲಿ 2.06 ಕೋಟಿ ಜನರು ಮಾತ್ರ ತಮ್ಮ ಮತ ಚಲಾಯಿಸಿದರು.
ಹೆಚ್ಚಿನ ಮತದಾನವು ಆಡಳಿತ ವಿರೋಧಿ ಅಲೆಯ ಸಂಕೇತವೆಂದು ಭಾವಿಸುವುದು ಈ ಹಿಂದಿನಿಂದ ಬಂದಿರುವ ಸಂಪ್ರದಾಯ, ಇದು ತಪ್ಪು ಕಲ್ಪನೆಯಲ್ಲ. ಹಾಗೆಯೇ ಕೆಲವೊಮ್ಮೆ ಇದು ಅಧಿಕಾರ ಪರವಾದ ಉತ್ಸಾಹವನ್ನು ಸಹ ಸೂಚಿಸುತ್ತದೆ.
ಬಿಹಾರದ ಚುನಾವಣೆಯ ಇತಿಹಾಸವನ್ನು ಗಮನಿಸಿದಾಗ ಮತದಾನದ ಪ್ರಮಾಣವು 5% ಕ್ಕಿಂತ ಹೆಚ್ಚಾದಾಗಲೆಲ್ಲಾ ಅದು ಸರ್ಕಾರದ ಬದಲಾವಣೆಗೆ ಕಾರಣವಾಗಿದ್ದು, 1967 ರಲ್ಲಿ ಮತದಾನದ ಪ್ರಮಾಣವು 44.5% ರಿಂದ 51.5% ಕ್ಕೆ ಏರಿಕೆಯಾಗಿದೆ. ಇದು ಸುಮಾರು ಶೇ.7 ರಷ್ಟು ಹೆಚ್ಚಳವಾಗಿದೆ. ಇದಾದ ಬಳಿಕ ಕಾಂಗ್ರೆಸ್ ಅಧಿಕಾರದಿಂದ ಕೆಳಗಿಳಿದು, ಕಾಂಗ್ರೆಸ್ಸೇತರ ಪಕ್ಷಗಳ ಮೈತ್ರಿಕೂಟ ಚುಕ್ಕಾಣಿ ಹಿಡಿಯಿತು.
1980 ರಲ್ಲಿ, ಮತದಾನದ ಪ್ರಮಾಣ ಸುಮಾರು 7% ರಷ್ಟು ಏರಿಕೆಯಾಗಿ, ಇದು ಜನತಾ ಪಕ್ಷದ ಸರ್ಕಾರದ ಪತನಕ್ಕೆ ಕಾರಣವಾಯಿತು, ಮತ್ತೊಮ್ಮೆ ಕಾಂಗ್ರೆಸ್ ಆಡಳಿತ ಪಕ್ಷವಾಯಿತು. 1990 ರಲ್ಲಿ, 56.3% ರಿಂದ 62% ಕ್ಕೆ ಏರಿತು, 5.8% ಹೆಚ್ಚಳ. ಕಾಂಗ್ರೆಸ್ ಸೋತು ಲಾಲು ಪ್ರಸಾದ್ ಯಾದವ್ರ ಜನತಾದಳ ಅಧಿಕಾರಕ್ಕೇರಿತು. ಈಗ ಮತ್ತೇ ದಾಖಲೆಯ ಶೇ 8.5% ಏರಿಕೆಯೊಂದಿಗೆ, ಇತಿಹಾಸ ಪುನರಾವರ್ತನೆಯಾಗುತ್ತದೆಯೇ ಎಂದು ರಾಜಕೀಯ ವಲಯದಲ್ಲಿ ಚರ್ಚೆ ಹುಟ್ಟುಹಾಕಿದೆ.
ಮೊದಲ ಹಂತದಲ್ಲಿ ಮತದಾನವಾದ ಹೆಚ್ಚಿನ ಸ್ಥಾನಗಳು ಗಂಗಾ ನದಿಯ ದಕ್ಷಿಣದಲ್ಲಿದ್ದು, ಈ ಕ್ಷೇತ್ರಗಳು ಬಿಹಾರ ರಾಜಕೀಯದ ಚಿತ್ರಣವನ್ನೇ ನಿರ್ಧರಿಸಬಲ್ಲುವು. (ಮಿಥಿಲಾಂಚಲ್, ಕೋಸಿ, ಮುಂಗೇರ್, ಸರನ್ ಮತ್ತು ಭೋಜ್‌ಪುರ್) ವಲಯಗಳನ್ನು ಒಳಗೊಂಡಿದೆ.
ಇದನ್ನೂ ಓದಿ:ಹೆದ್ದಾರಿಗಳು ಮತ್ತು ಎಕ್ಸ್ಪ್ರೆಸ್ವೇಗಳಲ್ಲಿ ಬೀದಿ ಪ್ರಾಣಿಗಳಿಗೆ ಪ್ರವೇಶವಿಲ್ಲ! ಸುಪ್ರೀಂ ಕೋರ್ಟ್ ತೀರ್ಪು… dog
2020 ರ ಚುನಾವಣೆಯಲ್ಲಿ, ಈ 121 ಸ್ಥಾನಗಳಲ್ಲಿ ಸ್ಪರ್ಧೆ ಜಿದ್ದಾಜಿದ್ದಿನಿಂದ ಕೂಡಿತ್ತು. ಆರ್‌ಜೆಡಿ, ಕಾಂಗ್ರೆಸ್ ಮತ್ತು ಎಡ ಪಕ್ಷಗಳನ್ನು ಒಳಗೊಂಡ ಮಹಾಘಟಬಂಧನ್ 61 ಸ್ಥಾನಗಳನ್ನು ಗೆದ್ದರೆ, ಎನ್‌ಡಿಎ ಮೈತ್ರಿಕೂಟ 59 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿತ್ತು. ತೇಜಸ್ವಿ ಯಾದವ್ ನೇತೃತ್ವದ ಆರ್‌ಜೆಡಿ 42 ಸ್ಥಾನಗಳೊಂದಿಗೆ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿತು, ಬಿಜೆಪಿ (32), ಜೆಡಿಯು (23), ಮತ್ತು ಕಾಂಗ್ರೆಸ್ (8) ಸ್ಥಾನಗಳನ್ನು ಗಳಿಸಿದವು. ಎಡ ಪಕ್ಷಗಳು ಒಟ್ಟಾಗಿ 11 ಸ್ಥಾನಗಳನ್ನು ಗೆದ್ದರೆ, ವಿಐಪಿ, ಎಲ್‌ಜೆಪಿ ಮತ್ತು ಇತರ ಸಣ್ಣ ಪಕ್ಷಗಳು ಉಳಿದ ಸ್ಥಾನಗಳನ್ನು ಹಂಚಿಕೊಂಡಿದ್ದವು.
ಈ ಬಾರಿ ಮೈತ್ರಿಕೂಟಗಳ ಮಿತ್ರಪಕ್ಷಗಳು ಅದಲು ಬದಲಾಗಿರುವುದರಿಂದ, ಸಮೀಕರಣಗಳು ಕೂಡ ಬದಲಾಗಿವೆ. 2020 ರಲ್ಲಿ ಏಕಾಂಗಿಯಾಗಿ ಸ್ಪರ್ಧಿಸಿದ್ದ ಚಿರಾಗ್ ಪಾಸ್ವಾನ್ ಮತ್ತು ಉಪೇಂದ್ರ ಕುಶ್ವಾಹ ಮತ್ತೆ ಎನ್‌ಡಿಎ ಜೊತೆಗಿದ್ದಾರೆ. ಮತ್ತೊಂದೆಡೆ, ಮುಖೇಶ್ ಸಹಾನಿಯವರ ವಿಐಪಿ ಈಗ ಮಹಾ ಮೈತ್ರಿಕೂಟದಲ್ಲಿದೆ. ಜೆಡಿಯು ನಾಯಕ, ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾಪ್ರ ಪಾಲಿಗೆ ಇದು ಬಹುತೇಕ ಕೊನೆಯ ಚುನಾವಣೆಯಾಗಿದ್ದು, ಮೈತ್ರಿಕೂಟಗಳನ್ನೇ ಬದಲಾಯಿಸುವ ಮೂಲಕ ಪಲ್ಟು ಕುಮಾರ್ ಎಂಬ ಹೆಸರು ಪಡೆದಿದ್ದಾರೆ. ಇದು ನಿತೀಶ್ ಪಾಲಿಗೆ ದಾಖಲೆಯ 10 ನೇ ಅವಧಿಗೆ ಮುಖ್ಯಮಂತ್ರಿಯಾಗುವ ಗುರಿ ಇಟ್ಟುಕೊಂಡಿದ್ದಾರೆ.
ಅಂಕಿ ಅಂಶಗಳು ಸ್ಪಷ್ಟವಾಗಿದ್ದು. ಬಿಹಾರದಲ್ಲಿ ಮತದಾನದ ಪ್ರಮಾಣದಲ್ಲಿನ ಪ್ರತಿಯೊಂದು ಏರಿಕೆಯು ಅಧಿಕಾರ ಬದಲಾವಣೆಗೆ ನಾಂದಿ ಹಾಡಿದೆ. ಈಗ ಇತಿಹಾಸ ಪುನರಾವರ್ತನೆಯಾಗುತ್ತದೆಯೋ, ಇಲ್ಲವೋ ಎಂಬುದು ನವೆಂಬರ್ 14 ಬಹಿರಂಗಗೊಳ್ಳಲಿದೆ.(ಏಜೆನ್ಸೀಸ್)